ಪಿರಿಯಾಪಟ್ಟಣ: ಜಲಕ್ಷಾಮ ನಿಯಂತ್ರಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಕುಸಿಯುತ್ತಿರುವ ಅಂತರ್ಜಲವನ್ನು ಸಂರಕ್ಷಿಸದಿದ್ದರೆ ಅನೇಕ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಚ್.ಬಿ.ಮಂಜುನಾಥ್ ಎಚ್ಚರಿಸಿದರು. ತಾಲೂಕಿನ ಕಿರನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಆಯೋಜಿಸಿದ್ದ ಜಲಶಕ್ತಿ ಮತ್ತು ಜಲಾಮೃತ ಅಭಿಯಾನದಲ್ಲಿ ಅವರು ಮಾತನಾಡಿದರು.
ನೀರಿನ ಸಮಸ್ಯೆ ಅರಿತು ಕೇಂದ್ರ ಸರ್ಕಾರ ಜಲಶಕ್ತಿ ಎಂಬ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. ಹನಿ ನೀರಿನ ಸದ್ಬಳಕೆ ಮಾಡುವುದು ಈ ಯೋಜನೆ ಉದ್ದೇಶವಾಗಿದೆ. ಬೇಸಿಗೆ ಸಂದರ್ಭದಲ್ಲಿ ನೀರಿನ ಕೊರತೆ ನೀಗಿಸಲು ಮಳೆ ನೀರು ಕೊಯ್ಲು ವ್ಯವಸ್ಥೆಗೆ ಆದ್ಯತೆ ನೀಡಬೇಕು. ನೀರಿನ ಕೊರತೆ ನೀಗಿಸುವ ಉದ್ದೇಶದಿಂದ ದೇಶಾದ್ಯಂತ ಜನಶಕ್ತಿ ಮತ್ತು ಜೀವಾಮೃತ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರತಿಯೊಬ್ಬರಿಗೂ ನೀರಿನ ಮಹತ್ವ ತಲುಪಿಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಶಕ್ತಿ ಮತ್ತು ಜಲಾಮೃತ ಅಭಿಯಾನ ಆಯೋಜಿಸಲಾಗುವುದು ಎಂದು ತಿಳಿಸಿದರು. ಪಶುಪಾಲನೆ ಇಲಾಖೆ ಸಹಾಯಕ ಅಧಿಕಾರಿ, ಕಾರ್ಯಕ್ರಮದ ನೋಡಲ್ ಅಧಿಕಾರಿ ಸಂದೇಶ್ ಮಾತನಾಡಿ, ಹೆಚ್ಚುತ್ತಿರುವ ಅತಿವೃಷ್ಟಿ ಮತ್ತು ಅನಾವೃಷ್ಟಿಯಂತ ತುರ್ತು ಸಂದರ್ಭದಲ್ಲಿ ಸಂತ್ರಸ್ತರಿಗೆ ನೆರವಾಗಲು ನಿಧಿ ಸಂಗ್ರಹಿಸಲಾಗುತ್ತಿದೆ.
ಪಶುಪಾಲನಾ ಇಲಾಖೆಯಲ್ಲಿ ಹೈನುಗಾರಿಕೆ ಉತ್ತೇಜಿಸಲು ಇಲಾಖೆ ವತಿಯಿಂದ ರೈತರಿಗೆ ಪಶು, ಮೇವು ವಿತರಣೆ, ಕೊಟ್ಟಿಗೆ ನಿರ್ಮಾಣ ಮತ್ತಿತರ ಸೌಲಭ್ಯ ಕಲ್ಪಿಸಲಾಗಿದೆ. ರೈತರು ಇದರ ಸದುಪಯೋಗ ಪಡೆಯಬೇಕು ಎಂದು ಸಲಹೆ ನೀಡಿದರು. ತೋಟಗಾರಿಕೆ ಇಲಾಖೆ ಸಹಾಯಕಿ ವಿದ್ಯಾ ಮಾತನಾಡಿ, ಇಲಾಖಾ ವತಿಯಿಂದ ರೈತರಿಗೆ ಬಾಳೆ, ಪೊಪ್ಪಾಯಿ, ತೆಂಗು, ಹನಿ ನೀರಾವರಿ ಇನ್ನಿತರ ಉದ್ದೇಶಗಳಿಗೆ ಸಹಾಯಧನ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಸುಧಾ, ಉಪಾಧ್ಯಕ್ಷೆ ಅನಿತಾ, ಸದಸ್ಯರಾದ ಕೆ.ಪಿ.ಪವನ್ ಕುಮಾರ್, ಪರಮೇಶ್, ರುಕ್ಮಿಣಮ್ಮ, ಶಿಲ್ಪಾ, ಶಿಕ್ಷಕರಾದ ಮಮತಾ, ಶ್ರೀಧರ್ ಇತರರಿದ್ದರು.