Advertisement

ಇಂದು ಅರಮನೆಗೆ ಗಜಪಡೆ ಪ್ರವೇಶ

11:28 AM Sep 05, 2018 | Team Udayavani |

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರೆಯ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮೆರವಣಿಗೆ. ಇದರಲ್ಲಿ ಭಾಗವಹಿಸಲಿರುವ ಗಜಪಡೆ ಈಗಾಗಲೇ ಕಾಡಿನಿಂದ ನಾಡಿಗೆ ಆಗಮಿಸಿದ್ದು, ಸಂಪ್ರದಾಯದಂತೆ ಬುಧವಾರ ಅರಮನೆ ಪ್ರವೇಶಿಸಲಿವೆ. 

Advertisement

ನಾಡಹಬ್ಬ ದಸರಾ ಮಹೋತ್ಸವದ ರಂಗು ಹೆಚ್ಚುವುದೇ ಪ್ರತಿವರ್ಷ ನಗರಕ್ಕಾಗಮಿಸುವ ಗಜಪಡೆಯಿಂದ. ಇದೀಗ ದಸರೆಯಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಗಜಪಡೆ ಬಂದಿರುವ ದಸರಾ ಆನೆಗಳು ಅರಮನೆ ಪ್ರವೇಶಿಸಲು ಸಜ್ಜಾಗಿವೆ. ಬುಧವಾರ ಅರಮನೆ ಜಯಮಾರ್ತಾಂಡ ದ್ವಾರದ ಮೂಲಕ ಅರ್ಜುನ ನೇತೃತ್ವದ ಗಜಪಡೆ ವಿಶ್ವವಿಖ್ಯಾತ ಅರಮನೆ ಪ್ರವೇಶಿಸಲಿವೆ. 

ಸಂಜೆ 4.30ಕ್ಕೆ ನಡೆಯುವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್‌, ಶಾಸಕ ಎಸ್‌.ಎ.ರಾಮದಾಸ್‌ ಸೇರಿದಂತೆ ಇನ್ನಿತರರು ಮೊದಲ ತಂಡದಲ್ಲಿ ಬಂದಿರುವ ದಸರಾ ಆನೆಗಳಿಗೆ ಸಾಂಪ್ರದಾಯಕ ಸ್ವಾಗತ ನೀಡಲಿದ್ದಾರೆ. ಇದರೊಂದಿಗೆ ನಗರದಲ್ಲಿ ದಸರಾ ಹಬ್ಬದ ಸಂಭ್ರಮಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. 

ವಿಶ್ರಾಂತಿ ಪಡೆದವು: ಹುಣಸೂರಿನ ವೀರನಹೊಸಳ್ಳಿಯಿಂದ ಮೈಸೂರಿಗೆ ಬಂದಿರುವ ಗಜಪಡೆ ಅಶೋಕಪುರಂನ ಅರಣ್ಯ ಭವನದಲ್ಲಿ ರಿಲ್ಯಾಕ್ಸ್‌ ಮೂಡ್‌ನ‌ಲ್ಲಿ ಕಾಲ ಕಳೆದವು. ಗಜಪಡೆ ಸಾರಥಿ ಅರ್ಜುನ ಸ್ನಾನ ಮಾಡಿಸಿಕೊಂಡು ಸಂಭ್ರಮಿಸಿದರೆ, ಉಳಿದ ಆನೆಗಳು ಆಹಾರ ಸೇವಿಸುತ್ತಾ ವಿಶ್ರಾಂತಿ ಪಡೆದವು. 

ಅರಣ್ಯ ಭವನದಲ್ಲಿರುವ ಹಸಿರು ವಾತವರಣದಲ್ಲಿರುವ ಆನೆಗಳಾದ ಅರ್ಜುನ, ಚೈತ್ರ, ವಿಕ್ರಮ, ಧನಂಜಯ, ವರಲಕ್ಷ್ಮೀ, ಗೋಪಿ ಆನೆಗಳಿಗೆ ಕಾಯಿ, ಬೆಲ್ಲ, ಹಸಿ ಹುಲ್ಲ, ಒಣ ಹುಲ್ಲು, ಭತ್ತ ನೀಡಿ ಆರೈಕೆ ಮಾಡಲಾಯಿತು. ಸದ್ಯ ಎಲ್ಲಾ ಆನೆಗಳು ಆರೋಗ್ಯವಾಗಿದ್ದು, ಅರಮನೆ ಪ್ರವೇಶಕ್ಕೆ ಸಜ್ಜಾಗುತ್ತಿವೆ. 

Advertisement

ಸ್ಥಳೀಯರ ಸಂಭ್ರಮ: ಇನ್ನು ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳ ಬಗ್ಗೆ ನಿಗಾವಹಿಸಿಕೊಂಡು ಗಜಪಡೆಯ ಆರೋಗ್ಯ ವಿಚಾರಸಿ, ಅವುಗಳಿಗೆ ಬೆಲ್ಲ, ಕಾಯಿ ನೀಡಿ ಪೋಷಣೆ ಮಾಡಿದರು. ಮತ್ತೂಂದೆಡೆ ದಸರಾ ಆನೆಗಳು ಅರಣ್ಯ ಭವನದಲ್ಲಿರುವ ವಿಚಾರ ತಿಳಿದ ಅನೇಕ ಸ್ಥಳಿಯರು ಅರಣ್ಯ ಭವನಕ್ಕೆ ಬಂದು ಆನೆಗಳನ್ನು ಕಂಡು ಖುಷಿಪಟ್ಟರು. ಆನೆಗಳ ಆಟ, ಲಾಲನೆ-ಪಾಲನೆಗಳನ್ನು ಕಂಡು ಸಂತಸಗೊಂಡ ಸಾರ್ವಜನಿಕರು ಅವುಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾ ಸಂಭ್ರಮಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next