Advertisement

ಮುಂದುವರಿದ ಅಧಿಕಾರ ಹಂಚಿಕೆ ಸೂತ್ರ!

10:12 AM Sep 04, 2019 | Team Udayavani |

ಗದಗ: ಜಿಲ್ಲಾ ಪಂಚಾಯತ್‌ ವ್ಯವಸ್ಥೆಯಲ್ಲಿ ಕುದುರೆ ವ್ಯಾಪಾರಕ್ಕೆ ಕಡಿವಾಣ ಹಾಕುವುದರೊಂದಿಗೆ ಆಡಳಿತ ವ್ಯವಸ್ಥೆ ಗಟ್ಟಿಗೊಳಿಸುವ ಮಹದಾಸೆಯಿಂದ ಹಿಂದಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಚಿವರಾಗಿದ್ದ ಎಚ್.ಕೆ. ಪಾಟೀಲ ಆರ್‌ಡಿಪಿಆರ್‌ ಕಾಯ್ದೆಗೆ ತಿದ್ದುಪಡಿ ತಂದಿದ್ದರು. ಆದರೆ, ಈ ಕಾಯ್ದೆಯ ಮಹದಾಸೆಗೆ ಎಚ್ಕೆ ಅವರ ತವರು ಜಿಲ್ಲೆಯಲ್ಲಿ ಸ್ವಪಕ್ಷೀಯರಿಂದಲೇ ಎಳ್ಳೆನೀರು ಬಿಡುತ್ತಿರುವುದು ವಿಪರ್ಯಾಸ!

Advertisement

ಹಿಂದಿನ ಕಾಂಗ್ರೆಸ್‌ ಸರಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರಾಗಿದ್ದ ಎಚ್.ಕೆ. ಪಾಟೀಲ ಅನುಷ್ಠಾನಕ್ಕೆ ತಂದ ಮಹತ್ವದ ಕಾರ್ಯಗಳಲ್ಲಿ ಆರ್‌ಡಿಪಿಆರ್‌ ಕಾಯ್ದೆ ತಿದ್ದುಪಡಿಯೂ ಒಂದು. ಈ ತಿದ್ದುಪಡಿಯಡಿ ದೇಶದ ಮೊಟ್ಟ ಮೊದಲ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ ಸ್ಥಾಪನೆಗೊಂಡಿದೆ. ಅದರಂತೆ ಜಿ.ಪಂ, ತಾ.ಪಂ. ಹಾಗೂ ಗ್ರಾ.ಪಂ. ಅಧ್ಯಕ್ಷರ ಅಧಿಕಾರವಧಿಯನ್ನು ಐದು ವರ್ಷಗಳಿಗೆ ವಿಸ್ತರಿಸಿ, ಜಿ.ಪಂ ಅಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನಮಾನವನ್ನು ಕಲ್ಪಿಸಿದ್ದರು.

ಈ ಕಾಯ್ದೆ ತಿದ್ದುಪಡಿ ಬಳಿಕ ನಡೆದ ಜಿ.ಪಂ. ಚುನಾವಣೆಯಲ್ಲಿ ಜಿಲ್ಲೆಯ 19 ಸ್ಥಾನಗಳ ಪೈಕಿ ಕಾಂಗ್ರೆಸ್‌ 11 ಸ್ಥಾನಗಳನ್ನು ಬಾಚಿಕೊಂಡು, ಅಧಿಕಾರಕ್ಕೇರಿದೆ. ಆದರೆ, ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ಸದಸ್ಯರಲ್ಲೇ ತೀವ್ರ ಪೈಪೋಟಿ ಇದೆ. ಸದಸ್ಯರ ಓಲೈಕೆಗಾಗಿ ಒಬ್ಬೊಬ್ಬರಿಗೆ 20, 10 ತಿಂಗಳು ಅಧಿಕಾರ ನೀಡುವ ಪರಿಹಾರ ಸೂತ್ರ ಕಂಡುಕೊಂಡಿದೆ. ಆದರೆ, ಇದು ತಮ್ಮದೇ ಸರಕಾರ ಅನುಷ್ಠಾನಕ್ಕೆ ತಂದಿರುವ ಕಾಯ್ದೆಯನ್ನು ಮೂಲೆ ಗುಂಪು ಮಾಡುತ್ತಿದೆ. 8-10 ತಿಂಗಳಿಗೆ ಒಬ್ಬರಂತೆ ಜಿ.ಪಂ ಅಧ್ಯಕ್ಷರ ಬದಲಾವಣೆಯಿಂದ ಆಡಳಿತದಲ್ಲಿ ಹಿಡಿತ ಸಿಗದು ಎಂಬ ವಿಪಕ್ಷಗಳ ನಾಯಕರ ಟೀಕೆಗೆ ಗುರಿಯಾಗುತ್ತಿದೆ.

ಮತ್ತೆ ತ್ರಿಕೋನ ಸ್ಪರ್ಧೆ: ಎಸ್‌.ಪಿ.ಬಳಿಗಾರ ಅವರ ರಾಜೀನಾಮೆಯಿಂದ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೇರಲು ಲಕ್ಕುಂಡಿ ಕ್ಷೇತ್ರದ ಸಿದ್ದು ಪಾಟೀಲ, ಕೊಣ್ಣೂರು ಕ್ಷೇತ್ರದ ರಾಜೂಗೌಡ ಕೆಂಚಗೌಡ್ರ ಹಾಗೂ ಹಿರೇವಡ್ಡಟ್ಟಿ ಕ್ಷೇತ್ರದ ಈರಪ್ಪ ಈಶ್ವರಪ್ಪ ನಾಡಗೌಡ್ರ ಅವರು ಪ್ರಮುಖ ಆಕಾಂಕ್ಷಿಗಳು ಎಂಬ ಹೆಸರು ಕೇಳಿ ಬರುತ್ತಿವೆ. ಈ ಪೈಕಿ ಯಾರಿಗೆ ಅಧ್ಯಕ್ಷ ಗಾದಿ ಒಲಿಯುತ್ತದೆ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಿದೆ.

 

Advertisement

•ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next