ನವದೆಹಲಿ: ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ)ಗೆ ಆಡಳಿತಾಧಿಕಾರಿಗಳ ನೇಮಕ ಪ್ರಕ್ರಿಯೆಯನ್ನು ಸರ್ವೋಚ್ಚ ನ್ಯಾಯಾಲಯ ಜ.24ಕ್ಕೆ ಮುಂದೂಡಿದೆ.
ಶುಕ್ರವಾರ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಏಕಸದಸ್ಯ ಪೀಠ ಆಡಳಿತಾಧಿಕಾರಿಗಳ ನೇಮಕ ಕುರಿತಂತೆ ವಿಚಾರಣೆಯನ್ನು ಆಲಿಸಿತು. ಜತೆಗೆ ಹಿರಿಯರ ವಕೀಲರಾದ ಅನಿಲ್ ದಿವಾನ್ ಮತ್ತು ಗೋಪಾಲ ಸುಬ್ರಹ್ಮಣ್ಯಂ ನ್ಯಾಯಾಲಯಕ್ಕೆ ಸಲ್ಲಿಸಿದ ಬಿಸಿಸಿಐ ಆಡಳಿತಾಧಿಕಾರಿಗಳ ಹೊಸ ಪಟ್ಟಿ ಬಗ್ಗೆ ಚರ್ಚೆ ನಡೆಸಿತು. ಪಟ್ಟಿ ಪರಿಶೀಲಿಸಿದ ನ್ಯಾಯಮೂರ್ತಿಗಳು 9 ಮಂದಿಯ ಪಟ್ಟಿ ಸಂಖ್ಯೆ ಉದ್ದವಾಯಿತು ಎನ್ನುವ ಅಭಿಪ್ರಾಯವನ್ನು ಇದೇ ವೇಳೆ ವ್ಯಕ್ತಪಡಿಸಿದರು.
ಸುಪ್ರೀಂನಿಂದ ನೇಮಕವಾಗಿದ್ದ ಅಮಿಕಸ್ ಕ್ಯೂರಿ: ಬಿಸಿಸಿಐನಲ್ಲಿ ಲೋಧಾ ಶಿಫಾರಸು ಜಾರಿಗೊಳಿಸಲು ವಿಫಲವಾಗಿದ್ದ ಬಿಸಿಸಿಐ ವಿರುದ್ಧ ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯ ಚಾಟಿ ಬೀಸಿತ್ತು. ಮಾತು ಕೇಳದ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಮತ್ತು ಅಜಯ್ ಶಿರ್ಕೆ ಅವರನ್ನು ಹುದ್ದೆಯಿಂದ ನ್ಯಾಯಾಲಯ ಪದಚ್ಯುತಗೊಳಿಸಿತ್ತು. ಈ ಬೆನ್ನಲ್ಲೇ ಸರ್ವೋಚ್ಚ ನ್ಯಾಯಾಲಯ ಅಮಿಕಸ್ ಕ್ಯೂರಿ (ಮಧ್ಯವರ್ತಿ ವಕೀಲರು) ಹಿರಿಯ ವಕೀಲರನ್ನು ಒಳಗೊಂಡ ಸಮಿತಿಯನ್ನು ನೇಮಿಸಿತ್ತು. ಬಿಸಿಸಿಐಗೆ ಹೊಸ ಆಡಳಿತಾಧಿಕಾರಿಗಳ ಹೆಸರನ್ನು ಆಯ್ಕೆ ಮಾಡುವ ಅಧಿಕಾರವನ್ನು ಕ್ಯೂರಿಗೆ ನೀಡಿತ್ತು. ಅದರಂತೆ ಈಗ ವಕೀಲರು ಒಟ್ಟು 9 ಮಂದಿ ಸದಸ್ಯರ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಹೆಸರು ಗೌಪ್ಯವಾಗಿರಿಸಿ; ನ್ಯಾಯಾಲಯದ ಆದೇಶ: ಸದ್ಯ 9 ಮಂದಿ ಪಟ್ಟಿ ಪ್ರಕಟಗೊಂಡಿದೆ. ಆದರೆ ಪಟ್ಟಿಯಲ್ಲಿ ಇರುವ ಹೆಸರುಗಳು ಇನ್ನೂ ಬಹಿರಂಗಗೊಂಡಿಲ್ಲ. ಜ.24ರವರೆಗೆ ಪಟ್ಟಿಯಲ್ಲಿರುವ ಹೆಸರುಗಳನ್ನು ಗೌಪ್ಯವಾಗಿರಿಸಬೇಕೆಂದು ನ್ಯಾಯಾಲಯ ಅಮಿಕಸ್ ಕ್ಯೂರಿಗೆ ಸೂಚಿಸಿದೆ.
ಹಿಂದಿನ ವರದಿ ತಿದ್ದುಪಡಿ ಮಾಡಿದ ನ್ಯಾಯಾಲಯ: ನ್ಯಾಯಾಲಯ ಇದೇ ವೇಳೆ ಕೆಲವೊಂದು ಗೊಂದಲಗಳನ್ನು ತಿದ್ದುಪಡಿ ಮಾಡಿ ಗೊಂದಲ ನಿವಾರಿಸುವ ಪ್ರಯತ್ನ ನಡೆಸಿತು. ಈ ಹಿಂದೆ ಒಬ್ಬ ವ್ಯಕ್ತಿ ರಾಜ್ಯ ಸಂಸ್ಥೆ ಮತ್ತು ಬಿಸಿಸಿಐ ಸೇರಿ ಒಟ್ಟು 9 ವರ್ಷ ಕಾರ್ಯನಿರ್ವಹಿಸಿದ್ದರೆ ಅಂತಹ ವ್ಯಕ್ತಿಗೆ ಬಿಸಿಸಿಐನಲ್ಲಿ ಅಧಿಕಾರ ಹೊಂದಲು ಅವಕಾಶ ಇಲ್ಲ ಎಂದು ತಿಳಿಸಿತ್ತು.
ಲೋಧಾ ಪ್ರಕಟಿಸಿದ್ದ ಶಿಫಾರಸುವಿನಲ್ಲಿ ಇಂತಹದೊಂದು ಗೊಂದಲ ಉಂಟಾಗಿತ್ತು, ಇದೀಗ ನ್ಯಾಯಾಲಯ ಹಿಂದಿನ ವರದಿಯನ್ನು ತಿದ್ದುಪಡಿ ಮಾಡಿದೆ. ರಾಜ್ಯ ಕ್ರಿಕೆಟ್ ಸಂಸ್ಥೆ ಮತ್ತು ಬಿಸಿಸಿಐ ಸೇರಿ ಒಟ್ಟು 9 ವರ್ಷ ಆಡಳಿತ ಮಾಡಿದ್ದರೆ ಅದು 9 ವರ್ಷದ ಆಡಳಿತ ಸೇವೆ ಎಂದು ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.