ಬೆಂಗಳೂರು: ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳು ಬದಲಾಗುತ್ತಿರುವ ಸನ್ನಿವೇಶದಲ್ಲಿ ಬದುಕಿನ ಮುಸ್ಸಂಜೆಯಲ್ಲಿರುವ ವೃದ್ಧರಿಗೆ ಗೌರವಯುತ ಜೀವನ ನಡೆಸಲು ವೃದ್ಧಾಶ್ರಮಗಳು ಅನಿವಾರ್ಯವಾಗಿವೆ ಎಂದು ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅಭಿಪ್ರಾಯಪಟ್ಟರು.
ಅವರು ನಿರ್ಮಾಣ್ ಶೆಲ್ಟರ್ಸ್ ಆಶ್ರಯದ ವಿಎಲ್‌ಎನ್ ಪ್ರಬುದ್ಧಾಲಯದ 9ನೇ ವಾರ್ಷಿಕೋತ್ಸವದ ಪ್ರಯುಕ್ತ ನಿಸರ್ಗ ಬಡಾವಣೆಯ ಪ್ರಬುದ್ಧಾಲಯ ನಿವಾಸಿಗಳಿಗೆ 2017ರ “ವಿಎಲ್‌ಎನ್ ಹಿರಿಯ ನಾಗರಿಕರ ಆಜೀವ ಸಾಧನಾ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದರು.
ವೃದ್ಧಾಶ್ರಮಗಳಿಗೆ ಕುಟುಂಬದ ಹಿರಿಯ ಜೀವಗಳನ್ನು ಕಳುಹಿಸುವುದು ಸರಿ ಅಥವಾ ತಪ್ಪು ಎಂದು ಪರಾಮರ್ಶೆ ಮಾಡುವುದಕ್ಕಿಂತ ಬದುಕಿನ ವಾಸ್ತವಗಳನ್ನು ಅರಿತುಕೊಳ್ಳಬೇಕಾಗಿದೆ. ವೃದ್ಧಾಶ್ರಮಗಳು, ವೃದ್ಧಾಲಯಗಳ ಬಗ್ಗೆ ಚರ್ಚೆ ನಡೆದಾಗಲೆಲ್ಲ “ಕಾಲ ಕೆಟ್ಟು ಹೋಯಿತು ಎಂಬ ಟೀಕೆ ಕೇಳಿ ಬರುತ್ತದೆ. ಆದರೆ, ಕಾಲ ಕೆಟ್ಟು ಹೋಗಿಲ್ಲ ಎಂಬುದಕ್ಕೆ ನಿರ್ಮಾಣ್ ಸಂಸ್ಥೆ ನಿರ್ಮಿಸಿರುವ ಪ್ರಬುದ್ಧಾಲಯವೇ ಉದಾಹರಣೆ ಎಂದರು.
ಪ್ರಶಸ್ತಿ ಪಡೆದ ಹಿರಿಯರಲ್ಲಿ 80, 90 ವರ್ಷ ಮೀರಿದವರು ಇರುವುದು ಹಾಗೂ ಅಷ್ಟೇ ಜೀವನೋತ್ಸಾಹ ಹೊಂದಿರುವುದು ಹೆಮ್ಮೆಯ ಸಂಗತಿ. ಈ ಬದಲಾವಣೆಯನ್ನು ಗೌರವಿಸುವ ಜತೆ ಹಿರಿಯರಿಗೆ ಇಂತಹ ಅವಕಾಶ ಕಲ್ಪಿಸಿದ ವಿ. ಲಕ್ಷಿನಾರಾಯಣ್ ಅವರು ಅಭಿನಂದನೆಗೆ ಅರ್ಹರಷ್ಟೇ ಅಲ್ಲ ಉತ್ತಮ ಕೆಲಸ ಮಾಡಿದ್ದಾರೆ ಎಂದು ಶ್ಲಾ ಸಿದರು.
ಈ ವೇಳೆ ಪ್ರಬುದ್ಧಾಲಯ ನಿವಾಸಿಗಳಾದ ಟಿ.ಎಂ. ರಾಮಾಚಾರ್, ಡಾ.ಎನ್. ಬಾಲಸುಬ್ರಮಣಿಯನ್ ದಂಪತಿ, ಎಸ್.ಕೆ. ಅಶ್ವತ್ಥನಾರಾಯಣ್, ಫಿಲಾರ್ ಭವಾನಿಶಂಕರ್ ದಂಪತಿ, ಲಕ್ಷಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪುರಸ್ಕೃತರಿಗೆ ತಲಾ 10 ಸಾವಿರ ರೂ. ನಗದು, ಸ್ಮರಣ ಫಲಕ ನೀಡಲಾಯಿತು.
ಸಮಾರಂಭದಲ್ಲಿ ನಿರ್ಮಾಣ್ ಸಮೂಹ ಸಂಸ್ಥೆ ಸಂಸ್ಥಾಪಕ ವಿ. ಲಕ್ಷಿನಾರಾಯಣ್, ಹಿರಿಯ ವಕೀಲ ಎಸ್.ಎಂ. ಪಾಟೀಲ್, ನಿವೃತ್ತ ಪ್ರಾಂಶುಪಾಲ ಪೊ. ನಾರಾಯಣ ಮಾದಾಪುರ್, ಪ್ರಬುದ್ಧಾಲಯದ ಸಿಇಒ ಸುಷ್ಮಾ ಮೂರ್ತಿ ಉಪಸ್ಥಿತರಿದ್ದರು.