ಬೆಳಗಾವಿ: ಈ ಬಾಲಕನ ವಯಸ್ಸು ಐದು ಆಗಿದ್ದರೂ 16 ವರ್ಷದವರಂತೆ ವರ್ತಿಸುತ್ತಾನೆ. ದೇಹ ತೂಕ ದಿನಕ್ಕೆ 300 ಗ್ರಾಂ. ಹೆಚ್ಚಾಗುತ್ತಿದೆ. ಒಬ್ಬ ಸಾಮಾನ್ಯ ವ್ಯಕ್ತಿ ಆಹಾರ ಸೇವಿಸುವಷ್ಟು ಈ ಬಾಲಕ ಸೇವಿಸಿದರೂ ಹಾರ್ಮೋನ್‌ಗಳ ಅಸ್ವಾಭಾವಿಕ ಸ್ರವಿಕೆಯಿಂದ ಛೋಟಾ ಭೀಮ್‌ನಂತಾಗುತ್ತಿದ್ದಾನೆ.
ದೇಹ ತೂಕ ಸಹ ಅಸ್ವಾಭಾವಿಕವಾಗಿ ಹೆಚ್ಚಾಗುತ್ತಿದೆ: ಲಕ್ಷಕ್ಕೆ ಒಬ್ಬರಿಗೆ ಈ ತರಹ ಸಮಸ್ಯೆ ಕಂಡು ಬರುತ್ತದೆ. ದಿನದಿನಕ್ಕೂ ಈ ಬಾಲಕನ ವರ್ತನೆ ಬದಲಾಗುತ್ತಿದ್ದು, ಯೋಚನಾ ಶಕ್ತಿಯೂ ವೃದ್ಧಿಸುತ್ತಿದೆ. ಮಗುವಿನ ಇಂಥ ಬದಲಾವಣೆ ಪಾಲಕರನ್ನು ಚಿಂತೆಗೀಡು ಮಾಡಿದೆ. ಕಡು ಬಡತನದಲ್ಲಿ ಬದುಕು ಸಾಗಿಸುವುದೇ ಕಷ್ಟಕರವಾಗಿರುವಾಗ ಮಗುವಿಗೆ ಬಂದೆರಗಿದ ಈ ಮಹಾಮಾರಿಯಿಂದ ಪಾಲಕರ ನೋವು ಹೇಳತೀರದಂತಾಗಿದೆ.
Advertisement
ಇದು ವಿಚಿತ್ರವಾದರೂ ನಂಬಲೇಬೇಕಾದ ಸತ್ಯ ಸಂಗತಿ. ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದ ಸಂಕೇತ ಕಾಶೀನಾಥ ಮೋರಕರ ಎಂಬ ಐದು ವರ್ಷದ ಬಾಲಕ ಕಳೆದ ಮೂರುವರೆ ತಿಂಗಳಿಂದ 16 ವರ್ಷದ ಬಾಲಕನಂತೆ ವರ್ತಿಸುತ್ತಿದ್ದಾನೆ. ತೂಕ ನಿರಂತರ ವೃದ್ಧಿಯಾಗುತ್ತಿದೆ. ಸದ್ಯ 18 ಕೆಜಿ ತೂಕ ಹೊಂದಿರುವ ಈತನಿಗೆ ತ್ವರಿತವಾಗಿ ಸೂಕ್ತ ಚಿಕಿತ್ಸೆ ದೊರಕದಿದ್ದರೆ ಭೀಮಕಾಯ ಹೊಂದಲಿದ್ದಾನೆ.
Related Articles
Advertisement
ರಕ್ತ ತಪಾಸಣೆ ಬಳಿಕ ಬಾಲಕನಲ್ಲಿ ಹಾರ್ಮೋನ್‌ಗಳ ಪ್ರಮಾಣ ಹೆಚ್ಚಾಗಿರುವುದು ದೃಢ ಪಟ್ಟಿದೆ. ಬಳಿಕ ಖಾಸಗಿ ವೈದ್ಯರನ್ನು ಸಂಪರ್ಕಿಸಿದಾಗ ಬಾಲಕನ ಸಂಪೂರ್ಣ ತಪಾಸಣೆ ಮಾಡಿ ಆಡ್ರೆನಾಲಿನ್ ಗ್ರಂಥಿಯಲ್ಲಿ ಕಾರ್ಟಿಸೋಲ್ ಪ್ರಮಾಣ ಪ್ರಮಾಣ ಅಧಿಕವಾಗಿತ್ತು. ಈ ಪ್ರಮಾಣ ತಗ್ಗಿಸಲು ಆ್ಯಡ್ರಿನಾಲೆಕ್ಟಮಿ ಎಂಬ ಶಸ್ತ್ರಚಿಕಿತ್ಸೆ ಅಗತ್ಯವಿದೆ. ತ್ವರಿತವಾಗಿ ಈ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಸದ್ಯ ಸಂಕೇತ ಅಂಗನವಾಡಿಯಲ್ಲಿ ಕಲಿಯುತ್ತಿದ್ದು, ಇನ್ನುಳಿದ ಮಕ್ಕಳೊಂದಿಗೆ ಬೆರೆಯುವುದು ಈ ಬಾಲಕನಿಗೆ ಕಷ್ಟಕರವಾಗಿದೆ. ಮೂರುವರೆ ತಿಂಗಳ ಹಿಂದೆ ಅಕ್ಷರ ಜ್ಞಾನ ಹೇಳಿಕೊಟ್ಟರೆ ಸಂಕೇತನಿಗೆ ಒಮ್ಮೆಲೇ ತಲೆಗೆ ಹತ್ತುತ್ತಿರಲಿಲ್ಲ. ಗ್ರಹಣ ಶಕ್ತಿ ಕಡಿಮೆಯಾಗಿತ್ತು. ಅಕ್ಷರ ಬರೆಯಲು ಹೇಳಿದರೆ ಕೆಲವೇ ಅಕ್ಷರ ಬರೆಯಲು ಬಹಳ ಸಮಯ ತೆಗೆದುಕೊಳ್ಳುತ್ತಿದ್ದನು. ಆದರೆ ಈಗ ಮೂರು ತಿಂಗಳಿಂದ ಹಾರ್ಮೋನ್‌ಗಳ ಪ್ರಮಾಣ ಹೆಚ್ಚಾಗಿದ್ದರಿಂದ ಊಟದ ಪ್ರಮಾಣವೂ ಅಧಿಕವಾಗಿ, ದೇಹ ತೂಕ ಏರಿತ್ತಿದ್ದು, ಆಗಿ ಮೆದುಳಿನ ಶಕ್ತಿಯೂ ಹೆಚ್ಚುತ್ತಿದೆ. ಅಕ್ಷರಗಳನ್ನು ಗುರುತಿಸಿ ಬರೆಯಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದ ಈ ಬಾಲಕ ಈಗ ಒಂದು ಪುಟದ ಬರವಣಿಗೆಯನ್ನು ಶೀಘ್ರವಾಗಿ ಬರೆದು ಮುಗಿಸುತ್ತಾನೆ.
ಬಾಲಕನ ಈ ಬೆಳವಣಿಗೆ ಪಾಲಕರನ್ನು ಚಿಂತೆಗೀಡು ಮಾಡಿದೆ.ನೇಕಾರಿಕೆ ಮಾಡುತ್ತಿರುವ ಕಾಶೀನಾಥ ಕುಟುಂಬಕ್ಕೆ ಇಬ್ಬರು ಮಕ್ಕಳು. ಮೊದಲ ಮಗ ಸಂಕೇತನ ಈ ಸ್ಥಿತಿ ಕಂಡು ತಂದೆ ತಾಯಿ ನಿತ್ಯ ಕಣ್ಣಿರಲ್ಲಿಯೇ ಕೈ ತೊಳೆಯುತ್ತಿದ್ದಾರೆ. ಹುಟ್ಟಿದಾಗಿನಿಂದ ಸಂಕೇತ ಆಡಾಡುತ್ತ ಸಾಮಾನ್ಯ ಮಕ್ಕಳಂತೆ ಎಲ್ಲರೊಂದಿಗೆ ಬೆರೆಯುತ್ತಿದ್ದನು. ಈಗ ಮೂರುವರೆ ತಿಂಗಳಿಂದ ಹಠಾತ್ತಾಗಿ ಮಗನ ದೇಹದಲ್ಲಿ ಈ ಬದಲಾವಣೆ ಕಂಡು ಬಂದಿರುವುದು ಪಾಲಕರಲ್ಲಿ ಅಚ್ಚರಿ ಮೂಡಿಸಿದೆ. ದಿನಾಲು ಕೇವಲ ಹಾಲು, ಅನ್ನವನ್ನಷ್ಟೇ ಉಂಡು ತೃಪ್ತಿಯಿಂದಿರುತ್ತಿದ್ದ ಸಂಕೇತನಿಗೆ ಈಗ ನಾಲ್ಕೈದು ಬಾರಿ ಊಟ ಬೇಕಾಗುತ್ತಿದೆ.
ದೇಹ ತೂಕ ನಿತ್ಯ 300 ಗ್ರಾಂ. ಹೆಚ್ಚಾಗುತ್ತಿತ್ತು. ಹಣಕಾಸಿನ ತೊಂದರೆಯಿಂದಾಗಿ ಸದ್ಯ ಆಯುರ್ವೇದ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಸ್ವಲ್ಪ ಫಲಿತಾಂಶವೂ ಕಂಡುಬಂದಿದೆ ಆದರೂ ನಮ್ಮ ನೋವು ಮಾತ್ರ ಕಡಿಮೆ ಆಗುತ್ತಿಲ್ಲ ಎನ್ನುತ್ತಾರೆ ಕಾಶೀನಾಥ.
ಆ್ಯಡ್ರಿನಾಲೆಕ್ಟಮಿ ಶಸ್ತ್ರಚಿಕಿತ್ಸೆಗೆ ಲಕ್ಷಾಂತರ ರೂ. ವೆಚ್ಚವಾಗಲಿದೆ. ಬಡ ಕುಟುಂಬದ ಈ ಪಾಲಕರಿಗೆ ಶಸ್ತ್ರ ಚಿಕಿತ್ಸೆ ಮಾಡಿಸಲು ಆರ್ಥಿಕ ಸಮಸ್ಯೆ ಆಗಿದೆ. ದಾನಿಗಳು ಆರ್ಥಿಕ ಸಹಾಯ ಮಾಡಿದರೆ ಸಾಧ್ಯವಾಗಬಹುದು ಎನ್ನುತ್ತಾರೆ ಪಾಲಕರು.
•ದೇಹತೂಕ ದಿನಕ್ಕೆ 300 ಗ್ರಾಂ.ವೃದ್ಧಿ
•ವಯಸ್ಸು ಐದಾದರೂ 16ರಂತೆ ಬಾಲಕನ ವರ್ತನೆ
ಮಕ್ಕಳಲ್ಲಿ ಹಾರ್ಮೋನ್ ಸಂಖ್ಯೆ ಹೆಚ್ಚಳವಾಗುವುದರಿಂದ ದೇಹ ತೂಕ, ಮಕ್ಕಳಲ್ಲಿ ವರ್ತನೆ ಪ್ರೌಢವಾಗುತ್ತ ಹೋಗುತ್ತದೆ. ಮಗು ಬೆಳೆದಂತೆ ಹಾರ್ಮೋನ್ ಪ್ರಮಾಣ ಅಧಿಕವಾಗುತ್ತದೆ. ಆ್ಯಡ್ರಿನಾಲೆಕ್ಟಮಿ ಶಸ್ತ್ರಚಿಕಿತ್ಸೆ ಮಾಡಿದರೆ ಇದನ್ನು ತಡೆದು ಸಾಮಾನ್ಯರಂತೆ ಮಗು ಬದುಕು ಸಾಗಿಸಬಹುದು. ತ್ವರಿತವಾಗಿ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಇದೆ. • ಡಾ| ವಿಕ್ರಾಂತ ಘಟನಟ್ಟಿ, ವೈದ್ಯರು
ಸಂಕೇತ ಹುಟ್ಟಿದಾಗಿನಿಂದ ಎಲ್ಲ ಮಕ್ಕಳಂತೆ ಸ್ವಾಭಾವಿಕವಾಗಿಯೇ ಇದ್ದ. ಕಳೆದ ಮೂರುವರೆ ತಿಂಗಳಿಂದ ದೇಹ ತೂಕ ಅಧಿಕವಾಗುವುದರ ಜತೆಗೆ ಆತನ ಸ್ವಭಾವದಲ್ಲೂ ಸ್ವಲ್ಪ ಬದಲಾವಣೆ ಕಂಡು ಬರುತ್ತಿದೆ. ಮಗು ಆರೋಗ್ಯವಾಗಿದ್ದರೆ ಸಾಕು ಎಂಬುದೇ ನಮ್ಮ ಆಶಯ. ನೇಕಾರಿಕೆ ಕುಟುಂಬದಲ್ಲಿ ಬದುಕು ಸಾಗಿಸೋದೇ ಕಷ್ಟವಾಗಿರುವಾಗ ಶಸ್ತ್ರಚಿಕಿತ್ಸೆ ಹಣ ಎಲ್ಲಿಂದ ತರೋದು?. • ಕಾಶೀನಾಥ ಮೋರಕರ, ಸಂಕೇತನ ತಂದೆ
•ಭೈರೋಬಾ ಕಾಂಬಳೆ