Advertisement

ದುಶ್ಚಟ ಮುಕ್ತ ಜೀವನ ನಡೆಸಲು ಮುಂದಾಗಿ: ಯೋಗೀಶ್‌ ಚಕ್ಕೆರೆ

11:15 AM Jul 03, 2019 | Suhan S |

ಚನ್ನಪಟ್ಟಣ: ವಿದ್ಯಾರ್ಥಿಗಳು ಸ್ವೇಚ್ಛೆಯಿಂದ, ಸಹವಾಸ ದೋಷದಿಂದ ಹಾಗೂ ಕ್ಷಣಿಕ ಸಂತೋಷಕ್ಕಾಗಿ ಆಕರ್ಷಣೆಗೊಳಗಾಗಿ ಮಾದಕವಸ್ತುಗಳಿಗೆ ಬಲಿಯಾಗ ಬಾರದು ಎಂದು ವಿಚಾರವಾದಿ ಯೋಗೀಶ್‌ ಚಕ್ಕೆರೆ ತಿಳಿಸಿದರು.

Advertisement

ತಾಲೂಕಿನ ಮಳೂರು ಪಟ್ಟಣ ಗ್ರಾಮದ ಭಾಗ್ಯಶ್ರೀ ಅನುದಾನಿತ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ‘ಸ್ವಾಸ್ಥ್ಯ ಸಂಕಲ್ಪ’ ಉದ್ಘಾಟಿಸಿ ಮಾತನಾಡಿದರು. ಸುಸಂಸ್ಕೃತರಾಗಿ, ಸಮಾಜದ ಸಭ್ಯ ನಾಗರಿಕರಾಗಿ ದುಶ್ಚಟ ಮುಕ್ತ ಜೀವನ ನಡೆಸಬೇಕೆಂದರು.

ಯುವ ಸಮುದಾಯವೇ ಹೆಚ್ಚು:ಮಾದಕ ವಸ್ತು ಎಂದರೆ ನಶೆಗೆ ಒಳಗಾಗುವ ಪದಾರ್ಥಗಳಾಗಿದ್ದು, ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳ ಸೇವನೆಯಲ್ಲಿ ಯುವ ಸಮುದಾ ಯವೇ ಹೆಚ್ಚು ಭಾಗಿಯಾಗುತ್ತಿದೆ ಎಂದರು.

ಯುವಕರು ದುಶ್ಚಟಗಳಿಗೆ ದಾಸರಾಗಿ ತಮ್ಮ ಅಮೂಲ್ಯ ಜೀವನ ಹಾಳುಮಾಡಿಕೊಳ್ಳುತ್ತಿದ್ದಾರೆ. ಕುಡಿತವೊಂದೇ ಅಲ್ಲದೇ ಡ್ರಗ್ಸ್‌, ಆಫೀಮು, ಗಾಂಜಾ, ಸಿಗರೇಟು ಹಾಗೂ ಮಹಿಳೆಯರು ಬಳಕೆ ಮಾಡುವ ನೈಲ್ ಪಾಲಿಷ್‌, ವೈಟ್ನಾರು ಇಂತಹ ವಸ್ತುಗಳ ಬಳಕೆ ಮಾಡಿ ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆಂದರು.

2 ಲಕ್ಷ ಮಂದಿ ಸಾವು: ಕುಡಿತವಿಲ್ಲದೇ ಇರುವ ಕುಟುಂಬಗಳನ್ನು ಹುಡುಕಿದರೂ ಸಿಗದೇ ಇರುವ ಸ್ಥಿತಿ ಎದುರಾಗಿದೆ. ಇಂದು ದೇಶದಲ್ಲಿ ಮಾದಕ ವಸ್ತುಗಳಿಗೆ ದಾಸರಾಗಿ ಪ್ರತಿ ವರ್ಷ 10 ಲಕ್ಷ ಜನರು ಮರಣ ಹೊಂದುತ್ತಿದ್ದು ರಾಜ್ಯದಲ್ಲಿ ಸರಾಸರಿ ಒಂದರಿಂದ ಎರಡು ಲಕ್ಷ ಜನರು ಒಂದು ವರ್ಷದಲ್ಲಿ ಸಾವಿಗೀಡಾ ಗುತ್ತಿದ್ದಾರೆಂದರು.

Advertisement

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಮದ್ಯವರ್ಜನ ಶಿಬಿರ, ಶಾಲಾ-ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ, ವಿಚಾರ ಸಂಕಿರಣ ಏರ್ಪಡಿಸಿ ಮಾದಕವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು, ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಳೂರು ವಲಯದ ಮೇಲ್ವಿಚಾರಕರಾದ ಶಿವರಂಜನ್‌ ಮಾತನಾಡಿ, ಮಾಧ್ಯಮಗಳ ಮೂಲಕ ಮಾದಕ ವಸ್ತು ಮಾರಾಟದ ಜಾಲ ಯುವ ಜನತೆ ಅಡ್ಡ ದಾರಿಗೆ ಹೋಗುವಂತೆ ಮಾಡುತ್ತಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನಜಾಗೃತಿ ವೇದಿಕೆ ವತಿಯಿಂದ ಶಾಲಾ-ಕಾಲೇಜುಗಳಲ್ಲಿ ವರ್ಷಕ್ಕೆ ಒಂದು ಸಾವಿರ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳನ್ನು ಆಯೋಜಿಸಿ ಒಂದು ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಆದರ್ಶ ವ್ಯಕ್ತಿತ್ವವಿರಲಿ:ಶಾಲಾ ಮುಖ್ಯೋ ಪಾಧ್ಯಾಯ ಪಿ.ನಾಗರಾಜು ಮಾತನಾಡಿ, ಪ್ರಪಂಚದಲ್ಲಿ ಕತ್ತಲು-ಬೆಳಕಿನಂತೆ ಸತ್ಕಾರ್ಯ ಹಾಗೂ ದುಷ್ಕೃತ್ಯ ಮಾಡಲು ಸಮಾನ ಅವಕಾಶಗಳಿವೆ. ವಿದ್ಯಾರ್ಥಿಗಳು ಒಳ್ಳೆಯದನ್ನು ಆಯ್ಕೆ ಮಾಡಿಕೊಳ್ಳಬೇಕು, ಧರ್ಮ ಮಾರ್ಗದಲ್ಲಿ ನಡೆದು ಸದಾ ಜಾಗೃತರಾಗಿ, ಎಂದೂ ದುಶ್ಚಟಗಳಿಗೆ ಬಲಿಯಾಗದೇ ಆದರ್ಶ ವ್ಯಕ್ತಿತ್ವ ನಿಮ್ಮದಾಗಿಸಿಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪದ ಪ್ರಮಾಣ ವಚನ ಬೋಧಿಸಲಾಯಿತು. ವಿದ್ಯಾರ್ಥಿಗಳು, ಮದ್ಯಪಾನ ಮಾದಕ ದ್ರವ್ಯಗಳ ಆಕರ್ಷಣೆಗೊಳಗಾಗದೆ, ದುಶ್ಚಟಗಳಿಂದ ದೂರವಾಗಿ, ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು. ಉತ್ತಮ ಸಂಸ್ಕಾರವಂತರಾಗಿ ಆದರ್ಶ ವಿದ್ಯಾರ್ಥಿಗಳಾಗಿ ಸಮಾಜದ ಸತಜೆಗಳಾಗಿ ಉತ್ತಮ ಜೀವನ ನಡೆಸುವುದಾಗಿ ಗಣ್ಯರ ಎದುರು ಪ್ರಮಾಣ ವಚನ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಸೇವಾ ಪ್ರತಿನಿಧಿ ರಜನಿ , ಶಿಕ್ಷಕರಾದ ಪಾರ್ಥ, ಭಾಸ್ಕರ್‌ , ನಾಗೇಂದ್ರ, ವೇದಾವತಿ, ನಾಗರಾಜ್, ಶ್ರೀಕಾಂತ್‌, ಆನಂದಪ್ಪ, ರಾಜೇಶ್ವರಿ ,ಜಯಪ್ಪಾರಾಧ್ಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next