Advertisement
ಸಭೆ ಆರಂಭಕ್ಕೂ ಮೊದಲೇ ಆಗಮಿಸಿದ್ದ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರಿಗಾಗಿ ಸುಮಾರು ಅರ್ಧ ಗಂಟೆ ಕಾದು ಕುಳಿತರು. ಸಭೆ ಆರಂಭಗೊಳ್ಳುತ್ತಿದ್ದಂತೆ, ಮೊದಲ ಬಾರಿಗೆ ಆಗಮಿಸಿದ ಸಿದ್ದರಾಮಯ್ಯ ಅವರನ್ನು ಜಿಪಂನಿಂದ ಸನ್ಮಾನಿಸಲಾಯಿತು.
Related Articles
Advertisement
ಇದಕ್ಕೆ ಜಮಖಂಡಿ ಶಾಸಕ ಆನಂದ ನ್ಯಾಮಗೌಡ, ತೇರದಾಳ ಶಾಸಕ ಸಿದ್ದು ಸವದಿ ಕೂಡ ಧ್ವನಿಗೂಡಿಸಿದರು. ಚಿಮ್ಮಡದ ಸುಟ್ಟ ಟಿಸಿ ಬದಲಿಸಿಕೊಡಲು ಎಷ್ಟು ದಿನ ಬೇಕಾಯಿತು. ಎಷ್ಟು ಹಣ ಕೊಟ್ಟಾಗ ಟಿಸಿ ಕೊಟ್ಟರೂ ನೀವೇ ಹೇಳಿ ಎಂದು ಸಿದ್ದು ಸವದಿ ಹೆಸ್ಕಾಂ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರ ಮಾತು ಆಲಿಸಿದ ಸಿದ್ದರಾಮಯ್ಯ, ಹೆಸ್ಕಾಂ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು, ಕುಡಿಯುವ ನೀರಿಗೆ ಸಂಬಂಧಿಸಿದ ಟಿಸಿ ತಕ್ಷಣ ಬದಲಿಸಬೇಕು. ರೈತರ ಟಿಸಿಗಳಿದ್ದಲ್ಲಿ ಲಂಚ ಪಡೆಯದೇ ಬದಲಿಸಿಕೊಡಬೇಕು ಎಂದು ತಿಳಿಸಿದರು. ಹೆಸ್ಕಾಂ ಎಸ್‌ಇ ಹಿರೇಮಠ, ಲಂಚ ಪಡೆದು ಟಿಸಿ ಬದಲಿಸುವ ಪದ್ಧತಿ ಇಲ್ಲ. ಈಗ ಪಾರದರ್ಶಕ ಹಾಗೂ ಕಟ್ಟುನಿಟ್ಟಾಗಿ ಆಡಳಿತ ನಡೆದಿದೆ ಎಂದು ಉತ್ತರಿಸಿದರು.
ಹೆಸ್ಕಾಂ ಅಧಿಕಾರಿಯ ಈ ಹೇಳಿಕೆಗೆ ಮತ್ತಷ್ಟು ಗರಂ ಆದ ಸಿದ್ದು, ಲಂಚ ಪಡೆದು ಟಿಸಿ ಕೊಟ್ಟಿದ್ದರೆ, ನೀನು ರಾಜೀನಾಮೆ ಕೊಡ್ತಿಯಾ ಎಂದು ಪ್ರಶ್ನಿಸಿದರು.
ಭೂ ಬ್ಯಾಂಕ್ ಸ್ಥಾಪಿಸಿ: ಜಿಲ್ಲೆಯಲ್ಲಿ ವಿದ್ಯುತ್ ವಿತರಣೆ ಕೇಂದ್ರ, ವಸತಿ ನಿಲಯ, ಅಂಗನವಾಡಿ ಹೀಗೆ ವಿವಿಧ ಹೊಸ ಯೋಜನೆಗಳಿಗೆ ಭೂಮಿ ದೊರೆಯುತ್ತಿಲ್ಲ. ಇದರಿಂದ ಯೋಜನೆ ವಿಳಂಬವಾಗುತ್ತಿವೆ. ಹೀಗಾಗಿ ನಾನು ಸಿಎಂ ಆಗಿದ್ದಾಗ ಪ್ರತಿ ಜಿಲ್ಲೆಯಲ್ಲಿ ಭೂ ಬ್ಯಾಂಕ್ ರಚಿಸಲು ಸೂಚಿಸಿದ್ದೆ. ಈಗ ಜಿಲ್ಲೆಯ ಎಲ್ಲ ತಾಲೂಕು ಮಟ್ಟದಲ್ಲಿ ಸರ್ಕಾರಿ ಭೂಮಿ ಎಷ್ಟಿದೆ, ಒತ್ತುವರಿಯಾದ ಭೂಮಿ ಎಷ್ಟು, ಯಾವ ಹಂತದಲ್ಲಿದೆ ಎಂಬುದು ಸಮೀಕ್ಷೆ ಮಾಡಿ, ಸರ್ಕಾರಿ ಭೂಮಿ ಗುರುತಿಸಿ, ಭೂ ಬ್ಯಾಂಕ್ ಸ್ಥಾಪಿಸಬೇಕು. ಅಗತ್ಯ ಯೋಜನೆಗಳಿಗೆ ಆ ಭೂಮಿ ಹಂಚಿಕೆ ಮಾಡಬೇಕು ಎಂದು ತಿಳಿಸಿದರು.
ಹೆರಕಲ್ ಯೋಜನೆ; ಜಂಟಿ ಪರಿಶೀಲನೆ: ಹೆರಕಲ್ ಬಳಿಯ ಘಟಪ್ರಭಾ ನದಿಯಿಂದ ಬಾಗಲಕೋಟೆಗೆ ಶಾಶ್ವತ ಕುಡಿಯುವ ನೀರು ಪೂರೈಕೆಯ 72 ಕೋಟಿ ಯೋಜನೆ ವಿಳಂಬ ಕುರಿತು ಕೆಡಿಪಿ ಸಭೆಯಲ್ಲಿ ಬಿಸಿ ಬಿಸಿ ಚರ್ಚೆಯಾಯಿತು. ಬಿಟಿಡಿಎ ಮತ್ತು ಅರಣ್ಯ ಅಧಿಕಾರಿಗಳನ್ನು ಸಿದ್ದರಾಮಯ್ಯ, ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹಾಗೂ ಶಾಸಕ ನಿರಾಣಿ ತರಾಟೆಗೆ ತೆಗೆದುಕೊಂಡರು.
2014ರಿಂದ ಆರಂಭಗೊಂಡ ಯೋಜನೆ ಇನ್ನೂ ಮುಗಿದಿಲ್ಲ. ಬಿಟಿಡಿಎ ಅಧಿಕಾರಿಗಳು, ಅರಣ್ಯ ಇಲಾಖೆ ಅನುಮತಿ ಕೊಟ್ಟಿಲ್ಲ ಎಂದು ಹೇಳುತ್ತಿದ್ದಾರೆ. ಇಲ್ಲಿನ ಅಧಿಕಾರಿಗಳಲ್ಲಿ ಸಮನ್ವಯತೆ ಇಲ್ಲ. ಪರಸ್ಪರ ಒಬ್ಬರಿಗೊಬ್ಬರು ಭೇಟಿಯಾಗಿ ಮಾತನಾಡುವುದೇ ಪ್ರತಿಷ್ಠೆ ಮಾಡಿಕೊಂಡಿದ್ದಾರೆ. ಎಲ್ಲ ಇಲಾಖೆಯ ಅಧಿಕಾರಿಗಳಲ್ಲಿ ಸಮನ್ವಯತೆ ಇರಬೇಕು. ಡಿಸಿ, ಸಿಇಒ ಇದನ್ನು ಮಾಡಬೇಕು ಎಂದು ಸೂಚಿಸಿದರು.
ಹೆರಕಲ್ ಯೋಜನೆ ಕುರಿತು ಜನಪ್ರತಿನಿಧಿಗಳು, ಬಿಟಿಡಿಎ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಜಂಟಿ ಪರಿಶೀಲನೆಗೆ ಜು. 6ರಂದು ದಿನ ನಿಗದಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಸಭೆಗೆ ತಿಳಿಸಿದರು.