ಅಸಂತೋಷದ ಜೀವನವು ಅಕ್ರಮ ಸಂಬಂಧಕ್ಕೆ ಕಾರಣವಾಗಬಹುದು ಎಂದು ಹೇಳುವ ಮೂಲಕ ನ್ಯಾಯಾಲಯ ಹೇಗೆ ಕೌಟುಂಬಿಕ ಸೌರ್ಹಾದತೆಯನ್ನು ಉಳಿಸಿಕೊಳ್ಳಬಹುದು ಎಂದು ಹೇಳಿದೆ. ಇನ್ನೂ ಹಲವು ಜಟಿಲ ಸೆಕ್ಷನ್‌ಗಳು ನಮ್ಮ ದಂಡ ಸಂಹಿತೆಯಲ್ಲಿದ್ದು ಇವುಗಳನ್ನು ಕೂಡಾ ನ್ಯಾಯಾಲಯ ಕ್ಷಿಪ್ರವಾಗಿ ಇತ್ಯರ್ಥಪಡಿಸಿದರೆ ಉತ್ತಮ.
ಕಾನೂನಿನ ಮುಂದೆ ಎಲ್ಲರೂ ಸಮಾನರು ಮಾತ್ರವಲ್ಲದೆ ಎಲ್ಲರಿಗೂ ಕಾನೂನು ಸಮಾನವಾಗಿ ಅನ್ವಯವಾಗಬೇಕೆಂಬ ಆಶಯ ಸುಪ್ರೀಂ ಕೋರ್ಟ್ ನಿನ್ನೆ ನೀಡಿದ ಅಕ್ರಮ ಸಂಬಂಧ ಅಪರಾಧವಲ್ಲ ಎಂಬ ತೀರ್ಪಿನ ಹಿಂದಿದೆ.ವಿವಾಹಿತರು ಎಸಗುವ ವ್ಯಭಿಚಾರ ಅಪರಾಧ ಎಂದು ಹೇಳುತ್ತಿದ್ದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 497ನ್ನು ರದ್ದುಪಡಿಸುವ ಮೂಲಕ 158 ವರ್ಷದಿಂದ ಸಂವಿಧಾನದ ಸಮಾನತೆಯ ಆಶಯಕ್ಕೆ ವಿರುದ್ಧವಾಗಿ ಜಾರಿಯಲ್ಲಿದ್ದ ಕಾನೂನನ್ನು ರದ್ದುಪಡಿಸಿದೆ. ಜತೆಗೆ ಅಪರಾಧ ದಂಡ ಸಂಹಿತೆಯ ಸೆಕ್ಷನ್ 198 (2) ಕೂಡಾ ರದ್ದಾಗಿದೆ. ಈ ಎರಡೂ ಸೆಕ್ಷನ್‌ಗಳು ಮಹಿಳೆಯನ್ನು ಪುರುಷನ ಸೊತ್ತು ಎಂಬರ್ಥದಲ್ಲಿ ನೋಡುತ್ತಿದ್ದವು. ಲೈಂಗಿಕ ಸಂಬಂಧದಲ್ಲಿ ಪಾಲ್ಗೊಳ್ಳುವ ಇಬ್ಬರಿಗೂ ಸಮಾನ ಹಕ್ಕು ಇರುವಾಗ ಒಬ್ಬರನ್ನು ಮಾತ್ರ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಸಮ್ಮತವಲ್ಲ ಎಂದು ನ್ಯಾಯಪೀಠ ಹೇಳಿರವುದೂ ಸರಿಯಾಗಿದೆ. ಐದು ಮಂದಿ ನ್ಯಾಯಾಧೀಶರ ತೀರ್ಪು ಒಮ್ಮತದಿಂದ ನೀಡಿರುವ ಈ ತೀರ್ಪು ಕಾನೂನಿನ ದೃಷ್ಟಿಯಿಂದ ಮಾತ್ರವಲ್ಲದೆ ಸಾಮಾಜಿಕ ಮತ್ತು ಕೌಟುಂಬಿಕ ಚೌಕಟ್ಟಿನ ದೃಷ್ಟಿಯಿಂದಲೂ ಮಹತ್ವದ್ದಾಗಿದೆ.
ಸೆಕ್ಷನ್ 497 ಮಹಿಳೆಯ ವ್ಯಕ್ತಿತ್ವವನ್ನು ಕುಬjಗೊಳಿಸುತ್ತದೆ ಮತ್ತು ಆಕೆ ಗಂಡನ ಗುಲಾಮಳು ಎಂಬಂತೆ ನೋಡುತ್ತದೆ. ಮಹಿಳೆಯರ ಸಮಾನತೆ ಮತ್ತು ಸಮಾನ ಅವಕಾಶದ ಹಕ್ಕುಗಳನ್ನು ಉಲ್ಲಂ ಸುವ ಕಾನೂನು ಸಮಾನತೆಯೇ ತಿರುಳಾಗಿರುವ ಸಂವಿಧಾನವನ್ನು ಒಪ್ಪಿಕೊಂಡ ಪ್ರಜಾತಂತ್ರಕ್ಕೆ ರಾಷ್ಟ್ರಕ್ಕೆ ಸರಿಹೊಂದುತ್ತಿರಲಿಲ್ಲ. ಭಾರತೀಯ ಕೌಟುಂಬಿಕ ಪರಂಪರೆಯೂ ಸುಖದುಃಖ ಸೇರಿದಂತೆ ಬದುಕಿನ ಎಲ್ಲ ಆಗುಹೋಗುಗಳಲ್ಲಿ ಗಂಡ ಮತ್ತು ಹೆಂಡತಿ ಸಮಾನ ಸಹಭಾಗಿಗಳು ಎಂದು ಹೇಳುತ್ತಿರುವಾಗ ಮಹಿಳೆಯನ್ನು ಕೀಳಾಗಿ ಬಿಂಬಿಸುವ ವಸಾಹತುಶಾಹಿ ಕಾನೂನನ್ನು ಒಂದೂವರೆ ಶತಮಾನದಿಂದ ಒಪ್ಪಿಕೊಂಡು ಬಂದಿರುವುದೇ ಒಂದು ಸೋಜಿಗ.
ಈ ಸೆಕ್ಷನ್ ಪಿತೃಪ್ರಧಾನ ಸಾಮಾಜಿಕ ವ್ಯವಸ್ಥೆಯಿದ್ದ ವಸಾಹತುಶಾಹಿ ಕಾಲದಲ್ಲಿ ಪಾಶ್ಚಾತ್ಯ ದೃಷ್ಟಿಕೋನದಲ್ಲಿ ರಚಿಸಲ್ಪಟ್ಟದ್ದು. ಪುರುಷ ವಿವಾಹಿತ ಮಹಿಳೆಯೊಬ್ಬಳ ಜತೆಗೆ ಆಕೆಯ ಗಂಡನ ಅನುಮತಿಯಿಲ್ಲದೆ ಅಥವಾ ಅವನಿಗೆ ತಿಳಿಯದಂತೆ ಲೈಂಗಿಕ ಸಂಬಂಧ ಇಟ್ಟು ಕೊಳ್ಳುವುದು ಅಪರಾಧ ಎಂದು ಈ ಸೆಕ್ಷನ್ ಹೇಳುತ್ತದೆ. ಇಲ್ಲಿ ಮಹಿಳೆಯನ್ನು ಈ ಅಪರಾಧದಲ್ಲಿ ಸಹಭಾಗಿ ಎಂದು ಪರಿಗಣಿಸ ಲಾಗುವುದಿಲ್ಲ. ಸೆಕ್ಷನ್ 198(2) ಕಾನೂನಿನ ಮೊರೆ ಹೋಗುವ ಅವಕಾಶ ಇರುವುದು ಮಹಿಳೆಯ ಗಂಡನಿಗೆ ಮಾತ್ರ ಹಾಗೂ ಅವನಿಲ್ಲದಿದ್ದರೆ ಮಹಿಳೆಯ ರಕ್ಷಣೆ ಮಾಡುವವರಿಗೆ ಎನ್ನುತ್ತದೆ. ಬದಲಾದ ಕಾಲಘಟ್ಟದಲ್ಲಿ ಈ ಕಾನೂನು ಅಸಂಗತ ವ್ಯಾಖ್ಯಾನದಂತೆ ಕಾಣಿಸುತ್ತಿತ್ತು. ಮಹಿಳೆಯನ್ನು ಪರಾವಲಂಬಿ ಎಂಬಂತೆ ಬಿಂಬಿಸುವ ಪ್ರಯತ್ನ ಇದರ ಹಿಂದೆ ಇತ್ತು. ಭಾರತೀಯರು ಆಧುನಿಕತೆಗೆ ತೆರೆದುಕೊಳ್ಳಬಾರದೆಂಬ ವಸಾಹತು ಮನಸ್ಥಿತಿಯೂ ಈ ಕಾನೂನು ರಚಿಸುವ ಸಮಯದಲ್ಲಿ ಕೆಲಸ ಮಾಡಿದೆ ಎಂಬ ಆರೋಪದಲ್ಲಿ ತಥ್ಯವಿಲ್ಲದಿಲ್ಲ.
ವ್ಯಭಿಚಾರ ಅಪರಾಧ ಅಲ್ಲದಿದ್ದರೂ ಅದು ನೈತಿಕವಾಗಿ ತಪ್ಪು ಎನ್ನುವ ಅಭಿಪ್ರಾಯವನ್ನೂ ಈ ತೀರ್ಪಿನಲ್ಲಿ ಹೇಳಿರುವುದು ಮುಖ್ಯವಾಗುತ್ತದೆ. ಸುಪ್ರೀಂ ಕೋರ್ಟಿನ ತೀರ್ಪಿನಿಂದಾಗಿ ಅಕ್ರಮ ಸಂಬಂಧ ಸಿವಿಲ್ ಪ್ರಕರಣವಾಗಿ ಬದಲಾಗಿದೆ. ಒಂದು ವೇಳೆ ಅಕ್ರಮ ಸಂಬಂಧದಿಂದಾಗಿ ಯಾರಾದರೂ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವಾಗಿದ್ದರೆ ಐಪಿಸಿಯ ಸೆಕ್ಷನ್ 306ನ್ನು ಅನ್ವಯಿಸಬಹುದಾಗಿದೆ. ಆಗ ಅದು ಕ್ರಿಮಿನಲ್ ಪ್ರಕರಣವಾಗಿ ಬದಲಾಗುತ್ತದೆ. ಮದುವೆ ಮುರಿದುಕೊಳ್ಳುವುದಕ್ಕೆ ಅಥವಾ ವಿಚ್ಛೇದನಕ್ಕೆ ಅಕ್ರಮ ಸಂಬಂಧವನ್ನು ಕಾರಣವಾಗಿ ಬಳಸಿಕೊಳ್ಳಬಹುದು. ತೀರ್ಪು ಈ ಪ್ರಕರಣದಲ್ಲಿ ಮಹಿಳೆಯ ಸ್ವಾತಂತ್ರ್ಯ, ,ಘನತೆ, ಸಮಾನತೆ ,ತಾರತಮ್ಯಕ್ಕೆ ಒಳಗಾಗದೆ ಇರುವ ಮೂಲಭೂತ ಹಕ್ಕುಗಳ ಅಂಶವನ್ನಷ್ಟೇ ವ್ಯಾಖ್ಯಾನಿಸಿದೆ. ಹೀಗಾಗಿ ವ್ಯಭಿಚಾರ ಕಾನೂನು ರದ್ದಾಗಿದೆ ಎಂದ ಮಾತ್ರಕ್ಕೆ ಈ ಮಾದರಿಯ ಸಂಬಂಧಗಳು ಹೆಚ್ಚಾಗಬಹುದು ಎಂದು ಭಾವಿಸಬೇಕಾಗಿಲ್ಲ.
ಅಕ್ರಮ ಸಂಬಂಧ ವೈವಾಹಿಕ ಜೀವನ ಅಸಂತೋಷಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗದು. ಆದರೆ ಅಸಂತೋಷದ ಜೀವನವು ಅಕ್ರಮ ಸಂಬಂಧಕ್ಕೆ ಕಾರಣವಾಗಬಹುದು ಎಂದು ಹೇಳುವ ಮೂಲಕ ನ್ಯಾಯಾಲಯ ಹೇಗೆ ಕೌಟುಂಬಿಕ ಸೌರ್ಹಾದತೆಯನ್ನು ಉಳಿಸಿಕೊಳ್ಳಬಹುದು ಎಂದು ಹೇಳಿದೆ. ವೈವಾಹಿಕ ಅತ್ಯಾಚಾರದಂಥ ಈ ರೀತಿಯ ಇನ್ನೂ ಹಲವು ಜಟಿಲ ಸೆಕ್ಷನ್‌ಗಳು ನಮ್ಮ ದಂಡ ಸಂಹಿತೆಯಲ್ಲಿದ್ದು ಇವುಗಳನ್ನು ಕೂಡಾ ನ್ಯಾಯಾಲಯ ಕ್ಷಿಪ್ರವಾಗಿ ಇತ್ಯರ್ಥಪಡಿಸಿದರೆ ಉತ್ತಮ.