ಗೋಕಾಕ: ಪ್ರಕೃತಿಯ ಸಮತೋಲನ ಕಾಪಾಡಿ ಉತ್ತಮ ಪರಿಸರವನ್ನು ಮುಂದಿನ ಪೀಳಿಗೆಗೆ ನೀಡಬೇಕಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ. ದೇವರಾಜ ಹೇಳಿದರು. ನಗರದ ಹೊರವಲಯದ ನೂತನ ಬಡಾವಣೆಯಲ್ಲಿ ಶುಕ್ರವಾರ ರೋಟರಿ ಸಂಸ್ಥೆಯವರು ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಹೆಚ್ಚುತ್ತಿರುವ ಜನಸಂಖ್ಯೆಗೆ ಮೂಲ ಸೌಲಭ್ಯ ಕಲ್ಪಿಸಲು ಅರಣ್ಯ ಪ್ರದೇಶ ನಾಶ ಮಾಡುತ್ತಿದ್ದು, ಇಂದು ಪ್ರಕೃತಿ ಸಮತೋಲನ ಕಾಪಾಡಲು ಅರಣ್ಯ ಉಳಿಸಿ ಬೆಳೆಸಬೇಕಾಗಿದೆ. ಇದಕ್ಕೆ ಸಂಘ ಸಂಸ್ಥೆಗಳು ಇಲಾಖೆಯೊಂದಿಗೆ ಕೈಜೋಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಸಾರ್ವಜನಿಕರು ಹಾಗೂ ರೈತರು ಜಾಗೃತರಾಗಿ ಅರಣ್ಯ ಉಳಿಸಿ ಬೆಳೆಸಿ ಪರಿಸರ ರಕ್ಷಣೆ ಮಾಡಲು ಮುಂದಾಗುವಂತೆ ಕರೆ ನೀಡಿದರು. ರೋಟರಿ ಅಧ್ಯಕ್ಷ ಸೋಮಶೇಖರ ಮಗದುಮ್ಮ, ಕಾರ್ಯದರ್ಶಿ ಡಾ| ಉದಯ ಆಜರಿ, ವಲಯ ಅರಣ್ಯಾಧಿಕಾರಿ ಕೆಂಪಣ್ಣ ವಣ್ಣೂರ, ರೋಟರಿ ಸಂಸ್ಥೆಯ ಪ್ರಸಾದ ಸೊಲಾಪೂರಮಠ, ದಿಲೀಪ ಮೆಳವಂಕಿ, ಪರಮೇಶ್ವರ ಗುಲ್ಲ ಇದ್ದರು.