Advertisement

ಪರಿಸರದೊಲವಿನ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ -ವಿಶ್ವನಾಥ ಆಣೆಕಟ್ಟಿ

06:04 PM Aug 18, 2023 | Team Udayavani |

ಅಣ್ಣಿಗೇರಿ: ರೈತರು ರಾಸಾಯನಿಕ ಗೊಬ್ಬರವನ್ನು ಬಳಕೆ ಮಾಡಿ ಬೆಳೆಗಳನ್ನು ಬೆಳೆಯುತ್ತಿರುವುದರಿಂದ ಭೂಮಿಯ
ಫಲವತ್ತತೆ ಕ್ರಮೇಣ ಕಳೆದುಕೊಳ್ಳುತ್ತಿದೆ. ಮಿಶ್ರಬೆಳೆ ಪದ್ಧತಿಯನ್ನು ಕಡೆಗಣಿಸಿದ್ದರಿಂದ ರೈತರ ಆದಾಯ ಹಾಗೂ ಗುಣಮಟ್ಟದ
ಆಹಾರ ಬೆಳೆಗಳು ದೊರೆಯುವುದು ಕಠಿಣವಾಗುತ್ತಿದೆ ಎಂದು ಸಹಜ ಸಮೃದ್ಧಿ ಸಂಸ್ಥೆಯ ಬೆಂಗಳೂರು ಕಚೇರಿಯ ಮುಖ್ಯಸ್ಥ
ವಿಶ್ವನಾಥ ಆಣೆಕಟ್ಟಿ ಹೇಳಿದರು.

Advertisement

ಸಹಜ ಸಮೃದ್ಧಿ ಸಂಸ್ಥೆ ಹಾಗೂ ತಾಲೂಕು ರೈತ ಉತ್ಪಾದಕ ಕಂಪನಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪರಿಸರದೊಲವಿನ ಬೇಸಾಯ ಪದ್ಧತಿ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಹಣದಿಂದ ಔಷಧಿ ಖರೀದಿಸಬಹುದು ಆದರೆ ಆರೋಗ್ಯವನ್ನಲ್ಲ. ನಾವು ತಿನ್ನುವ ಆಹಾರವೇ ಔಷಧವಾಗಬೇಕು. ಇಲ್ಲದೇ
ಹೋದರೆ ಔಷಧಿಯನ್ನು ಆಹಾರದಂತೆ ತಿನ್ನಬೇಕಾಗುತ್ತದೆ. ನಮ್ಮ ಮನೆಯ ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಪರಿಸರದೊಲವಿನ
ಬೇಸಾಯ ಕ್ರಮಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರೈತರು ಸ್ವ ಆಸಕ್ತಿಯಿಂದ ತಮ್ಮ ಜಮೀನುಗಳಲ್ಲಿ 4 ಗುಂಟೆ ಜಾಗವನ್ನು ಪರಿಸರದೊಲವಿನ ಬೇಸಾಯ ಕ್ರಮಕ್ಕೆ ಬಳಸಿಕೊಂಡು ರಾಸಾಯನಿಕ ಮುಕ್ತ ಹಾಗೂ ಆರೋಗ್ಯಪೂರ್ಣ ಬೆಳೆಗಳನ್ನು ಬೆಳೆಯಬಹುದು. ರೈತರು 4 ಗುಂಟೆ ಜಾಗದಲ್ಲಿ ಬೇಸಾಯ ಮಾಡಲು ಮುಂದಾದರೆ ತಾಲೂಕು ರೈತ ಉತ್ಪಾದಕ ಕಂಪನಿಯ ಮೂಲಕ ತಮ್ಮನ್ನು ಭೇಟಿ ಮಾಡಿ ಬೆಳೆಗಳನ್ನು ಬೆಳೆಯಲು ಉಚಿತ ಬೀಜ-ಗೊಬ್ಬರ ನೀಡಿ ಪ್ರೋತ್ಸಾಹ ನೀಡುತ್ತೇವೆ ಎಂದರು.

ತಾಲೂಕು ರೈತ ಉತ್ಪಾದಕ ಕಂಪನಿ ಉಪಾಧ್ಯಕ್ಷ ನಾರಾಯಣ ಮಾಡಳ್ಳಿ ಮಾತನಾಡಿ, ನಾವು ಸಹಜವಾಗಿ ನಮ್ಮಲ್ಲಿ ಬೆಳೆಯುವ ಬೆಳೆಗಳನ್ನು ಬೆಳೆಯುತ್ತಿದ್ದೇವೆ. ಆದರೆ ಇಂದಿನ ಹೊಸ ಹೊಸ ತಾಂತ್ರಿಕ ಕೃಷಿಗಳ ಬಗ್ಗೆ ರೈತರು ಮಾಹಿತಿ ಪಡೆದು ಅಳವಡಿಸಿಕೊಳ್ಳಬೇಕಾಗುತ್ತದೆ. ಪರಿಸರದೊಲವಿನ ಬೇಸಾಯದ ಬಗ್ಗೆ ನಮ್ಮ ಭಾಗದ ಜನರಿಗೆ ಅಷ್ಟೊಂದು ಮಾಹಿತಿಯಿಲ್ಲ.
ಹೀಗಾಗಿ ಮಾಹಿತಿಯನ್ನು ಪಡೆದು 4 ಗುಂಟೆ ಜಾಗದಲ್ಲಿ ಬೇಸಾಯ ಮಾಡಿ ಪ್ರಯೋಗ ಮಾಡೋಣ ಎಂದು ಹೇಳಿದರು.

Advertisement

ಪರಿಸರದೊಲವಿನ ಬೇಸಾಯ ಯೋಜನೆಯ ಸಂಯೋಜಕ ಸೂರ್ಯಕಾಂತ ಶೇಗುಣಶಿ, ಸಹಜ ಸಮೃದ್ದಿ ಸಂಸ್ಥೆಯ ಸಿಬ್ಬಂದಿ ಈಶ್ವರಪ್ಪ ಅಂಗಡಿ, ರೈತರಾದ ಡಿ.ಜಿ. ಭರಮಗೌಡರ, ಮುತ್ತಪ್ಪ ಹಿರಶೆಡ್ಡಿ, ಶರಣಪ್ಪ ಹಾವಿನ, ಮಂಜುನಾಥ ಜಂಗವಾಡ, ಎಂ.ಡಿ. ಗಜಬಾರ, ವೆಂಕನಗೌಡ ಸೋಮನಗೌಡ್ರ, ಉಮೇಶ ದಳವಾಯಿ, ರಮೇಶ ಅಕ್ಕಿ, ಅಮೃತ ಮರಡ್ಡಿ, ಎಮ್‌.ಸಿ. ಜಗಲಿ, ಪುರದಪ್ಪ ರಾಮನಕೊಪ್ಪ, ನಾರಾಯಣ ಓಸೇಕರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next