ಚಿಕ್ಕಿಯನ್ನು ಯಾವುದರ ಮೇಲೆ ಹರಡಬೇಕು ಅಂತ ಗೊತ್ತಾಗಲಿಲ್ಲ. ಕೊನೆಗೆ, ಅಲ್ಲಿಯೇ ಇದ್ದ ಚಪಾತಿ ಲಟ್ಟಿಸುವ ತವಾದ ಮೇಲೆ ಪಾಕ ಹೊಯ್ದು, ಸೌಟಿನಿಂದಲೇ ಚೌಕಾಕಾರ ಮಾಡಿದೆವು. ನಾಣುವಿನ ಅಂಗಡಿಯಲ್ಲಿ ಸಿಗೋ ಚಿಕ್ಕಿ ಥರಾನೇ ಕಾಣಾ¤ ಇದೆ ಅಂತ ಇಬ್ಬರೂ ಹಿರಿಹಿರಿ ಹಿಗ್ಗಿದೆವು.
ಪ್ರತಿ ದಿನ ಶಾಲೆಯಿಂದ ಬರುವಾಗ ನಾಣುವಿನ ಅಂಗಡಿಯಲ್ಲಿ ಐವತ್ತು ಪೈಸೆಗೆ ಚಿಕ್ಕಿ (ಕಡಲೆ ಮಿಠಾಯಿ) ತಗೊಂಡು, ತಿನ್ನುತ್ತಾ ಬರುವುದು ನನ್ನ ಮತ್ತು ಅಕ್ಕನ ರೂಢಿ ಆಗಿತ್ತು. ಅಷ್ಟೇ ಆಗಿದ್ದರೆ ಏನೂ ತೊಂದರೆ ಆಗುತ್ತಿರಲಿಲ್ಲ. ಆದ್ರೆ, ಒಂದು ದಿನ ನಮ್ಮಿಬ್ಬರಿಗೂ ಮನೆಯಲ್ಲೇ ಚಿಕ್ಕಿ ಮಾಡುವ ಆಸೆ ಆಯಿತು. ಅದಕ್ಕೆ ಸರಿಯಾಗಿ ಒಂದು ಭಾನುವಾರ ಅಪ್ಪ-ಅಮ್ಮ ಇಬ್ಬರೂ ಎಲ್ಲಿಗೋ ಹೊರಟರು. ಇದೇ ಸರಿಯಾದ ಸಮಯ ಎಂದು ನಿರ್ಧರಿಸಿದ ನಾನೂ ಮತ್ತು ಅಕ್ಕ, ಅಡುಗೆ ಮನೆ ಹೊಕ್ಕೆವು.
ಆಗ ಈಗಿನ ಥರ ಗೂಗಲ್, ಯೂಟ್ಯೂಬ್ ಇರಲಿಲ್ಲ. ಅಮ್ಮನ ಹತ್ತಿರ ಯಾವಾಗಲೋ, ಚಿಕ್ಕಿ ಮಾಡುವುದು ಹೇಗೆ ಅಂತ ಕೇಳಿದ್ದ ನೆನಪು ಬಿಟ್ಟರೆ ನಮ್ಮಿಬ್ಬರಿಗೂ ಏನೂ ಗೊತ್ತಿರಲಿಲ್ಲ. ಅದನ್ನೇ ನೆನಪು ಮಾಡಿಕೊಳ್ಳುತ್ತಾ ಮೊದಲು ಬೆಲ್ಲವನ್ನು ಕರಗಿಸಲು ಇಟ್ಟೆವು. ಬೆಲ್ಲದ ಪಾಕ ತಯಾರಾಗುತ್ತಿರುವಾಗ ನಾನು ಶೇಂಗಾಬೀಜವನ್ನು ಹುರಿದು, ಸಿಪ್ಪೆ ತೆಗೆದು, ಎರಡು ಭಾಗ ಮಾಡಿದೆ. ನಮ್ಮ ಈ ಅಡುಗೆ ಕೆಲಸವನ್ನು ನೋಡಲು ತಮ್ಮನೂ ಜೊತೆಗೂಡಿದ್ದ. ಅಂತೂ ಕಷ್ಟಪಟ್ಟು ಚಿಕ್ಕಿ ಮಾಡಿಯೇಬಿಟ್ಟೆವು.
ಆದರೆ, ಚಿಕ್ಕಿಯನ್ನು ಯಾವುದರ ಮೇಲೆ ಹರಡಬೇಕು ಅಂತ ಗೊತ್ತಾಗಲಿಲ್ಲ. ಕೊನೆಗೆ, ಅಲ್ಲಿಯೇ ಇದ್ದ ಚಪಾತಿ ಲಟ್ಟಿಸುವ ತವಾದ ಮೇಲೆ ಪಾಕ ಹೊಯ್ದು, ಸೌಟಿನಿಂದಲೇ ಚೌಕಾಕಾರ ಮಾಡಿದೆವು. ನಾಣುವಿನ ಅಂಗಡಿಯಲ್ಲಿ ಸಿಗೋ ಚಿಕ್ಕಿ ಥರಾನೇ ಕಾಣಾ¤ ಇದೆ ಅಂತ ಇಬ್ಬರೂ ಹಿರಿಹಿರಿ ಹಿಗ್ಗಿದೆವು. ಸ್ವಲ್ಪ ಆರಿದ ಮೇಲೆ ಬಿಲ್ಲೆ ಬಿಲ್ಲೆ ಕತ್ತರಿಸಿದರಾಯ್ತು ಎಂಬುದು ನಮ್ಮ ಐಡಿಯಾ. ಆದರೆ, ನಮ್ಮ ಲೆಕ್ಕಾಚಾರ ಉಲ್ಟಾ ಆಯ್ತು. ಚಿಕ್ಕಿ, ಜಪ್ಪಯ್ಯ ಅಂದರೂ ಚಪಾತಿ ಮಣೆಯಿಂದ ಏಳಲಿಲ್ಲ.
ಆಗ ಅಕ್ಕನಿಗೆ ಫ್ಲಾಶ್ ಆಯ್ತು, ನಾವು ಚಪಾತಿ ಮಣೆಗೆ ತುಪ್ಪ ಸವರಲು ಮರೆತಿದ್ದೇವೆಂದು. ಅದಕ್ಕೇ ಏಳ್ತಾ ಇಲ್ಲ ಅಂತ ಅಂದಳು. ಚಿಕ್ಕಿಯೂ ಬೇಡ, ಏನೂ ಬೇಡ, ಅಮ್ಮ ಬರುವುದರೊಳಗೆ ಚಪಾತಿ ಮಣೆಯನ್ನು ಸರಿ ಮಾಡುವುದು ಹೇಗಪ್ಪಾ ಅಂತಾಯ್ತು ನಮಗೆ. ತೊಳೆಯುವುದಕ್ಕೆ ಕಷ್ಟ ಅಂತ, ಹೊರಗಿದ್ದ ಅಕ್ಕಚ್ಚಿನ ಬಕೆಟ್ (ದನಕ್ಕೆ ಕೊಡುವ ನೀರು)ನಲ್ಲಿ ಚಪಾತಿ ಮಣೆಯನ್ನು ಮುಳುಗಿಸಿದೆವು. ಅಕ್ಕಚ್ಚಿನ ನೀರಿನಲ್ಲಿ ಶೇಂಗಾ, ಬೆಲ್ಲ ಬಿಟ್ಟುಕೊಳ್ಳುತ್ತದೆ. ಅದನ್ನು ದನಕ್ಕೆ ಕೊಟ್ಟರಾಯಿತು ಅಂದುಕೊಂಡೆವು. ಚಪಾತಿ ಮಣೆ ಕ್ಲೀನೂ ಆಯ್ತು, ನಮ್ಮ ಅವಾಂತರ ಮುಚ್ಚಿಟ್ಟ ಹಾಗೂ ಆಯ್ತು ಅಂತ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದೆವೆಂದು ನಮ್ಮ ಬೆನ್ನನ್ನು ನಾವೇ ತಟ್ಟಿಕೊಂಡೆವು.
ಆದರೆ, ನಾವೊಂದು ತಪ್ಪು ಮಾಡಿದ್ದೆವು. ನಮ್ಮ ಘನಂದಾರಿ ಕೆಲಸದ ಪ್ರತ್ಯಕ್ಷ ಸಾಕ್ಷಿಯಾದ ತಮ್ಮನನ್ನು ಮರೆತೇಬಿಟ್ಟಿದ್ದೆವು. ಸಂಜೆ ಅಮ್ಮ ಮನೆಗೆ ಬಂದ ಮೇಲೆ, ಕೆಲಸದವರ ಹತ್ತಿರ ದನಕ್ಕೆ ಅಕ್ಕಚ್ಚು, ಹುಲ್ಲು ಆಗಿದೆಯಾ? ಅಂತ ಕೇಳುವಾಗ, ತಮ್ಮ ಎಲ್ಲರ ಮುಂದೆ ನಮ್ಮ ಚಿಕ್ಕಿಯ ಕಥೆಯನ್ನು ಎಳೆ ಎಳೆಯಾಗಿ ಹೇಳಿಬಿಟ್ಟಿದ್ದ! ಎಲ್ಲರೂ ಮುಸಿಮುಸಿ ನಗುವಾಗ, ಇಂಗು ತಿಂದ ಮಂಗನಂತೆ ನಿಲ್ಲುವ ಸ್ಥಿತಿ ನಮ್ಮದಾಗಿತ್ತು.
– ಪ್ರೇಮಾ ಲಿಂಗದಕೋಣ