ಹೊಸದಿಲ್ಲಿ: ಹೃದ್ರೋಗಿಗಳಿಗೆ ಬೇಕಾದ ಸ್ಟೆಂಟ್‌ಗಳ ಬೆಲೆಯನ್ನು ಇಳಿಸಿದ ಬೆನ್ನಲ್ಲೇ ಇದೀಗ ಮಂಡಿಚಿಪ್ಪು ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗಳಿಗೂ ಕೇಂದ್ರ ಸರಕಾರ ರಿಲೀಫ್ ನೀಡಿದೆ.
ಮಂಡಿಚಿಪ್ಪು ಅಳವಡಿಸಿಕೊಳ್ಳುವ ಚಿಕಿತ್ಸೆಯ ವೆಚ್ಚವನ್ನು ಶೇ.70ರಷ್ಟು ಇಳಿಸಲಾಗಿದೆ. ಆದ್ದರಿಂದ ಶಸ್ತ್ರಚಿಕಿತ್ಸೆ ವೆಚ್ಚ, ಸುಮಾರು 54 ಸಾವಿರ ರೂ.ಗಳಿಂದ 1.14 ಲಕ್ಷ ರೂ. ಆಗಲಿದೆ.
ಇದರೊಂದಿಗೆ ಕ್ಯಾನ್ಸರ್ ರೋಗಿಗಳಿಗೆ ವಿಶೇಷ ಅಳವಡಿಕೆ ಶಸ್ತ್ರಚಿಕಿತ್ಸೆಗಳ ಬೆಲೆಯನ್ನು 4-9 ಲಕ್ಷ ರೂ.ಗಳಿಂದ ಗರಿಷ್ಠ 1.13 ಲಕ್ಷ ರೂ.ಗಳಿಗೆ ನಿಗದಿಪಡಿಸಲಾಗಿದೆ.
ಖಾಸಗಿ ಆಸ್ಪತ್ರೆಗಳು ಮಂಡಿಚಿಪ್ಪು ಅಳವಡಿಕೆ ಚಿಕಿತ್ಸೆಗೆ ಭಾರೀ ದರವನ್ನು ವಿಧಿಸುತ್ತಿರುವ ಬಗ್ಗೆ ಆಪಾದನೆಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಇದಕ್ಕಾಗಿ ಗರಿಷ್ಠ ದರವನ್ನು ನಿಗದಿ ಮಾಡಿದೆ. ಇದರಿಂದ ವಾರ್ಷಿಕ 1500 ಕೋಟಿ ರೂ.ಗಳಷ್ಟು ರೋಗಿಗಳಿಗೆ ಉಳಿತಾಯವಾಗಲಿದೆ.
“ಶಸ್ತ್ರಚಿಕಿತ್ಸೆ ಹೆಸರಲ್ಲಿ ಅನೈತಿಕವಾಗಿ ಲಾಭ ಗಳಿಸುವುದನ್ನು ಕೇಂದ್ರ ಸರಕಾರ ಮೂಕ ಪ್ರೇಕ್ಷಕವಾಗಿ ನೋಡುವುದಿಲ್ಲ’ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ. ಸರಕಾರದ ದಾಖಲೆಗಳ ಪ್ರಕಾರ ಭಾರತದಲ್ಲಿ ಸುಮಾರು 1.5 ರಿಂದ 2 ಕೋಟಿಯಷ್ಟು ಮಂದಿಗೆ ಮಂಡಿಚಿಪ್ಪು ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದರು.