ಪ್ರಧಾನಿ ನರೇಂದ್ರ ಮೋದಿ ಅವಧಿಗಿಂತ ಮುಂಚಿತವಾಗಿ ಬಂದ ದೀಪಾವಳಿ ಹಬ್ಬ ಎಂದು ಬಣ್ಣಿಸಿರುವ ಜಿಎಸ್‌ಟಿ ಸುಧಾರಣೆ ಕುಸಿಯುತ್ತಿರುವ ಆರ್ಥಿಕತೆ ಮೇಲೆತ್ತಲು ತುಸು ಸಹಕಾರಿಯಾಗುವ ನಿರೀಕ್ಷೆಯಿಟ್ಟುಕೊಳ್ಳಲಾಗಿದೆ. ಕಳೆದ ವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ 27 ವಸ್ತುಗಳು ಮತ್ತು ಸೇವೆಗಳ ತೆರಿಗೆಯನ್ನು ಕಡಿಮೆ ಮಾಡಲಾಗಿದೆ. ಇದರಲ್ಲಿ ಡೀಸೆಲ್ ಎಂಜಿನ್ ಬಿಡಿ ಭಾಗಗಳು, ಬ್ರ್ಯಾಂಡ್ ರಹಿತ ಆಯುರ್ವೇದ ಔಷಧ, ಬ್ರ್ಯಾಂಡ್ ರಹಿತ ಕುರುಕಲು ತಿಂಡಿಗಳು ಮತ್ತು ಎಸಿ ರಹಿತ ಹೊಟೇಲ್ ಊಟ ಸೇರಿವೆ. 1.5 ಕೋ. ರೂ. ತನಕ ವಹಿವಾಟು ನಡೆಸುವ ಉದ್ಯಮಗಳು ಪ್ರತಿ ತಿಂಗಳು ಬದಲಾಗಿ ಮೂರು ತಿಂಗಳಿಗೊಮ್ಮೆ ತೆರಿಗೆ ವಿವರ ಸಲ್ಲಿಸಲು ಅವಕಾಶ ನೀಡಿರುವುದು ಮತ್ತು ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆದಾರರಿಗೆ ಪರಿಹಾರ ಕೋರಲು ಇರುವ ಮಿತಿಯನ್ನು 75 ಲಕ್ಷದಿಂದ 1 ಕೋ.ರೂ.ಗೇರಿಸುವುದು ಶುಕ್ರವಾರ ಸಭೆಯಲ್ಲಿ ಕೈಗೊಂಡಿರುವ ಎರಡು ಪ್ರಮುಖ ನಿರ್ಧಾರಗಳು. ಇದರ ಜತೆಗೆ 50,000 ರೂ. ಮೇಲ್ಪಟ್ಟ ಆಭರಣ ಖರೀದಿಗೆ ಪ್ಯಾನ್ ಸಂಖ್ಯೆ ನೀಡುವುದನ್ನು ಕಡ್ಡಾಯಗೊಳಿಸಿದ ನಿಯಮ ರದ್ದು ಮಾಡುವ ಮೂಲಕ ಚಿನ್ನಾಭರಣ ವ್ಯಾಪಾರಿಗಳ ಪ್ರಮುಖ ಬೇಡಿಕೆಯೊಂದನ್ನು ಈಡೇರಿಸಿದಂತಾಗಿದೆ.
ಮೂರು ತಿಂಗಳಿಗೊಮ್ಮೆ ತೆರಿಗೆ ವಿವರ ಸಲ್ಲಿಸುವ ನಿಯಮದಿಂದಾಗಿ ದೇಶದ ಸಣ್ಣ ಉದ್ದಿಮೆ ವಲಯಕ್ಕೆ ಪ್ರಯೋಜನವಾಗಲಿದೆ. ಶೇ. 90 ಉದ್ಯಮಗಳು ಹಾಗೂ ಇತರ ವಹಿವಾಟುಗಳು ಈ ವ್ಯಾಪ್ತಿಯಲ್ಲಿ ಬರುತ್ತವೆ. ಅರ್ಥಾತ್ ಇನ್ನು ಶೇ. 10 ಉದ್ಯಮಗಳು ಮಾತ್ರ ಪ್ರತಿ ತಿಂಗಳು ತೆರಿಗೆ ವಿವರ ಸಲ್ಲಿಸಬೇಕಾಗುತ್ತದೆ. ಜಿಎಸ್‌ಟಿಯಿಂದ ಹೆಚ್ಚು ಸಮಸ್ಯೆಯಾಗಿದ್ದೇ ಸಣ್ಣ ಮತ್ತು ಮಧ್ಯಮ ಮಟ್ಟದ ಉದ್ಯಮಗಳಿಗೆ. ಇವುಗಳಿಗೆ ಬಿದ್ದ ಹೊಡೆತದ ಪರಿಣಾಮವಾಗಿಯೇ ದೇಶದ ಆರ್ಥಿಕತೆ ಕುಸಿಯಲು ತೊಡಗಿತ್ತು. ದೇಶದ ಜಿಡಿಪಿ ದರಕ್ಕೆ ಹೆಚ್ಚಿನ ಕೊಡುಗೆ ಸಲ್ಲುವುದು ಕೂಡ ಈ ವಲಯದಿಂದ. ಅಸಂಘಟಿತ ವಲಯದ ಕೋಟಿಗಟ್ಟಲೆ ಜನರಿಗೆ ಉದ್ಯೋಗ ಸಿಗುವುದು ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ. ಮೂರು ತಿಂಗಳಿಗೊಮ್ಮೆ ತೆರಿಗೆ ವಿವರ ಸಲ್ಲಿಸುವ ಅನುಕೂಲದಿಂದಾಗಿ ತೆರಿಗೆ ಪದ್ಧತಿ ಜಿಎಸ್‌ಟಿ ಪೂರ್ವ ವ್ಯವಸ್ಥೆಯಂತೆಯೇ ಆಗಿದೆ ಎಂಬ ಟೀಕೆಯನ್ನು ಸರಕಾರ ಆವಗಣಿಸುವಂತಿಲ್ಲ.
ಹಿಂದೆ ದೊಡ್ಡ ಉದ್ಯಮ ಸಂಸ್ಥೆಗಳು ತಾವು ವ್ಯವಹಾರ ನಡೆಸುವ ಜಿಎಸ್‌ಟಿಯಡಿಯಲ್ಲಿ ನೋಂದಾಯಿಸ್ಪಡದ ಸಂಸ್ಥೆಗಳ ಪರವಾಗಿ ತಾವೇ ತೆರಿಗೆ ಪಾವತಿಸಬೇಕಿತ್ತು. ರಿವರ್ಸ್ ಚಾರ್ಜ್ ಮೆಕಾನಿಸಂ ಪದ್ಧತಿಯಿಂದ ದೊಡ್ಡ ಉದ್ಯಮಗಳಿಗೆ ಹೆಚ್ಚುವರಿ ತೆರಿಗೆ ಹೊರೆ ಬೀಳುತ್ತಿತ್ತು. ಇದನ್ನು ತಪ್ಪಿಸಲು ದೊಡ್ಡ ಸಂಸ್ಥೆಗಳು ಜಿಎಸ್‌ಟಿ ನೋಂದಣಿ ಮಾಡಿಕೊಳ್ಳದ ಸಂಸ್ಥೆಗಳ ಜತೆಗೆ ವ್ಯವಹಾರ ತಪ್ಪಿಸಿಕೊಳ್ಳುತ್ತಿದ್ದವು. ಇದರಿಂದಾಗಿ ದೊಡ್ಡ ಮತ್ತು ಸಣ್ಣ ಉದ್ದಿಮೆಗಳ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿರುವುದನ್ನು ಗಮನಿಸಿದ ಸರಕಾರ ಮುಂಬರುವ ಮಾರ್ಚ್ ತನಕ ಅದಕ್ಕೆ ವಿನಾಯಿತಿ ನೀಡಿದೆ. ಇದರಿಂದಾಗಿ ದೊಡ್ಡ ಉದ್ದಿಮೆಗಳಿಗೆ ಸಣ್ಣ ಮಟ್ಟದ ನೆಮ್ಮದಿ ನೀಡಿದಂತಾಗಿದೆ. ರಫ್ತು ಉದ್ಯಮಿಗಳಿಗೆ ಜಿಎಸ್‌ಟಿ ಲೆವಿಯಿಂದ 6ತಿಂಗಳ ಮಟ್ಟಿಗೆ ವಿನಾಯಿತಿ ನೀಡಿರುವಂತಹ ಕ್ರಮದಿಂದ ರಫ್ತು ಚಟುವಟಿಕೆಗಳು ಚೇತರಿಸಿಕೊಳ್ಳುವ ನಿರೀಕ್ಷೆಯಿದೆ.
ಜಿಡಿಪಿ ಜಾರಿಯಾದ ಮೂರು ತಿಂಗಳಲ್ಲಿ ಕಂಡು ಬಂದ ತೀವ್ರ ಆರ್ಥಿಕ ಕುಸಿತ ಮತ್ತು ಇದರ ಪರಿಣಾಮವಾಗಿ ಜಿಡಿಪಿ ಕುಸಿತವಾಗಿರುವುದು ಜಿಎಸ್‌ಟಿ ಪರಿಷ್ಕರಣೆಯನ್ನು ಅನಿವಾರ್ಯವಾಗಿಸಿತು. ಜಿಡಿಪಿಯಿಂದ ಭಾರತ ಜಗತ್ತಿನಲ್ಲೇ ಅತಿ ಕಡಿಮೆ ಬೆಲೆಗಳನ್ನು ಹೊಂದಿರುವ ದೇಶ ಎಂಬ ಕನಸುಗಳನ್ನು ಬಿತ್ತಲಾಗಿತ್ತು. ಆದರೆ ಈ ಮೂರು ತಿಂಗಳಲ್ಲಿ ಅಂತಹ ಯಾವುದೇ ಬೆಲೆ ಇಳಿಕೆ ಕಾಣಿಸಿಲ್ಲ. ತೆರಿಗೆ ವಂಚನೆ ತಡೆದು ದೇಶದ ಬೊಕ್ಕಸ ಸಮೃದ್ಧವಾಗಿ ನಮ್ಮ ಬದುಕು ಹಸನಾಗುತ್ತದೆ ಎಂಬ ಜನಸಾಮಾನ್ಯರ ಕಲ್ಪನೆಗಳು ಹುಸಿಯಾಗಿವೆ. ಸ್ವತಂತ್ರ ಭಾರತದ ಕ್ರಾಂತಿಕಾರಿ ನಿರ್ಧಾರವೊಂದು ಈ ರೀತಿಯಾಗಿ ಉಲ್ಟಾ ಹೊಡೆಯುವ ಸಾಧ್ಯತೆಯನ್ನು ಸರಕಾರ ನಿರೀಕ್ಷಿಸಿರಲಿಲ್ಲ. ಜನರ ಅಸಂತೋಷ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ತುರ್ತಾಗೆ ಏನಾದರೂ ಮಾಡುವ ಅನಿವಾರ್ಯತೆ ಎದುರಾದ ಕಾರಣ ಸದ್ಯಕ್ಕೆ ಸರಕಾರ ಭಾರೀ ಪ್ರಮಾಣದ ವಿನಾಯಿತಿಗಳನು ನೀಡಿದೆ. ಆದರೆ ಇದರಿಂದ ಒಟ್ಟಾರೆ ಜಿಎಸ್‌ಟಿಯ ಆಶಯವೇ ವಿಫಲವಾಗಬಹುದು ಎಂದು ಆರ್ಥಿಕ ತಜ್ಞರು ಎಚ್ಚರಿಸುತ್ತಿದ್ದಾರೆ.