ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿ ಶುಕ್ರವಾರ ವಿವಿಧ ಶಾಲಾ, ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಪ್ರಧಾನಿ ಮೋದಿ ಮುಖವಾಡಗಳನ್ನು ಧರಿಸಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡಗೆ ಮತ ನೀಡುವಂತೆ ಪ್ರಚಾರ ನಡೆಸಿ ಗಮನ ಸೆಳೆದರು.
ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿಭಾಗೀಯ ಸಂಚಾಲಕ ಎನ್.ಮಂಜುನಾಥರೆಡ್ಡಿ ನೇತೃತ್ವದಲ್ಲಿ ನಗರದ ವಿಷ್ಣುಪ್ರಿಯ ಹಾಗೂ ಕೃಷ್ಣ ರುಕ್ಮಣಿ ಕಾಲೇಜಿನ ನೂರಾರು ವಿದ್ಯಾರ್ಥಿಗಳು ನಗರದ ಬಿಬಿ ರಸ್ತೆಯ ಶನಿಮಹಾತ್ಮ ದೇವಾಲಯ ದಿಂದ ಬಿಬಿ ರಸ್ತೆಯ ಮುಖಾಂತರ ಬೃಹತ್ ಜಾಥಾ ನಡೆಸಿ ಬಿಜೆಪಿ ಪರ ಘೋಷಣೆ ಕೂಗಿದರಲ್ಲದೇ ಬಿಜೆಪಿ ಬೆಂಬಲಿಸುವಂತೆ ಕರಪತ್ರ ಹಂಚಿದರು.
ನಗರದ ಬಿಬಿ ರಸ್ತೆ, ಅಂಬೇಡ್ಕರ್ ವೃತ್ತ, ಖಾಸಗಿ ಬಸ್ ನಿಲ್ದಾಣ, ಕೋರ್ಟ್ ರಸ್ತೆ, ಹಳೆ ಜಿಲ್ಲಾಸ್ಪತ್ರೆ, ಎಂಜಿ ರಸ್ತೆಗಳಲ್ಲಿ ಸಂಚರಿಸಿದ ವಿದ್ಯಾರ್ಥಿಗಳು ಮೋದಿ ಮತ್ತೂಮ್ಮೆ ಘೋಷಣೆಗಳ ಮೂಲಕ ಮತದಾರರ ಗಮನ ಸೆಳೆದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು.
ಸೇನೆ ಬಲಿಷ್ಠ: ಎಬಿವಿಪಿ ವಿಭಾಗದ ಸಂಚಾಲಕ ಮಂಜುನಾಥ್ ರೆಡ್ಡಿ ಮಾತನಾಡಿ, ಕಳೆದ ಐದು ವರ್ಷದಲ್ಲಿ ಪ್ರಧಾನಿ ಮೋದಿ ಕಪ್ಪು ಚುಕ್ಕೆ ಇಲ್ಲದೆ ಪಾರದರ್ಶಕತೆ ಆಡಳಿತ ನೀಡಿದ್ದಾರೆ. ದೇಶ ಬಲಿಷ್ಠವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಮೋದಿ ಅವರೇ ಕಾರಣ. ಈ ನಿಟ್ಟಿನಲ್ಲಿ ಮತ್ತೂಮ್ಮೆ ಮೋದಿ ಅವರು ಅಧಿಕಾರಕ್ಕೆ ಬರಬೇಕೆಂದು ಹೇಳಿದರು. ಶತ್ರು ದೇಶವನ್ನು ಹಿಮ್ಮೆಟ್ಟಿಸುವ ಸೈನ್ಯ ಸಾಮರ್ಥ್ಯವು ಬಲಗೊಂಡಿತು ಎಂದರು.
ಎಬಿವಿಪಿ ಜಿಲ್ಲಾ ಮುಖಂಡ ಬಾಬುರೆಡ್ಡಿ ಮಾತನಾಡಿ, ದೇಶದ ಭವಿಷ್ಯ ಗಟ್ಟಿಯಾಗಬೇಕಾದರೆ ಮೋದಿ ಅವರು ಮತ್ತೂಮ್ಮೆ ಪ್ರಧಾನಿಯಾಗಬೇಕು. ಅವರಿಂದ ಮಾತ್ರ ಸುಭದ್ರ ದೇಶ ನಿರ್ಮಾಣ ಸಾಧ್ಯ. ದೇಶದ ಹಿತಕ್ಕಾಗಿ ರಜೆ ಪಡೆಯದೆ ದುಡಿಯುತ್ತಿರುವ ಮೋದಿ ಎಲ್ಲರಿಗೂ ಮಾದರಿ ಎಂದರು.
ವಿದ್ಯಾರ್ಥಿಗಳ ಬಳಕೆ ಸಾರ್ವಜನಿಕರಲ್ಲಿ ಚರ್ಚೆ: ಲೋಕಸಭಾ ಚುನಾವಣಾ ಕಾರ್ಯಕ್ಕೆ ಎಬಿವಿಪಿ ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಂಡು ಚುನಾವಣಾ ಪ್ರಚಾರ ಕಾರ್ಯ ನಡೆಸಿದ್ದಕ್ಕೆ ಜಿಲ್ಲಾ ಕೇಂದ್ರದ ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ. ಆದರೆ ಕೆಲ ಖಾಸಗಿ ಕಾಲೇಜುಗಳು ರಾಜಕೀಯ ಪಕ್ಷಗಳ ಪರ ಚುನಾವಣಾ ಪ್ರಚಾರಕ್ಕೆ ವಿದ್ಯಾರ್ಥಿಗಳನ್ನು ಕಳುಹಿಸಿಕೊಟ್ಟ ಕ್ರಮ ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಯಿತು.
ಎಬಿಪಿ ಕಾರ್ಯಕರ್ತರಾದ ಹರೀಶ್, ಮಧು, ಜಯ್, ಕಿರಣ್, ಮಲ್ಲಿಕಾರ್ಜನ್, ಅಮಿತ್, ಅಖೀಲ್, ಬಿಜೆಪಿ ರಾಜ್ಯ ಕಾರ್ಯಾಕಾರಿಣಿ ಸದಸ್ಯ ಲಕ್ಷ್ಮೀನಾರಾಯಣಗುಪ್ತಾ, ಕನ್ನಡ ಸೇನೆ ರಾಜ್ಯಾಧ್ಯಕ್ಷ ಪ್ರಸನ್ನಗೌಡ ಜಾಥಾದಲ್ಲಿ ಭಾಗವಹಿಸಿದ್ದರು.