Advertisement
ಶಕ್ತಿನಗರದ ಅನಿಮಲ್ ಕೇರ್ ಟ್ರಸ್ಟ್ ಆಶ್ರಯದಲ್ಲಿ ಉರ್ವ ಕೆನರಾ ಪ್ರೌಢ ಶಾಲೆ ಆವರಣದಲ್ಲಿ ದೇಸಿ ನಾಯಿ ಮತ್ತು ಬೆಕ್ಕಿನ ಮರಿಗಳ ದತ್ತು ಕೊಡುವ ಶಿಬಿರ ರವಿವಾರ ಆಯೋಜಿಸಲಾಗಿತ್ತು.
ಶಿಬಿರದಲ್ಲಿ 11 ನಾಯಿ ಮರಿಗಳು ಹಾಗೂ 4 ಬೆಕ್ಕಿನ ಮರಿಗಳನ್ನು ಅರ್ಹರಿಗೆ ದತ್ತು ನೀಡಲಾಯಿತು. ದತ್ತು ಪಡೆಯಲು ಇಚ್ಛಿಸುವ ಜನರು ನಿಗದಿತ ಮೊತ್ತ ಪಾವತಿಸಿ, ಸೂಕ್ತ ದಾಖಲೆಗಳೊಂದಿಗೆ ಶಿಬಿರಕ್ಕೆ ಆಗಮಿಸಿ ತಮಗೆ ಮೆಚ್ಚುಗೆಯಾದ ನಾಯಿ ಹಾಗೂ ಬೆಕ್ಕುಗಳನ್ನು ದತ್ತು ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ದತ್ತು ನೀಡಿದ ನಾಯಿ ಅಥವಾ ಬೆಕ್ಕಿನ ಮರಿಗಳ ತಿಂಗಳಿಗೊಮ್ಮೆ ಅನಿಮಲ್ ಕೇರ್ ಟ್ರಸ್ಟ್‌ಗೆ ವರದಿಯನ್ನು ನೀಡಬೇಕಾಗುತ್ತದೆ. ರಸ್ತೆ ಬದಿಗಳಲ್ಲಿ ಅನಾಥವಾಗಿ ಬಿದ್ದ, ಗಾಯಗೊಂಡ ನಾಯಿ, ಬೆಕ್ಕು, ದನ ಹಾಗೂ ಪಕ್ಷಿಗಳು ಸೇರಿದಂತೆ ಸುಮಾರು 300ಕ್ಕೂ ಅಧಿಕ ಪ್ರಾಣಿಗಳಿಗೆ ಶಕ್ತಿ ನಗರದ ಅನಿಮಲ್ ಕೇರ್ ಟ್ರಸ್ಟ್ ನಲ್ಲಿ ನೆಲೆ ನೀಡಲಾಗಿದೆ. 2000ರಲ್ಲಿ ಆರಂಭಗೊಂಡ ಸಂಸ್ಥೆಯಲ್ಲಿ 50ಕ್ಕೂ ಅಧಿಕ ಮಂದಿ ಸ್ವಯಂಸೇವಕರಿದ್ದು, ಒಬ್ಬ ಕನ್ಸಲ್ಟೆಂಟ್ ವೈದ್ಯರಿದ್ದಾರೆ. ತಿಂಗಳಿಗೆ ಎರಡು ಬಾರಿ ವಿವಿಧ ಭಾಗದಲ್ಲಿ ದತ್ತು ನೀಡುವ ಕಾರ್ಯಕ್ರಮವನ್ನು ಆಯೋಜಿಸಿ ಸಂಸ್ಥೆಯಲ್ಲಿ ಪ್ರಾಣಿಗಳನ್ನು ದತ್ತು ನೀಡುತ್ತದೆ. ದತ್ತು ನೀಡಿದ ಬಳಿಕ ಅಲ್ಲಿನ ಸ್ವಯಂಸೇವಕರು ಕರೆ ಮಾಡಿ ಅಥವಾ ಭೇಟಿ ನೀಡಿ ಪ್ರಾಣಿಗಳ ಯೋಗ ಕ್ಷೇಮಗಳನ್ನು ವಿಚಾರಿಸುತ್ತಾರೆ.
Related Articles
ನಮ್ಮ ಸಂಸ್ಥೆಗೆ ಪ್ರತಿ ತಿಂಗಳು ಸುಮಾರು 300 ಸಾಕು ಪ್ರಾಣಿಗಳನ್ನು ಸಾರ್ವಜನಿಕರು ಕರೆ ತಂದು ಬಿಡುತ್ತಾರೆ. ಒಂದುವೇಳೆ ಅವು ಗಾಯಗೊಂಡಿದ್ದರೆ ಸೂಕ್ತ ಚಿಕಿತ್ಸೆ ನೀಡಿ ಪೋಷಣೆ ಮಾಡಲಾಗುತ್ತದೆ. ಅಂಥಹ ಸಾಕು ಪ್ರಾಣಿಗಳನ್ನು ತಿಂಗಳಿಗೊಮ್ಮೆ ದತ್ತು ನೀಡುವ ಕಾರ್ಯಕ್ರಮ ಆಯೋಜಿಸುತ್ತೇವೆ. ಈ ಕಾರ್ಯಕ್ರಮದ ಮೂಲಕ ಬೀದಿ ನಾಯಿ, ಬೆಕ್ಕುಗಳಿಗೆ ಪ್ರೀತಿಯ ನೆಲೆ ದೊರೆಯುತ್ತದೆ.
– ಚೇತನಾ,
ಟ್ರಸ್ಟ್‌ನ ಸ್ವಯಂ ಸೇವಕಿ
Advertisement