ಚನ್ನರಾಯಪಟ್ಟಣ/ಬಾಗೂರು: ಕಲ್ಲೆಸೋಮನಹಳ್ಳಿ ಏತನೀರಾವರಿ ಯೋಜನೆಯ ಪೈಪ್‌ಲೈನ್ ಅಳವಡಿಕೆ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
580 ಎಚ್‌ಪಿ ಸಾಮರ್ಥ್ಯದ ಯಂತ್ರ ಅಳವಡಿಕೆ: ತಾಲೂಕಿನ ಬಾಗೂರು ಹೋಬಳಿನಾಲೆ ಸಮೀಪ ಪೈಪ್‌ಗ್ಳಿಗೆ ಪೂಜೆ ನೆರವೇರಿಸಿ ಮಾತನಾಡಿದ ಅವರು, 32 ಕೋಟಿ ರೂ. ವೆಚ್ಚದ 19 ಕೆರೆಗಳಿಗೆ 22 ಕ್ಯೂಸೆಕ್ ನೀರು ಹರಿಸುವ ಕಲ್ಲೆಸೋಮನಹಳ್ಳಿ ಏತನೀರಾವರಿ ಯೋಜನೆಗೆ ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದೆ. ಸುಮಾರು 580 ಎಚ್‌ಪಿ ಸಾಮರ್ಥ್ಯದ ಮೂರು ನೀರು ಎತ್ತುವ ಯಂತ್ರಗಳನ್ನು ಅಳವಡಿಸಲಾಗುವುದು. ಎಂ.ಕೆ.ಹೊಸೂರು ಮಾರ್ಗದಿಂದ ಸುಮಾರು 10 ಕಿ.ಮೀ. ಪೈಪ್‌ಲೈನ್ ಮೂಲಕ ನೀರು ಹರಿಸಲಾಗುವುದು ಎಂದು ಹೇಳಿದರು.
ಈ ಯೋಜನೆಯಿಂದ ಬಿದರೆ, ಚಿಕ್ಕರಸನಹಳ್ಳಿ, ಕೆಂಬಾಳು, ಎಂ.ಶಿವರ, ತಗಡೂರು, ಹೊಂಗೇಹಳ್ಳಿ, ಮರಗೂರು, ಕಾಮನಹಳ್ಳಿ, ಕಾಳಮಾರನಹಳ್ಳಿ, ಮಾದಗುಡ್ಡನಹಳ್ಳಿ, ಬಳಗಟ್ಟೆ, ದರಸಿಹಳ್ಳಿ, ಕಲ್ಲೆಸೋಮನಹಳ್ಳಿ, ಹಲಸಿನಹಳ್ಳಿಗಳ ಕೆರೆಗಳು ತುಂಬಲಿವೆ. ಇದರಿಂದ ಬಾಗೂರು ಹೋಬಳಿಯ ಕುಡಿಯುವ ನೀರಿನ ಅಂತರ್ಜಲ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ತಿಳಿಸಿದರು.
20 ತಿಂಗಳಿನಲ್ಲಿ ಕಾಮಗಾರಿ ಪೂರ್ಣ: ಇಪತ್ತು ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸಲು ಎಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ. ಕಾಮಗಾರಿ ಪೂರ್ಣಗೊಳಿಸಿದರೆ ಕೇವಲ ನೂರು ದಿನದಲ್ಲಿ 19 ಕೆರೆಗಳಿಗೆ ನೀರು ತುಂಬಿಸಬಹುದಾಗಿದೆ. ನವಿಲೆ ಏತನೀರಾವರಿ ಯೋಜನೆಯ ಬಲವರ್ಧನೆಗೆ 9 ಕೋಟಿ ರೂ. ಹಣ ಬಿಡುಗಡೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದರು.
ಅಂತರ್ಜಲ ಸಮಸ್ಯೆ ನಿವಾರಣೆ: ತೋಟಿ, ಆಲಗೊಂಡನಹಳ್ಳಿ, ಹಿರಿಸಾವೆ ಏತನೀರಾವರಿ ಯೋಜನೆಯ ಕಾಮಗಾರಿಗಳು ಪೂರ್ಣಗೊಂಡರೆ ತಾಲೂಕಿನಲ್ಲಿ ಶೇ.80ರಷ್ಟು ಅಂತರ್ಜಲ ಸಮಸ್ಯೆ ನಿವಾರಣೆಯಾಗುತ್ತದೆ. ನಾಕನಕೆರೆ ಮೂಲಕ ಕಬ್ಬಳಿ ದಿಡಗ ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸಲು ಕಾನೂನು ಬದ್ಧವಾಗಿ ಡಿಪಿಆರ್ ಮಾಡಿಸಲಾಗಿದೆ ನೀರಾವರಿ ಮಂತ್ರಿಗಳಿಗೆ ಇದನ್ನು ಇಲಾಖೆ ಮೂಲಕ ತಲುಪಿಸಲಾಗಿದೆ ಎಂದು ನುಡಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕ ವಿ.ಎನ್.ಮಂಜುನಾಥ್, ಕೆಂಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್, ಗ್ರಾಪಂ ಸದಸ್ಯ ನಂಜುಂಡಪ್ಪ, ಮುಖಂಡರಾದ ವೆಂಕಟೇಶ್, ನಾಗೇಶ್, ದೇವರಾಜು, ನವೀನ, ಎನ್.ಬಿ.ನಾಗರಾಜು, ನಾಗರಾಜು, ಎನ್.ಎಸ್.ಗಿರೀಶ್, ಡಿ.ಆರ್.ದೇವರಾಜು, ನಂಜೇಶ್‌ಗೌಡ, ಕಿಟ್ಟಿ, ಡಿ.ಕೆ.ದಿನೇಶ್ ಮೊದಲಾದವರು ಉಪಸ್ಥಿತರಿದ್ದರು.