Advertisement

ಅತಿವೃಷ್ಟಿ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ

11:47 AM Jul 28, 2018 | Team Udayavani |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ 37.32 ಕೋಟಿ ರೂ. ಗಳಷ್ಟು ನಷ್ಟವುಂಟಾಗಿದ್ದು, ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ತಿಳಿಸಿದರು.

Advertisement

ಜಿ.ಪಂ. ಅದ್ಯಕ್ಷೆ ಸುಜಾತಾ ಕೃಷ್ಣಪ್ಪ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್‌ ಕಚೇರಿ ಸಭಾಂಗಣದಲ್ಲಿ ನಡೆದ ಮುಂದುವರೆದ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಜಿಲ್ಲಾ ಪಂಚಾಯತ್‌ ಗೆ ಸೇರಿದ ರಸ್ತೆ, ಚರಂಡಿ, ಸೇತುವೆಗಳು ಹಾಳಾಗಿ 26.18 ಕೋಟಿ ರೂ., ಲೋಕೋಪಯೋಗಿ ಇಲಾಖೆಗೆ 8 ಕೋಟಿ ರೂ. ಹಾಗೂ ಮೆಸ್ಕಾಂಗೆ 2.84 ಕೋಟಿ ರೂ. ಗಳಷ್ಟು ಹಾನಿಯಾಗಿದೆ ಎಂದರು.

ಜಿಲ್ಲೆಯ ಮಲೆನಾಡು ಭಾಗದಲ್ಲಿ ಅತಿವೃಷ್ಟಿಯಿಂದ ಹಾನಿಯಾಗಿದ್ದರೆ, ಬಯಲು ಭಾಗಗಳಲ್ಲಿ ಅನಾವೃಷ್ಟಿಯಿಂದ ನಷ್ಟವಾಗಿದೆ. ಈ ಬಗ್ಗೆಯೂ ವರದಿಯನ್ನು ಸಿದ್ದಪಡಿಸಲಾಗುತ್ತಿದೆ. ಶೀಘ್ರದಲ್ಲಿಯೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಕುಡಿಯುವ ನೀರಿನ ಕಾಮಗಾರಿಗಳನ್ನು ನಿರ್ವಹಿಸಲು ಅನುದಾನದ ಕೊರತೆ ಇಲ್ಲ. ಬಯಲು ಭಾಗದಲ್ಲಿ ಕುಡಿಯುವ ನೀರಿಗೆ ಅಗತ್ಯವಿರುವ ಕಾಮಗಾರಿ
ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕರಗಡ ಕುಡಿಯುವ ನೀರಿನ ಯೋಜನೆ ಕಾಮಗಾರಿಯಡಿ ದೇವಿಕೆರೆ ತುಂಬಿ ಕೋಡಿ ಬಿದ್ದಿದೆ. ನಾಲೆ ಮೂಲಕ ನೀರು ಬಿಡಲಾಗಿದೆ. ಆದರೆ ಕೆಲವೆಡೆ ಮಣ್ಣು ಕುಸಿದಿರುವುದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ. ಮೋಟಾರ್‌ ಮೂಲಕ ನೀರೆತ್ತಲು ಶಾಸಕ ಸಿ.ಟಿ.ರವಿ ಸರ್ಕಾರದಿಂದ ಅನುಮತಿ ಪಡೆದುಕೊಂಡಿದ್ದಾರೆ. ಆದರೆ ಸಣ್ಣ ನೀರಾವರಿ ಇಲಾಖೆಯವರು ಅನುದಾನದ ಕೊರತೆ ಎನ್ನುತ್ತಿದ್ದಾರೆ ಎಂದು ಜಿ.ಪಂ. ಸದಸ್ಯ ಬೆಳವಾಡಿ ರವೀಂದ್ರ ತಿಳಿಸಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ, ಕೂಡಲೆ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್‌ ಜೊತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಮೂಡಿಗೆರೆ ತಾಪಂ ಅಧ್ಯಕ್ಷ ರತನ್‌ ಮಾತನಾಡಿ, ಚಾರ್ಮಾಡಿ ಘಾಟಿ ರಸ್ತೆಗೆ ಪರ್ಯಾಯವಾಗಿ ನಿರ್ಮಿಸಲು ಉದ್ದೇಶಿಸಿರುವ ರಸ್ತೆ ಕಾಮಗಾರಿಯನ್ನು ಕೂಡಲೆ ಆರಂಭಿಸಬೇಕು. ಇದಕ್ಕೆ ಯಾರೇ ಅಡ್ಡಿಪಡಿಸಿದರೂ ಬಿಡಬಾರದು. ಈ ರಸ್ತೆ ಪೂರ್ಣಗೊಂಡರೆ ಜನತೆಗೆ ಸಾಕಷ್ಟು ಅನುಕೂಲವಾಗುತ್ತದೆ. ಪ್ರತಿವರ್ಷ ಮಳೆಗಾಲದಲ್ಲಿ ಆಗುವ ತೊಂದರೆ ತಪ್ಪುತ್ತದೆ ಎಂದು ಹೇಳಿದರು.

Advertisement

ಇದಕ್ಕೆ ಜಿ.ಪಂ. ಸದಸ್ಯೆ ಅಮಿತಾ ಮುತ್ತಪ್ಪ ಈ ಮಾತಿಗೆ ಧ್ವನಿಗೂಡಿಸಿದರು. ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಮಾತನಾಡಿ, ಈ ಕಾಮಗಾರಿಯನ್ನು ಆರಂಭಿಸಲು ವಿಸ್ತ್ರತ ವರದಿ ಸಿದ್ದಪಡಿಸಲಾಗಿದೆ. ಶೀಘ್ರದಲ್ಲಿಯೇ ಕಾಮಗಾರಿ ನಡೆಯುವ ತಾಲೂಕುಗಳಲ್ಲಿ ಸಭೆ ನಡೆಸಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದರು.

ಜಿಲ್ಲಾ ಪಂಚಾಯತ್‌ ಸದಸ್ಯರುಗಳಾದ ಪ್ರಭಾಕರ್‌, ಕವಿತಾ ಲಿಂಗರಾಜು, ಮಹೇಶ್‌ ಒಡೆಯರ್‌, ಶರತ್‌ ಕೃಷ್ಣಮೂರ್ತಿ ಇತರರು ಚರ್ಚೆಯಲ್ಲಿ ಭಾಗವಹಿಸಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಆಗಿರುವ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದು, ಕೂಡಲೆ ಕಾರ್ಯಪ್ರವೃತ್ತರಾಗಿ ಜನರ ಸಮಸ್ಯೆ ಪರಿಹರಿಸುವಂತೆ ಕೋರಿದರು. 

ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ನಿರ್ಧಾರ 
ಚಿಕ್ಕಮಗಳೂರು: ಜಿಲ್ಲೆಯಲ್ಲಿರುವ ಜಿಲ್ಲಾ ಪಂಚಾಯತ್‌ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು. ಜಿ.ಪಂ. ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಮುಂದುವರೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯೆ ಕವಿತಾ ಲಿಂಗರಾಜು, ಜಾಗರ ಹೋಬಳಿಯ ಸಿದ್ದಾಪುರ ರಸ್ತೆಯು ಮಳೆಯಿಂದಾಗಿ ತೀವ್ರ ಹಾನಿಯಾಗಿದೆ. 

ರಸ್ತೆಯಲ್ಲಿ ಸಂಚರಿಸಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ಬಸ್‌ ಸಂಚಾರವನ್ನೂ ಸ್ಥಗಿತಗೊಳಿಸಲಾಗಿದ್ದು, ಮಕ್ಕಳು ಶಾಲೆಗೆ ಹೋಗಲು 4-5 ಕಿ.ಮೀ. ನಡೆದುಕೊಂಡು ಹೋಗುವಂತಾಗಿದೆ ಎಂದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಪ್ರಭಾಕರ್‌, ಮಲೆನಾಡು ಭಾಗದ ಎಲ್ಲ ರಸ್ತೆಗಳ ಪರಿಸ್ಥಿತಿಯೂ ಇದೇ ಆಗಿದೆ. ಮಳೆ ತೀವ್ರವಾಗಿ ಸುರಿಯುತ್ತಿರುವುದಲ್ಲದೆ, ಟಿಂಬರ್‌ ಲಾರಿಗಳ ಸಂಚಾರವೂ ಹೆಚ್ಚಾಗಿರುವುದರಿಂದ ರಸ್ತೆಗಳು ಮತ್ತಷ್ಟು ಹಾಳಾಗುತ್ತಿವೆ.

ರಸ್ತೆಗಳನ್ನು ಸರಿಪಡಿಸಲು ಜಿಲ್ಲಾ ಪಂಚಾಯತ್‌ನಲ್ಲಿ ಅನುದಾನವಿಲ್ಲ. ಕೂಡಲೆ ಜಿ.ಪಂ. ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಬೇಕು. ಆಗ ರಸ್ತೆಗಳನ್ನು ದುರಸ್ತಿಪಡಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್‌ ಮಾತನಾಡಿ, ಜಿ.ಪಂ. ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ರಸ್ತೆ ಕನಿಷ್ಟ 10 ಕಿ.ಮೀ. ಉದ್ದವಿರಬೇಕು, 12 ಮೀ. ಅಗಲವಿರಬೇಕು. ಇಂತಹ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸಿದರೆ, ಸ್ಥಳ ಪರಿಶೀಲಿಸಿ ಮುಖ್ಯ ಇಂಜಿನಿಯರ್‌ ಅವರಿಗೆ ಪ್ರಸ್ತಾವನೆ ಸಲ್ಲಿಸಬಹುದು ಎಂದರು.

ಸದಸ್ಯ ಪ್ರಭಾಕರ್‌ ಮಾತನಾಡಿ, ಈ ನಿಯಮವನ್ನು ನೋಡಿದರೆ ಮಲೆನಾಡು ಭಾಗದಲ್ಲಿ ಯಾವುದೇ ರಸ್ತೆಯನ್ನು
ಮೇಲ್ದರ್ಜೆಗೇರಿಸಲು ಆಗುವುದಿಲ್ಲ. ಅಗತ್ಯವಿರುವ ರಸ್ತೆಗಳ ಪಟ್ಟಿ ಮಾಡಿ ಪ್ರಸ್ತಾವನೆ ಸಲ್ಲಿಸಲು ಮುಂದಾಗುವಂತೆ ಮನವಿ ಮಾಡಿದರು. ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಮಾತನಾಡಿ, ಕೂಡಲೆ ಸೂಕ್ತ ರಸ್ತೆಗಳ ಪಟ್ಟಿ ಮಾಡಿ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸೋಣ ಎಂದರು.

ಸದಸ್ಯ ಬೆಳವಾಡಿ ರವೀಂದ್ರ ಮಾತನಾಡಿ, ನೀಲಗಿರಿ ಮತ್ತು ಅಕೇಶಿಯಾ ಮರಗಳನ್ನು ಬೆಳಸದಂತೆ ಸರ್ಕಾರವೇ ಆದೇಶಿಸಿದೆ. ಆದರೆ ಸರ್ಕಾರದ ಕಾನೂನು ಮೀರಿ ಅರಣ್ಯ ಇಲಾಖೆ ವತಿಯಿಂದಲೇ ಲಕ್ಕಮ್ಮನಹಳ್ಳಿ, ಸಿಂದಗೆರೆ, ಕರಡಿಗವಿಗುಡ್ಡ ಸೇರಿದಂತೆ ಹಲವೆಡೆಗಳಲ್ಲಿ ನೀಲಗಿರಿ ಸಸಿಗಳನ್ನು ನೆಡಲಾಗಿದೆ ಎಂದು ದೂರಿದರು.
 
ಇದಕ್ಕೆ ಪ್ರತಿಕ್ರಿಯಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್‌, ಇಲಾಖೆಯಿಂದ ನೀಲಗಿರಿ ಅಥವಾ ಅಕೇಶಿಯಾ ಸಸಿಗಳನ್ನು ನೆಟ್ಟಿಲ್ಲ ಎಂದಾಗ, ಸಿ.ಇ.ಒ. ಸತ್ಯಭಾಮ ಮಾತನಾಡಿ, ಈ ಬಗ್ಗೆ ಸದಸ್ಯರು ತಮ್ಮ ಗಮನಕ್ಕೂ ತಂದಿದ್ದರು. ಸಸಿಗಳ ಭಾವಚಿತ್ರಗಳನ್ನೂ ನೀಡಿದ್ದಾರೆ. ಇಷ್ಟೆಲ್ಲ ಇದ್ದರೂ ಇಲಾಖೆಯಿಂದ ನೆಟ್ಟಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ಕುಮಾರ್‌ ಮಾತನಾಡಿ, ತಾವು ಇತ್ತೀಚೆಗಷ್ಟೆ ಅಧಿಕಾರ ವಹಿಸಿಕೊಂಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ಹೇಳಿದರು.

ಸದಸ್ಯ ಮಹೇಶ್‌ ಒಡೆಯರ್‌ ಮಾತನಾಡಿ, ಸರ್ಕಾರವೇ ನೀಲಗಿರಿ ಬೆಳೆಸದಂತೆ ಆದೇಶಿಸಿದೆ. ಆದರೆ ಜಿಲ್ಲೆಯ ಬಯಲು ಭಾಗದ ಸಾವಿರಾರು ಎಕರೆ ಪ್ರದೇಶಗಳನ್ನು ಎಂ.ಪಿ.ಎಂ. ಸಂಸ್ಥೆಗೆ ನೀಡಿದೆ. ಯಾರನ್ನು ಕೇಳಿದರೂ ಇದು ಎಂ.ಪಿ.ಎಂ.ಗೆ ಸೇರಿದ್ದು ಎಂಬ ಉತ್ತರ ನೀಡುತ್ತಾರೆ. ಕೂಡಲೆ ಎಂ.ಪಿ.ಎಂ. ಸಂಸ್ಥೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯಿಂದ ಈ ಬಗ್ಗೆ ವಿವರಣೆ ಪಡೆದುಕೊಳ್ಳಿ ಎಂದು ಹೇಳಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಎಲ್‌.ವೈಶಾಲಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next