Advertisement
ಈ ಪರಿಯಾಗಿ ಬೇಡಿಕೆ ಸೃಷ್ಟಿಯಾಗಿರುವುದು ನಗರದ ಯಾವುದಾದರೂ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲ. ಬದಲಿಗೆ ಸರಕಾರಿ ಶಾಲೆಗೆ. ಇಲ್ಲಿನ ಬಿಡ್ನಾಳದಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ ಕಳೆದ ಮೂರು ವರ್ಷಗಳಿಂದ ಮಕ್ಕಳಿಗೆ ಕೊರತೆಯಿಲ್ಲದಂತೆ ದಾಖಲಾತಿಯಾಗುತ್ತಿದೆ. ಸಾಲದ್ದಕ್ಕೆ ಈಗಾಗಲೇ ಮಕ್ಕಳು ಹೆಚ್ಚಾಗಿದ್ದಾರೆ. ಇನ್ನಷ್ಟು ಹೆಚ್ಚಾದರೆ ಬೋಧನೆ, ಮಕ್ಕಳ ಬಗ್ಗೆ ಕಾಳಜಿ ವಹಿಸುವುದು ಕಷ್ಟವಾಗಲಿದೆ ಪ್ರಮುಖವಾಗಿ ಮಕ್ಕಳಿಗೆ ಕುಳಿತುಕೊಳ್ಳಲು ಕಷ್ಟವಾಗುತ್ತಿದೆ ಎನ್ನುವುದು ಇಲ್ಲಿನ ಶಿಕ್ಷಕರ ವಾದ. ಆದರೆ ಪಾಲಕರು ಮಾತ್ರ ತಮ್ಮ ಮಕ್ಕಳು ಇದೇ ಶಾಲೆಗೆ ಸೇರಿಸಬೇಕು ಎನ್ನುವ ಒತ್ತಡ ಹೇರುತ್ತಿದ್ದಾರೆ. ಈಗಾಗಲೇ ಶಾಲೆ ಮುಂದೆ ದಾಖಲಾಗಿ ಪೂರ್ಣಗೊಂಡಿದ ಎನ್ನುವ ಫಲಕ ಹಾಕಲಾಗಿದೆ.
Related Articles
Advertisement
ಶಾಲೆ ಅಭಿವೃದ್ಧಿಗೆ ಶಾಸಕ ಪ್ರಸಾದ ಅಬ್ಬಯ್ಯ ಅವರ ನೆರವು ಬಹಳಷ್ಟಿದೆ. ಸುತ್ತಮುತ್ತಲಿನ ಎಲ್ಲ ಶಾಲೆಗಳಿಗಿಂತ ಬಿಡನಾಳ ಕರ್ನಾಟಕ ಪಬ್ಲಿಕ್ ಶಾಲೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಶಾಲೆಯ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಶಾಲೆಗೆ ಸ್ಮಾರ್ಟ್ ಕ್ಲಾಸ್, ಹೆಚ್ಚುವರಿ ಕೊಠಡಿ ಸೇರಿದಂತೆ ಎಲ್ಲ ಸೌಲಭ್ಯ ಕಲ್ಪಿಸಿಕೊಟ್ಟಿದ್ದರ ಹಿನ್ನೆಲೆಯಲ್ಲಿ ಸರಕಾರಿ ಶಾಲೆ ಈ ಮಟ್ಟಕ್ಕೆ ಬೆಳೆದು ನಿಲ್ಲಲು ಕಾರಣವಾಗಿದೆ. –ಮೋಹನ ಅಸುಂಡಿ, ಪಾಲಿಕೆ ಮಾಜಿ ಸದಸ್ಯ
ಶಿಕ್ಷಣದ ಗುಣಮಟ್ಟವೇ ಕಾರಣ: ಯಾವುದೇ ಖಾಸಗಿ ಶಾಲೆಗೆ ಕಡಿಮೆ ಇಲ್ಲ ಎನ್ನುವಂತೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿಡನಾಳದಲ್ಲಿ ತಲೆ ಎತ್ತಿ ನಿಂತಿದೆ. ಇಲ್ಲಿನ ಎಲ್‌ಕೆಜಿ, ಯುಕೆಜಿ ಹಾಗೂ ಹಿರಿಯ ಪ್ರಾಥಮಿಕ ಶಿಕ್ಷಣ ದೊರೆಯುತ್ತಿದೆ. ಉತ್ತಮ ಶಿಕ್ಷಕರ ಬೋಧನಾ ಗುಣಮಟ್ಟ, ಎಲ್ಲಾ ವಿಷಯಗಳಿಗೆ ಶಿಕ್ಷಕರು, 5 ಸ್ಮಾರ್ಟ್ ಕ್ಲಾಸ್‌ಗಳು, ಕ್ರೀಡಾ ಮೈದಾನ, ಶಿಸ್ತಿಗೆ ಮೊದಲ ಆದ್ಯತೆ, ಶಿಸ್ತು ಉಲ್ಲಂಘಿಸಿದರೆ ಪಾಲಕರಿಗೆ ಮಾಹಿತಿ ನೀಡಿ ಕ್ರಮ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿದೆ. ಇವೆಲ್ಲವನ್ನೂ ಸಮರ್ಪಕವಾಗಿ ನಿರ್ವಹಿಸುವ ಎಸ್‌ಡಿಎಂಸಿ ತಂಡವಿದೆ.
ಲಾಟರಿಗೆ ಒಪ್ಪದ ಪಾಲಕರು: ಎಲ್‌ಕೆಜಿ, ಯುಕೆಜಿ ಹಾಗೂ 1ನೇ ತರಗತಿ ಆಂಗ್ಲ ಮಾಧ್ಯಮಕ್ಕೆ 30 ವಿದ್ಯಾರ್ಥಿಗಳನ್ನು ತೆಗೆದುಕೊಳ್ಳಬೇಕು. ಆದರೆ ಹೆಚ್ಚಿನ ಅರ್ಜಿಗಳು ಬಂದ ಹಿನ್ನೆಲೆಯಲ್ಲಿ ಲಾಟರಿ ಎತ್ತುವ ಮೂಲಕ 30 ವಿದ್ಯಾರ್ಥಿಗಳಿಗೆ ಅವಕಾಶವನ್ನು ಶನಿವಾರ ನೀಡಲಾಗಿದೆ. ಆದರೆ ಇದಕ್ಕೆ ಒಪ್ಪದ ಪಾಲಕರು ನಮಗೂ ಇದೇ ಶಾಲೆಯಲ್ಲಿಯೇ ದಾಖಲಾತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇದಕ್ಕೆ ಎಸ್‌ಡಿಎಂಸಿಯವರು ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ. ಶಿಕ್ಷಣ ಇಲಾಖೆಯೊಂದಿಗೆ ಚರ್ಚಿಸಿ ಹೆಚ್ಚುವರಿ ಕೊಠಡಿ, ಶಿಕ್ಷಕರ ನೀಡುವಂತೆ ಮನವಿ ಮಾಡಿದ್ದಾರೆ.
ಸಾವಿರ ದಾಟಿದ ಸಂಖ್ಯೆ: ಕಳೆದ ಶೈಕ್ಷಣಿಕ ವರ್ಷದಲ್ಲಿ ಪೂರ್ವ ಪ್ರಾಥಮಿಕದಿಂದ ಹಿಡಿದು 7ನೇ ತರಗತಿವರೆಗೆ 847 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದರು. ಈ ವರ್ಷ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 1 ಸಾವಿರ ದಾಟಿದೆ. ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವುದಕ್ಕೆ ಈ ಶಾಲೆ ಅಪವಾದದಂತಿದ್ದು, ಉತ್ತಮ ಶಿಕ್ಷಣ, ಶಿಕ್ಷಕರ ಕಾಳಜಿಯಿದ್ದರೆ ಸರಕಾರಿ ಶಾಲೆ ಕೂಡ ಖಾಸಗಿ ಶಾಲೆಗೆ ಕಡಿಮೆಯಿಲ್ಲದಂತೆ ಮಕ್ಕಳ ಸಂಖ್ಯೆ ವೃದ್ಧಿಸುವುದರಲ್ಲಿ ಎರಡು ಮಾತಿಲ್ಲ.
–ಬಸವರಾಜ ಹೂಗಾರ