Advertisement

ಪಂಚಕಲ್ಯಾಣ-ಮಹಾಮಸಕಾಭಿಷೇಕ ಮುಂದೂಡಿಕೆ

03:02 PM Jan 26, 2022 | Shwetha M |

ಮುದ್ದೇಬಿಹಾಳ: ಪಟ್ಟಣದ ಆಲಮಟ್ಟಿ ರಸ್ತೆ ಪಕ್ಕದಲ್ಲಿರುವ ಅರಿಹಂತಗಿರಿಯಲ್ಲಿ ಫೆಬ್ರವರಿ 3ರಿಂದ 7ರವರೆಗೆ 5 ದಿನಗಳ ಕಾಲ ಅದ್ಧೂರಿಯಿಂದ ನಡೆಸಲು ತೀರ್ಮಾನಿಸಲಾಗಿದ್ದ ಪ್ರಥಮ ತೀರ್ಥಂಕರ 1008 ಭಗವಾನ ಆದಿನಾಥ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವ ಮತ್ತು ಪ್ರಥಮ ಮೋಕ್ಷಗಾಮಿ 1008 ಭಗವಾನ ಬಾಹುಬಲಿ ಸ್ವಾಮಿಯ ಪ್ರಥಮ ಮಹಾ ಮಸ್ತಕಾಭಿಷೇಕ ಮಹೋತ್ಸವ ಕಾರ್ಯಕ್ರಮವನ್ನು ಕೋವಿಡ್‌ನ‌ ಒಮಿಕ್ರಾನ್‌ ನಿಯಮಗಳ ಹಿನ್ನೆಲೆ ಜೈನ ಮುನಿಗಳ ಆದೇಶದ ಮೇರೆಗೆ ಮುಂಬರುವ ಜೂನ್‌ ತಿಂಗಳಿಗೆ ಮುಂದೂಡಲಾಗಿದೆ ಎಂದು ಅರಿಹಂತ ಚಾರಿಟೇಬಲ್‌ ಟ್ರಸ್ಟ್‌ನ ಅಧ್ಯಕ್ಷರೂ ಆಗಿರುವ ಪಂಚಕಲ್ಯಾಣ ಮಹಾಮಸ್ತಕಾಭಿಷೇಕ ಮಹೋತ್ಸವದ ಕಾರ್ಯಾಧ್ಯಕ್ಷ ಮಹಾವೀರ ಸಗರಿ, ಸಮಾಜದ ಮುಖಂಡರಾದ ಅಶೋಕ ಮಣಿ, ಗೊಮ್ಮಟೇಶ ಸಗರಿ, ಮಾಣಿಕ ಸಗರಿ ತಿಳಿಸಿದರು.

Advertisement

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಎರಡು ಬಾರಿ ಈ ಸಮಾರಂಭವನ್ನು ಕೋವಿಡ್‌ ಹಿನ್ನೆಲೆ ಮುಂದೂಡಲಾಗಿತ್ತು. ಈ ಬಾರಿ ನಡೆಸಲೇಬೇಕು ಎಂದು ತೀರ್ಮಾನಿಸಿ ಸೋಮವಾರ ಸಮಾಜದ ಮುಖಂಡರೊಂದಿಗೆ ತಹಶೀಲ್ದಾರ್‌ ಅವರನ್ನು ಭೇಟಿ ಮಾಡಿ ಕೆಲವೇ ಜನರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಕೊಡುವಂತೆ ಮನವಿ ಮಾಡಲಾಗಿತ್ತು. ಆದರೆ ಸರ್ಕಾರದ ನಿಯಮಗಳನ್ನು ಪಾಲಿಸಲೇಬೇಕಾದ ಅನಿವಾರ್ಯತೆ ಹಿನ್ನೆಲೆ ಅನುಮತಿ ಸಿಗಲಿಲ್ಲ. ಹೀಗಾಗಿ ಹಿರಿಯ ಮುನಿಗಳ ಜೊತೆ ಚರ್ಚಿಸಿ ಮುಂದೂಡುವ ತೀರ್ಮಾನಕ್ಕೆ ಬರಬೇಕಾಯಿತು ಎಂದರು.

ಈಗಾಗಲೇ ಅರಿಹಂತಗಿರಿಯಲ್ಲಿರುವ ಬಿಎಸ್‌ ಡಬ್ಲ್ಯೂ ಮತ್ತು ಎಂಎಸ್‌ಡಬ್ಲ್ಯೂ ಕಾಲೇಜು ಆವರಣದಲ್ಲಿ ಅಖಂಡ 22 ಅಡಿ ಎತ್ತರದ ಪೀಠದ ಮೇಲೆ 11 ಅಡಿ ಎತ್ತರದ 5.5 ಟನ್‌ ತೂಕದ ಭಗವಾನ್‌ ಬಾಹುಬಲಿ ಸ್ವಾಮಿಯ ವಿಶಾಲ ಕಾಯದ ಮೂರ್ತಿಯನ್ನು ರಾಜಸ್ಥಾನ ರಾಜ್ಯದ ಜೈಪುರದಲ್ಲಿ ನಿರ್ಮಿಸಿ ತಂದು ಪ್ರತಿಷ್ಠಾಪಿಸಲಾಗಿದೆ. ಇದು ಇಡಿ ಉತ್ತರ ಕರ್ನಾಟಕದಲ್ಲೇ ಅತಿ ಸುಂದರವಾದ ಹಾಗೂ ಎತ್ತರವಾದ ಮೂರ್ತಿ ಎನ್ನುವ ಕೀರ್ತಿಗೆ ಪಾತ್ರವಾಗಿದೆ. ಶ್ರವಣಬೆಳಗೊಳ, ಕಾರ್ಕಳ, ವೇಣೂರ, ಧರ್ಮಸ್ಥಳ, ಗೊಮ್ಮಟಗಿರಿ ಹಾಗೂ ಕನಕಗಿರಿಯಲ್ಲಿ ಸ್ಥಾಪಿಸಿರುವ ಬಾಹುಬಲಿ ಮೂರ್ತಿಗಳ ಸಾಲಿಗೆ ಇದು ಸೇರಿದಂತಾಗಿದೆ. ಇದು ಈ ಭಾಗದ ಇತಿಹಾಸದ ಪುಟ ಸೇರಿದೆ. ಇಲ್ಲಿ ಪ್ರತಿ ವರ್ಷ ವಾರ್ಷಿಕ ಪೂಜೆ ಹಾಗೂ ಪ್ರತಿ 12 ವರ್ಷಕ್ಕೊಮ್ಮೆ ಮಹಾ ಮಸ್ತಕಾಭಿಷೇಕ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಇದೇ ವೇಳೆ ಜೈಪುರದಲ್ಲಿ ತಯಾರಿಸಲಾದ ಸಂಗಮವರಿ ಮಾರ್ಬಲ್‌ ಕಲ್ಲಿನಲ್ಲಿ ನಿರ್ಮಿತ 34 ಇಂಚು ಎತ್ತರ ಹಾಗೂ 2.75 ಕ್ವಿಂಟಲ್‌ ತೂಕದ 1.50 ಲಕ್ಷ ರೂ ವೆಚ್ಚದ 1008 ಪ್ರಥಮ ತೀರ್ಥಂಕರ ಆದಿನಾಥ (ವೃಷಭನಾಥ) ಭಗವಾನರ ಮೂರ್ತಿಯನ್ನು ಪ್ರದರ್ಶಿಸಿದ ಅವರು, ಈ ಮೂರ್ತಿಯನ್ನು ಮೊದಲಿನ ಪೀಠದ ನೆತ್ತಿನ ಮೇಲ್ಭಾಗದಲ್ಲಿ ಪ್ರತಿಷ್ಠಾಪಿಸಲು ಪಂಚಕಲ್ಯಾಣದ ಸಕಲ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಅಂದಾಜು 200 ಮಕ್ಕಳಿಗೆ ಉಪನಮಯ ಮಾಡಲೂ ತಯಾರಿ ಮಾಡಿಕೊಳ್ಳಲಾಗಿತ್ತು. ಸದ್ಯ ಒಟ್ಟಾರೆ ಕಾರ್ಯಕ್ರಮ ಮುಂದೂಡಿದ್ದರಿಂದ ಭಕ್ತರು ಸಹಕರಿಸಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next