ವಾಟ್ಸಾಪ್ ಗ್ರೂಪ್; “ನನ್ನ ಓದು’
ಗ್ರೂಫ್ ಅಡ್ನಿನ್; ರಾಜು ಹಗ್ಗದ, ನರೇಶ್ ಕಾಮತ್ ಅಂಬಿ ಎಸ್ ಹೈಯ್ನಾಳ್.
ನಮ್ಮಲ್ಲಿ ಒಂದಷ್ಟು ಮಂದಿ ಕಥೆ, ಕವನಗಳನ್ನು ಬರೆಯುವವರಿದ್ದಾರೆ. ಅವರನ್ನೆಲ್ಲಾ ಒಂದೆಡೆ ಸೇರಿಸಿ, ಅವರ ಕಥೆಯ ಜೊತೆಗೆ ಬೇರೆ ಬೇರೆ ಕಥೆಗಳ ಬಗ್ಗೆ ಚರ್ಚಿಸಬೇಕು ಅನ್ನೋದು ಬಹಳ ದಿನದ ಕನಸೇ ಆಗಿತ್ತು. ಅದು ನನಸಾಗಿದ್ದು “ನನ್ನ ಓದು’ ಎನ್ನುವ ವಾಟ್ಸಾಪ್ ಗ್ರೂಪ್‌ನಿಂದ.
ಇದರಲ್ಲಿ ಪ್ರತಿದಿನವು ಒಂದೊಂದು ಕಥೆಗಳನ್ನು ಮಂಡಿಸಿ, ಅದರ ಬಗ್ಗೆ ಚರ್ಚೆ ನಡೆಸುತ್ತೇವೆ. ಮೊದಲು ನಾಲ್ಕು ಸದಸ್ಯರಿದ್ದರು. ಈಗ ಇಪ್ಪತ್ತಕ್ಕೂ ಹೆಚ್ಚು ಸಮಾನ ಮನಸ್ಕ ಸದಸ್ಯರನ್ನು ನಮ್ಮ ವಾಟ್ಯಾಪ್ ಒಳಗೊಂಡಿದೆ. ದಿನವೂ ಎಲ್ಲರೂ ಕತೆಯ ಬಗೆಗೆ ಮುಕ್ತವಾಗಿ ಅಭಿಪ್ರಾಯ ಮಂಡಿಸುವುದು ಮೂಲ ಉದ್ದೇಶ. ಇದರಲ್ಲಿ ಪೂರ್ವಾಗ್ರಹ ಪೀಡಿತ ಕಾಮೆಂಟುಗಳಿಗೆ ಜಾಗವಿಲ್ಲ ಅನ್ನೋದು ಕಂಡೀಷನ್.
ಶುರುವಿನಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತು. ಸಮೂಹ ಸದಸ್ಯರ ಸಂಖ್ಯೆ ಹೆಚ್ಚಾದ ಮೇಲೆ ವೈವಿಧ್ಯಮಯ ಅಭಿಪ್ರಾಯಗಳಿಂದ ನಮ್ಮ ಮೂಲ ಉದ್ದೇಶಕ್ಕೆ ಮತ್ತಷ್ಟು ಹೊಳಪು ಸಿಗಬಹುದು. ಕಥೆಯ ನಿರೂಪಣೆ, ವಿಷಯ ಆಯ್ಕೆ, ಬರವಣಿಗೆ ತಂತ್ರಗಳು, ಯೋಚನೆ ಹೀಗೆ ಎಲ್ಲವೂ ಮತ್ತಷ್ಟು ಉತ್ತಮ ಗೊಳ್ಳಬಹುದು ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಆದರೆ, ಇಲ್ಲಿ ಆಗಿದ್ದು ಬೇರೆ. ತಂಡದ ಸದಸ್ಯರಲ್ಲಿ ಒಬ್ಬ ಸದಸ್ಯ ಕೆಟ್ಟ ಹುಳುವಿನಂತೆ ಸೇರಿ ಕೊಂಡುಬಿಟ್ಟಿದ್ದ. ಕತೆಯ ಅನಿಸಿಕೆ ತಿಳಿಸಲು ಟೈಪು ಮಾಡುವಾಗ ಕಾಗುಣಿತವೇನಾದರೂ ತಪ್ಪಾದರೆ, ಅದುವೇ ದೊಡ್ಡ ಅಪರಾಧವೆಂದು ಹೇಳುತ್ತಾ ಅವರ ತೇಜೊವದೆಗೆ ಇಳಿಯುತಿದ್ದ. ಕಥೆಯ ಬಗ್ಗೆ ಅಭಿಪ್ರಾಯ ತಿಳಿಸುವುದರ ಬದಲು, ಉಳಿದವರ ತಪ್ಪನ್ನು ಕಂಡು ಹಿಡಿಯುವುದನ್ನೇ ಉದ್ದೇಶವಾಗಿಸಿಕೊಂಡಿದ್ದ. ಅದಲ್ಲದೆ ಸಮೂಹದಲ್ಲಿದ್ದ ಮಹಿಳಾ ಸದಸ್ಯರಿಗೆ ಹೆಚ್ಚಿನ ಕಾಳಜಿ ತೋರಿಸುವಂತೆ ನಟಿಸುತಿದ್ದ. ತಾನೆ ಎಲ್ಲ ಬಲ್ಲವನಂತೆ ಆಡುತಿದ್ದ.
ಈ ರೀತಿ ಮಹಿಳಾ ಒಲವು ಇದ್ದುದರಿಂದ ಒಂದು ಸಲ ಹೀಗಾಯ್ತು. ನನ್ನ ಡಿಪಿಯಲ್ಲಿ ಅಂಬರೀಷ್ ಅವರ ಫೋಟೋ ಇತ್ತು. ಆತನಿಗೆ ನಾನು ಗಂಡೋ, ಹೆಣ್ಣೋ ಅನ್ನೋದನ್ನು ತಿಳಿದುಕೊಳ್ಳುವ ಕುತೂಹಲ ಶುರುವಾಯಿತು ಅನಿಸುತ್ತದೆ. ಗ್ರೂಪಿನಲ್ಲೇ-” ನೀನು ಹುಡುಗನಾ? ಹುಡುಗೀನಾ?’ ಎಂದು ಕೇಳಲು ಶುರು ಮಾಡಿದ. ನನಗೆ ಕೋಪ ನೆತ್ತಿಗೇರಿ, “ಅಲ್ಲಯ್ಯ, ಇಲ್ಲಿ ಕತೆಗೆ ತಮ್ಮ ಅಭಿಪ್ರಾಯ ತಿಳಿಸುವುದಷ್ಟೇ ಮುಖ್ಯ. ಅವರು ಗಂಡಾಗಲಿ,ಹೆಣ್ಣಾಗಲಿ, ನಪುಂಸಕರಿರಲಿ, ನಿನಗೇಕೆ? ಕೋತಿ ತಾನು ಕೆಡೋದಲ್ಲದೆ ವನವನ್ನೆಲ್ಲಾ ಕೆಡಿಸಬಾರದು’ ಅಂತ ದಬಾಯಿಸಿದೆ.
ಇದನ್ನು ಗಮನಿಸಿದ ಗ್ರೂಪ್‌ನ ಇತರ ಸದಸ್ಯರೂ ಅವನನ್ನು ತರಾಟೆಗೆ ತೆಗೆದುಕೊಂಡರು. ಅಷ್ಟಕ್ಕೇ ಅವನಿಗೆ ಅವಮಾನವಾದಂತಾಗಿ,
ಎಲ್ಲರ ಕ್ಷಮೆ ಕೇಳಿ ಗ್ರೂಪಿನಿಂದ ಪರಾರಿಯಾದ.
ಅಂಬಿ ಎಸ್. ಹೈಯ್ನಾಳ್