ಪಿಯುಸಿ ಮುಗಿಸಿ ಬಿ.ಎಸ್ಸಿಗೆ ಹೆಜ್ಜೆ ಇಟ್ಟ ದಿನಗಳು. ಮೊಬೈಲ್ ಕೊಂಡು ತಿಂಗಳು ಕಳೆದಿತ್ತು. ವಾಟ್ಸ್ಯಾಪ್ ಇತ್ತಾದರೂ ದಿನಕ್ಕೆ ಹತ್ತಿಪ್ಪತ್ತು ಮೆಸೇಜ್ ಮಾತ್ರ ಬರುತ್ತಿದ್ದು ದರಿಂದ, ಅದರ ಮೇಲೆ ಅಷ್ಟೊಂದು ಆಸಕ್ತಿ ಇರಲಿಲ್ಲ. ಆದರೆ, ದಿನ ಕಳೆದಂತೆ ಗೆಳೆಯರ ಸಂಖ್ಯೆ ಬೆಳೆಯುತ್ತಾ ಹೋಯ್ತು. ಗೆಳೆಯರು ಕಳುಹಿಸಿದ ಸಂದೇಶ ನನಗೆ ತಪ್ಪೆನಿಸಿದರೆ ಸಾಕು, ಅವರು ‘ನೀ ಹೇಳಿದ್ದೇ ಸತ್ಯ ಕಣಪ್ಪಾ’ ಅನ್ನೋವರೆಗೂ ನಾನು ಬಿಡುತ್ತಿರಲಿಲ್ಲ. ಇಬ್ಬರು ಗೆಳೆಯರಂತೂ ಕೆಲವು ದಿನ ಮಾತು ಬಿಟ್ಟಿದ್ದೂ ಉಂಟು!
ತರಗತಿ ನಡುವಿನ ವಿರಾಮದ ಸಮಯ. ನನ್ನ ಪಕ್ಕದಲ್ಲಿ ಕುಳಿತಿದ್ದ ಕಿರಣ್ ವಾಟ್ಸ್ಯಾಪ್ ತೋರಿಸುತ್ತಾ, “ಹುಡುಗ- ಹುಡುಗಿಯರ ಒಂದು ಗ್ರೂಪ್ ಮಾಡಿದ್ದೇವೆ. ಪ್ರತಿ ಸಲವೂ ಏನಾದರೂ ವಿಷಯಕ್ಕೆ ವಾಗ್ವಾದ ನಡೆಯುತ್ತಲೇ ಇರುತ್ತದೆ. ಆದರೆ, ಆ ಚರ್ಚೆಯಲ್ಲಿ ಹುಡುಗೀರದ್ದೇ ಮೇಲುಗೈ. ಈ ಗ್ರೂಪ್ ಗೆ ನಿನ್ನನ್ನು ಸೇರಿಸುತ್ತಿದ್ದೇನೆ. ಹೇಗಾದರೂ ಮಾಡಿ, ಹುಡುಗರಿಗೆ ಗೆಲುವು ತಂದು ಕೊಡು’ ಎಂದು ಸೇರಿಸಿಯೇಬಿಟ್ಟ. ಮುಂಜಾನೆ ಮತ್ತು ರಾತ್ರಿ ಮಾತ್ರ ವಾಟ್ಸ್ಯಾಪ್ ಬಳಸುತ್ತಿದ್ದ ನಾನು, ಅಂದು ರಾತ್ರಿ ನೆಟ್ ಆನ್ ಮಾಡಿದ್ದೇ ತಡ, ಆ ಗ್ರೂಪ್‌ನ ಸಂದೇಶಗಳು ಸೆಂಚುರಿಯನ್ನೂ ಮೀರಿಸಿದ್ದು ಕಂಡಿತು. ಓದುತ್ತಾ ಹೋದೆ, ಹುಡುಗಿಯರು, ಹುಡುಗರಿಗೆ ಸೋಲಿನ ಕಿರೀಟ ತೊಡಿಸಿದ್ದರು. ನಾನೂ ಮಧ್ಯದಲ್ಲಿ ಒಂದೊಂದು ಸಂದೇಶ ರವಾನಿಸತೊಡಗಿದೆ.
ಒಂದೆರಡು ದಿನ ಕಳೆಯಿತು. ಹುಡುಗರೆಲ್ಲ ಸೇರಿ ಒಂದು ಒಪ್ಪಂದ ಮಾಡಿಕೊಂಡೆವು. ನಾವು ಚರ್ಚೆಯಲ್ಲಿ ಮೇಲುಗೈ ಸಾಧಿಸಬೇಕಾದರೆ, “ಒಗ್ಗಟ್ಟೇ ಮೂಲತಂತ್ರ’ವೆಂದು ಗ್ರೂಪಿನಲ್ಲಿದ್ದ ಹುಡುಗರೆಲ್ಲ (ಕಿರಣ್, ರೋಹಿತ್, ಪ್ರಶಾಂತ್, ಸೌರಭ, ಪ್ರಮೋದ್, ಮಲ್ಲಿಕಾರ್ಜುನ್, ಬಸವರಾಜ, ಜೀನೇಂದ್ರ ಹಾಗೂ ಇತರರು) ಒಂದೇ ಸಮಯಕ್ಕೆ ಆನ್‌ಲೈನ್‌ಗೆ ಬರೋಣವೆಂದು, ಮಾತಾಡಿಕೊಂಡೆವು. ಅದರಂತೆಯೇ ರಾತ್ರಿ 9ಕ್ಕೆ ಒಟ್ಟಿಗೆ “ದಾಳಿ’ ಇಟ್ಟೆವು. ನಮ್ಮ ‘ಸಾಮೂಹಿಕ ಒಪ್ಪಂದ’ದ ಸಂಗತಿ ಹುಡುಗಿಯರಿಗೆ ಗೊತ್ತೇ ಆಗಲಿಲ್ಲ. ಆದರೆ, ಒಂದು ದಿನ ಬೆಳಗ್ಗೆದ್ದು ನೋಡ್ತೀವಿ… ಎಲ್ಲ ಹುಡುಗಿಯರೂ ಲೆಫ್ಟ್ ಲೆಫ್ಟ್ ಲೆಫ್ಟ್..!
ವಾಟ್ಸ್ಯಾಪ್ ಗ್ರೂಪ್ : PCM PLATINUMS
ಗ್ರೂಪ್ ಅಡ್ಮಿನ್ : ನಿವೇದಿತಾ, ಜ್ಯೋತಿ, ಭಾಗ್ಯ, ಪ್ರತೀಕ್ಷಾ, ಕಿರಣ್, ಅಜಿತ್