ಉಡುಪಿ: ಕುಡಿಯುವ ನೀರಿನ ಸಮಸ್ಯೆಗೆ ಈ ಬಾರಿ ಇಡೀ ಜಿಲ್ಲೆ ತತ್ತರಿಸಿದೆ. ಉದಯವಾಣಿಯ ಜಲಸಾಕ್ಷರ ಅಭಿಯಾನದಿಂದ ಪ್ರೇರಣೆಗೊಂಡು ಮಳೆಕೊಯ್ಲಿಗೆ ಹಲವು ಮಂದಿ ಮನಸ್ಸು ಮಾಡುತ್ತಿದ್ದಾರೆ. ಅಲ್ಲದೇ ಸಾರ್ವಜನಿಕ ರಂಗದಲ್ಲಿಯೂ ಜಲಸಾಕ್ಷರ ಅಭಿಯಾನದ ಮೂಲಕ ಪ್ರೇರೇಪಿಸುವವರಲ್ಲಿ ವತ್ಸಲಾ ಸಹ ಒಬ್ಬರು. ಸಂಗ್ರಹಿಸಿದ ಮಳೆನೀರಿನಲ್ಲಿ ವರ್ಷಪೂರ್ತಿ ತೋಟದ ಗಿಡಗಳಿಗೆ, ತೆಂಗಿನ ಮರಗಳಿಗೆ ನೀರುಣಿಸುತ್ತಿದ್ದಾರೆ.
ಪರ್ಕಳದ ಹೆರ್ಗ ರಾಜ್‌ಗೋಪಾಲ ನಗರದ ನಿವಾಸಿ ವತ್ಸಲಾ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸದಸ್ಯೆ. ಯೋಜನೆ ವತಿ ಯಿಂದ ನಡೆದ ಮಳೆ ಕೊಯ್ಲು ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಆರು ವರ್ಷದ ಹಿಂದೆ ಮನೆ ಮೇಲ್ಛಾವಣಿಗೆ ಮಳೆಕೊಯ್ಲು ಪದ್ಧತಿ ಅಳವಡಿಸಿದ್ದಾರೆ.
ಈ ಬೇಸಗೆಯಲ್ಲಿ ನೀರಿನ ಬರಕ್ಕೆ ಉಡುಪಿ ನಗರ ತತ್ತರಿಸಿ ಹೋಗಿತ್ತು. ಜನರು ಸಾವಿರಾರು ಖರ್ಚು ಮಾಡಿ ಟ್ಯಾಂಕರ್ ನೀರು ಹಾಕಿಕೊಂಡಿದ್ದಾರೆ. ಆದರೆ ವತ್ಸಲಾ ಅವರು ಮಾತ್ರ ಒಂದು ರೂ. ಸಹ ಟ್ಯಾಂಕರ್ ನೀರಿಗಾಗಿ ವ್ಯಯಿಸಿಲ್ಲ. ನಗರಸಭೆಯ ನೀರನ್ನು ಆಶ್ರಯ ಪಡೆಯದೆ ಮನೆಯ 40 ಅಡಿ ಬಾವಿ ನೀರನ್ನೇ ನಂಬಿಕೊಂಡಿದ್ದಾರೆ. ಮೇ ಕೊನೆಯ ತನಕ ಬಾವಿ ನೀರು ಬಳಕೆಯಾಗುತ್ತದೆ.
ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ
ಕೇವಲ 1,500 ರೂ. ವೆಚ್ಚದಲ್ಲಿ ಮಳೆಕೊಯ್ಲು ಪದ್ಧತಿಯನ್ನು ಆಳವಡಿಸಿ ಕೊಂಡಿದ್ದಾರೆ. ಮನೆ ಹಂಚಿನ ಮೇಲ್ಛಾವಣಿಯ ನೀರು ಪೈಪ್ ಮೂಲಕ ಬಾವಿ ಸಮೀಪ ಅಳವಡಿಸಲಾದ 50 ಲೀ. ಡ್ರಮ್‌ಗೆ ಬೀಳುತ್ತದೆ. ಡ್ರಮ್‌ನ ಸ್ವಚ್ಛತೆಗಾಗಿ ಜಲ್ಲಿ, ಮರಳು, ಕಲ್ಲು ಹಾಕ್ಕಿದ್ದು, ಇಲ್ಲಿ ನೀರು ಶುದ್ಧವಾಗಿ ನೇರವಾಗಿ ಬಾವಿಯನ್ನು ಸೇರುತ್ತಿದೆ.