Advertisement

ಪ್ರವೇಶ ಪಡೆದ ವಿದ್ಯಾರ್ಥಿಗಳ ಸ್ಥಿತಿ ಅತಂತ್ರ

12:59 PM Jul 23, 2019 | Team Udayavani |

ಯಾದಗಿರಿ: ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒತ್ತು ನೀಡುವ ಜೊತೆಗೆ ಹಿಂದುಳಿದ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಸ್ಥಾಪಿಸಿರುವ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯವೇ ಇಲ್ಲದಂತಾಗಿದ್ದು, ಪ್ರವೇಶಾತಿ ಪಡೆದ ಮಕ್ಕಳ ಸ್ಥಿತಿ ಅತಂತ್ರವಾಗಿದೆ.

Advertisement

2017-18ರಲ್ಲಿ ಸರ್ಕಾರ ರಾಜ್ಯದಲ್ಲಿ 10 ವಸತಿಯುಕ್ತ ಡಿಗ್ರಿ ಕಾಲೇಜು ಸ್ಥಾಪಿಸಲು ಘೋಷಿಸಿದ್ದು, ಅದರಂತೆ ತಲಾ 25 ಕೋಟಿಯಂತೆ 250 ಕೋಟಿ ರೂಪಾಯಿಯ ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದರಲ್ಲಿ ಹಿಂದುಳಿದ ಹೈಕ ಭಾಗಕ್ಕೆ ಸುಮಾರು 6 ಕಾಲೇಜು ಸ್ಥಾಪಿಸಲು ಉದ್ದೇಶಿಸಿಲಾಗಿದ್ದು, ಈ ನಿಟ್ಟಿನಲ್ಲಿ ಯಾದಗಿರಿಯಲ್ಲಿ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ ಚುರುಕಿನಿಂದ ಸಾಗಿದೆ.

ನಗರದ ಮುದ್ನಾಳ ಗ್ರಾಮದ ವ್ಯಾಪ್ತಿಯಲ್ಲಿ ಸುಮಾರು 10 ಎಕರೆಯಷ್ಟು ವಿಶಾಲ ಪ್ರದೇಶವನ್ನು ಗುರುತಿಸಿ ಕಾಮಗಾರಿ ಆರಂಭಿಸಲಾಗಿದ್ದು, ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ 18 ತಿಂಗಳ ಗಡುವು ನೀಡಲಾಗಿದ್ದು, ಪ್ರಸಕ್ತ 2019-20ನೇ ಶೈಕ್ಷಣಿಕ ಸಾಲಿನಿಂದಲೇ ಯಾದಗಿರಿಯಲ್ಲಿ ವಸತಿಯುಕ್ತ ಕಾಲೇಜು ಪ್ರಾರಂಭಿಸಲು ಕಲಬುರಗಿ ವಿಶ್ವವಿದ್ಯಾಲಯ ಸಂಯೋಜನೆ ನೀಡಿದ್ದು, ಅದರಂತೆ ಪ್ರವೇಶಾತಿಯೂ ಆರಂಭಿಸಲಾಗಿದೆ.

ಸದ್ಯ ಕಟ್ಟಡ ನಿರ್ಮಾಣವಾಗದ ಕಾರಣ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರ ನಿರ್ದೇಶನದಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಯೇ ಸದರಿ ಕಾಲೇಜುನ್ನು ಆರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಕಾಲೇಜಿನಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗಗಳಿಗೆ ತಲಾ 40 ಸೀಟುಗಳು ನಿಗದಿಪಡಿಸಲಾಗಿದ್ದು, ಕಾಲೇಜಿಗೆ ಬೇಕಿರುವ ಉಪನ್ಯಾಸಕರ ಹೆಚ್ಚುವರಿ ಕರ್ತವ್ಯದ ಉಪನ್ಯಾಸಕರನ್ನು ನೇಮಕ ಮಾಡುವ ಕುರಿತು ಆಯುಕ್ತರು ಮುಂದಾಗಿದ್ದು, ಮಕ್ಕಳ ಪ್ರವೇಶಾತಿಯೂ ಆರಂಭಗೊಂಡು ಈವರೆರೆ ಕಲಾ ವಿಭಾಗದಲ್ಲಿ 32, ವಿಜ್ಞಾನದಲ್ಲಿ 23 ಹಾಗೂ ವಾಣಿಜ್ಯ 19 ಸೇರಿದಂತೆ ಒಟ್ಟು 75 ಮಕ್ಕಳು ಪ್ರವೇಶಾತಿ ಪಡೆದಿದ್ದಾರೆ.

ವಸತಿಯುಕ್ತ ಕಾಲೇಜು ಎನ್ನುವ ಕಾರಣದಿಂದ ಜಿಲ್ಲೆಯ ವಿವಿಧೆಡೆಯಿಂದ ವಿದ್ಯಾರ್ಥಿಗಳು ಪ್ರವೇಶ ಪಡೆದಿರುವುದು. ಕಾಲೇಜಿನ ಕಟ್ಟಡವಂತೂ ಇನ್ನೂ ನಿರ್ಮಾಣ ಸ್ಥಿತಿಯಲ್ಲಿದ್ದು, ಇದೀಗ ಕಾಲೇಜಿನಲ್ಲಿ ವಸತಿ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.

Advertisement

ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಿಂದ ಜಿಲ್ಲಾಧಿಕಾರಿಗೆ ಪತ್ರ: 2019-20ನೇ ಸಾಲಿನಿಂದ ಮುದ್ನಾಳ ವ್ಯಾಪ್ತಿಯಲ್ಲಿ ಸರ್ಕಾರಿ ವಸತಿಯುಕ್ತ ಕಾಲೇಜನ್ನು ಪ್ರಸಕ್ತ ಸಾಲಿಗೆ ನಗರದ ಡಿಗ್ರಿ ಕಾಲೇಜಿನಲ್ಲಿಯೇ ಆರಂಭಿಸಲಾಗುತ್ತಿದ್ದು, ಹಾಗಾಗಿ ಇಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಕಾಲೇಜು ಶಿಕ್ಷಣ ಆಯುಕ್ತೆ ಡಾ| ಎನ್‌. ಮಂಜುಳ ಅವರು ಕೋರಿದ್ದಾರೆ. 75 ಬಾಲಕರು ಮತ್ತು 45 ಬಾಲಕಿಯರಿಗೆ ವಸತಿ ಸೌಕರ್ಯವನ್ನು ಸಂಬಂಧಪಟ್ಟ ಇಲಾಖೆಗಳಿಂದ ಕಲ್ಪಿಸುವಂತೆ 2019ರ ಜೂನ್‌ 12ರಂದು ಪತ್ರ ಬರೆದು ಮನವಿ ಮಾಡಿದ್ದಾರೆ.

ಶಾಸಕರೇ ಇತ್ತ ಗಮನ ಹರಿಸಿ:

ಯಾದಗಿರಿ ಮತಕ್ಷೇತ್ರದ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರ ಕ್ಷೇತ್ರದಲ್ಲಿಯೇ ಕಾಲೇಜು ನಿರ್ಮಾಣವಾಗುತ್ತಿದ್ದು, ಈಗಾಗಲೇ ತಾತ್ಕಾಲಿಕ ಡಿಗ್ರಿ ಕಾಲೇಜಿನಲ್ಲಿಯೇ ಕಾಲೇಜು ಆರಂಭಿಸಲಾಗಿದೆ. ಆದರೇ ಮಕ್ಕಳಿಗೆ ವಸತಿ ಸೌಕರ್ಯಕ್ಕೆ ಸಮಸ್ಯೆ ಎದುರಾಗಿದ್ದು, ಈ ಸಮಸ್ಯೆಯನ್ನು ಆಲಿಸಿ ಸೂಕ್ತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಚುರುಕಾಗಿ ಕಾರ್ಯಪ್ರವೃತ್ತರಾಗಬೇಕಿದ್ದ ಶಾಸಕರು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಕೆಲ ದಿನಗಳಿಂದ ನಡೆಯುತ್ತಿರುವ ರಾಜಕೀಯ ಹೈಡ್ರಾಮಾಗಳಿಂದ ರೆಸಾರ್ಟ್‌ಗಳತ್ತ ಮುಖ ಮಾಡಿರುವ ಶಾಕಸರು ವಿದ್ಯಾರ್ಥಿಗಳಿಗೆ ಸೂಕ್ತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ.
•ಅನೀಲ ಬಸೂದೆ
Advertisement

Udayavani is now on Telegram. Click here to join our channel and stay updated with the latest news.

Next