ತಿಪಟೂರು: ನಗರದ ಸಾವಿರಾರು ಜನರಿಗೆ ಕುಡಿಯುವ ನೀರೋದಗಿಸುವ ಈಚನೂರು ಕೆರೆಗೆ ಯುಜಿಡಿ ಕಲುಷಿತ ನೀರು ಸೇರ್ಪಡೆಯಾಗಿದ್ದು, ನಗರವಾಸಿಗಳಲ್ಲಿ ಆತಂಕ ಉಂಟಾಗಿದೆ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರ ಆರೋಗ್ಯಕ್ಕೆ ಕುತ್ತು ತರಲಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವತ್ಛತೆ, ನೈರ್ಮಲ್ಯತೆ ಕಾಪಾಡಿಕೊಳ್ಳಿ ನಗರವನ್ನು ಅನೈರ್ಮಲ್ಯದಿಂದ ಮುಕ್ತರಾಗಿಸೋಣ ಎಂದು ಬೊಬ್ಬೆ ಹೊಡೆಯುವ ನಗರಸಭೆಯ ನಿರ್ಲಕ್ಷ್ಯಕ್ಕೆ ನಗರವಾಸಿಗಳ ಕುಡಿಯುವ ನೀರಿಗೂ ಕಂಟಕ ಉಂಟಾಗಿದೆ. ನಗರದ ವಿವಿಧ ಬಡಾವಣೆಗಳಿಂದ ಯುಜಿಡಿ ನೀರನ್ನು ಕಲ್ಲೇಗೌಡನಪಾಳ್ಯದ ಬಳಿ ಇರುವ ಹೂವಿನಕಟ್ಟೆಗೆ ಬಿಡಲಾಗಿದೆ.
ಆದರೆ, ಅದನ್ನು ಅಧಿಕಾರಿಗಳು ಸರಿಯಾಗಿ ನಿರ್ವಹಿಸದ ಕಾರಣ ಈಡೇನಹಳ್ಳಿ ಜಾಕ್‌ವೆಲ್‌ನಲ್ಲಿ ಯುಜಿಡಿ ನೀರು ಹಾಗೂ ಮಳೆ ನೀರು ಹೆಚ್ಚಾಗಿ ಹಳ್ಳಗಳ ಮೂಲಕ ಹಿಂಡಿಸ್ಕೆರೆ ಹಾಗೂ ಹುಲ್ಲುಕಟ್ಟೆ ಮಧ್ಯೆ ಹಾಯ್ದುಹೋಗಿರುವ ಹೇಮಾವತಿ ನಾಲೆಗೆ ನುಗ್ಗುತ್ತಿರುವುದರಿಂದ ತಿಪಟೂರಿಗೆ ಕುಡಿಯುವ ನೀರು ಪೂರೈಸುವ ಈಚನೂರು ಕೆರೆಗೆ ಮಿಶ್ರಣವಾಗಿ ಇಡೀ ನಗರದ ಜನರು ಕೊಳಚೆ ಹಾಗೂ ಅನೈರ್ಮಲ್ಯಯುಕ್ತ ನೀರು ಕುಡಿಯುವಂತಾಗಿದೆ. ಇಂತಹ ಘಟನೆ ಮೊದಲೇನಲ್ಲ.
ಇದನ್ನೂ ಓದಿ:- ಶೀಘ್ರವೇ ಸಿದ್ದು-ಎಂ.ಬಿ.ಪಾಟೀಲ ಬಿಜೆಪಿ ಸೇರ್ಪಡೆ: ಕಟೀಲ್
ಇದು ಸಾಮಾನ್ಯವಾಗಿ ಬಿಟ್ಟಿದ್ದು ಪತ್ರಿಕೆ, ಮಾಧ್ಯಮಗಳಲ್ಲಿ ಈ ಹಿಂದೆ ಸುದ್ದಿ ಬಿತ್ತರವಾಗಿತ್ತು. ಆದರೆ, ಸುದ್ದಿ ಬಂದ ನಂತರ ಎಚ್ಚೆತ್ತುಕೊಳ್ಳುವ ಅಧಿಕಾರಿಗಳು ಶಾಶ್ವತವಾಗಿ ಈಸಮಸ್ಯೆಗೆ ಪರಿಹಾರ ಕಂಡುಕೊಳ್ಳದೆ, ತಾತ್ಕಾಲಿಕ ಕೆಲಸ ಮಾಡುವ ಮೂಲಕ ಯುಜಿಡಿ ನೀರು ಈಚನೂರು ಕೆರೆಯನ್ನು ಸೇರುವಂತೆ ಮಾಡಿದ್ದಾರೆ ಎಂಬುದು ನಾಗರೀಕರ ಆಕ್ರೋಶವಾಗಿದೆ.
ಒಟ್ಟಾರೆ ನಗರಸಭೆ ಅಧಿಕಾರಿಗಳು ಹಾಗೂ ತಾಲೂಕು ಆಡಳಿತ ಮತ್ತು ಜವಾಬ್ದಾರಿಯುತ ಜನಪ್ರತಿನಿಧಿಗಳು ಈಗಲಾದರೂಎಚ್ಚೆತ್ತುಕೊಂಡು ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಿ, ತಿಪಟೂರಿನ ಜನತೆಯ ಆರೋಗ್ಯ, ಗೌರವನ್ನು ಉಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.