Advertisement

ವಾತಾವರಣಕ್ಕೆ ತಕ್ಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ

02:31 PM Sep 06, 2019 | Suhan S |

ಸಕಲೇಶಪುರ: ಸ್ಥಳೀಯ ವಾತಾವರಣಕ್ಕೆ ತಕ್ಕಂತೆ ಬೆಳೆಗಾರರು ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಾಗ ಮಾತ್ರ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದು ಮೆಣಸು ಬೆಳೆಯಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಕೆಂಜಿಗೆ ಕೇಶವ್‌ ಹೇಳಿದರು.

Advertisement

ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಬೆಳೆಗರರ ಒಕ್ಕೂಟ ಗುರುವಾರ ಹಮ್ಮಿಕೊಂಡಿದ್ದ ‘ಬೆಳೆಗಾರರೆಡೆಗೆ ನಮ್ಮ ನಡಿಗೆ’ ಅತಿವೃಷ್ಟಿಯಿಂದ ಸಂತ್ರಸ್ತರಾಗಿರುವ ಮೆಣಸು ಬೆಳೆಗಾರರಿಗೆ ನೆರವು ನೀಡಲು ಆಯೋಜಿಸಲಾಗಿದ್ದ ಮೆಣಸು ಬೆಳೆಗಾರರ ವಿಚಾರಣ ಸಂಕಿರಣದಲ್ಲಿ ಮಾತನಾಡಿದರು.

ಕೃಷಿಯ ಬಗ್ಗೆ ಆಲಸ್ಯ ಬೇಡ: ಕೃಷಿಯ ಬಗ್ಗೆ ಆಲಸ್ಯ ಬೇಡ, ಕೃಷಿಯ ಕುರಿತು ವೈಜ್ಞಾನಿಕವಾಗಿ ಮಾಹಿತಿ ಪಡೆದು ತಮ್ಮ ತೋಟದಲ್ಲಿ ಹಂತಹಂತವಾಗಿ ಸುಧಾರಣೆ ತಂದಾಗ ಮಾತ್ರ ಪ್ರಗತಿಪರ ಬೆಳೆಗಾರ ರಾಗಲು ಸಾಧ್ಯ ಎಂದು ಹೇಳಿದರು.

ಮಣ್ಣಿನ ಪರೀಕ್ಷೆ, ನೀರು ನಿರ್ವಹಣೆ ಹಾಗೂ ಕಾಲಕ್ಕೆ ಸರಿಯಾದ ಗೊಬ್ಬರ ನೀಡುವಿಕೆ ಯಶಸ್ಸಿನ ಸೂತ್ರವಾಗಿದ್ದು, ಇವುಗಳನ್ನು ಗಮನವಿಟ್ಟ ಬೆಳೆಗಾರರ ಮಾಡಿದಾಗ ತಮ್ಮ ತೋಟದಲ್ಲಿ ಉತ್ತಮ ಇಳುವರಿ ಪಡೆೆಯಬಹುದಾಗಿದೆ ಎಂದು ಸಲಹೆ ನೀಡಿದರು.

ಕಾಳುಮೆಣಸು ಬಳ್ಳಿಗಳಿಗೆ ಬೇವಿನ ಹಿಂಡಿ ನೀಡುವುದರಿಂದ ಹಲವು ರೋಗಗಳನ್ನು ತಡೆಗಟ್ಟಬಹುದು. ರೋಗ ಬಂದ ಬಳ್ಳಿಗಳನ್ನು ಕಿತ್ತು ಸುಟ್ಟುಹಾಕುವುದು ಉತ್ತಮ. ಇದರಿಂದ ಅನ್ಯ ಬಳ್ಳಿಗಳಿಗೆ ರೋಗ ಹರಡದಂತೆ ತಡೆಯಬಹುದಾಗಿದೆ ಎಂದರು. ಹೆಚ್ಚು ಮೆಣಸು ಹಾಗೂ ಕಾಫಿ ಬೆಳೆಯುವ ಬ್ರೆಜಿಲ್,ವಿಯಟ್ನಾಂ ದೇಶದ ಪದ್ಧತಿಯನ್ನು ನಮ್ಮ ದೇಶದಲ್ಲಿ ಆಳವಡಿಸಿ ಕೊಳ್ಳುವುದರಿಂದ ನಷ್ಟ ಕಟ್ಟಿಟ್ಟ ಬುತ್ತಿ. ಈ ಬಗ್ಗೆ ಯುವ ಬೆಳೆಗಾರರು ಗಮನಹರಿಸಬೇಕು ಎಂದು ಹೇಳಿದರು.

Advertisement

ಕಾಫಿಯೊಂದಿಗೆ ಉಪಬೆಳೆ ಅಗತ್ಯ: ಪ್ರಶಸ್ತಿ ಪುರಸ್ಕೃತ ಕೃಷಿಕ ಎಸ್‌. ಮಂಜುನಾಥ್‌ ಮಾತನಾಡಿ, ಕಾಫಿ ತೋಟಗಳಲ್ಲಿ ಕೇವಲ ಒಂದು ಬೆಳೆಯನ್ನು ಬೆಳೆಯು ವುದರಿಂದ ಬೆಳೆಗಾರ ಸಂಕಷ್ಟಕ್ಕೆ ಸಿಲುಕುವುದು ನಿಶ್ಚಿತ. ಕಾಫಿ ತೋಟದಲ್ಲಿ ಮೆಣಸು ಹಾಗೂ ಸಿಲ್ವರ್‌ ಇರಲೇ ಬೇಕು. ಇದರಿಂದ ಮಾತ್ರ ಬೆಳೆಗಾರರ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.

ಮೆಣಸು ಬಳ್ಳಿಗೆ ನೀರು ಅತಿಮುಖ್ಯ, ನೀರಿನ ಮೂಲಗಳಿಲ್ಲದ ಬೆಳೆಗಾರ ಮೆಣಸು ಬೆಳೆಯುವುದು ಅಸಾಧ್ಯದ ಮಾತಾಗಿದೆ. ಬೊರ್ಡೋ ಮಿಶ್ರಣ ಮೆಣಸು ಬಳ್ಳಿಗಳಿಗೆ ಉತ್ತಮ. ತಾವೇ ನರ್ಸರಿಗಳಲ್ಲಿ ಗಿಡಗಳನ್ನು ಬೆಳೆಯುವುದರಿಂದ ರೋಗರಹಿತ ತೋಟಗಳ ನಿರ್ವಹಣೆ ಸಾಧ್ಯ. ಬೆಲೆ ಕುಸಿತ ಎಂದು ನಿಶ್ಚಿತ ಬೆಳೆ ಕೈಬಿಡುವುದು ಉತ್ತಮವಲ್ಲ ಎಂದರು.

ಸಮ್ಮೇಳನದಲ್ಲಿ ಕೊಡಗು, ಚಿಕ್ಕಮಗಳೂರು, ಉತ್ತರಕನ್ನಡ ಹಾಗೂ ಹಾಸನ ಜಿಲ್ಲೆಯ ಮೆಣಸು ಬೆಳೆಗಾರರು ಪಾಲ್ಗೊಂಡಿದ್ದರು.

ಸಮ್ಮೇಳನದಲ್ಲಿ ಮೆಣಸು ಕೃಷಿಯಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಯಲ್ಲಾಪುರದ ಶ್ರೀಧರ ಗೋವಿಂದ ಭಟ್, ಹೊಂಕರವಳ್ಳಿ ಧರ್ಮರಾಜ್‌, ಗೋಣಿಬೀಡು ಹೊಸಹಳ್ಳಿಯ ಲಕ್ಷ್ಮಯ್ಯ,ಬಾಳ್ಳುಪೇಟೆ ಮಹೇಶ್‌ ಕುಮಾರ್‌, ಕಡೂರಿನ ಡಾ.ವಿವೇಕ್‌ ಮಾತನಾಡಿದರು.

ವೇದಿಕೆಯಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ತೀರ್ಥಮಲ್ಲೇಶ್‌, ಕಾರ್ಯದರ್ಶಿ ಮುರಳೀಧರ್‌, ಖಜಾಂಚಿ ಮಹೇಶ್‌, ಹಾಸನ ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ತೊ.ಚ.ಅನಂತಸುಬ್ಬರಾವ್‌, ಕೆಜಿಎಫ್ ನಿಕಟ ಪೂರ್ವ ಅಧ್ಯಕ್ಷ ಜೈರಾಂ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next