ಮೈಸೂರು: ಜಮೀನು ಒತ್ತುವರಿ ವಿಚಾರದಲ್ಲಿ ಗಲಾಟೆಯಾದ ಹಿನ್ನೆಲೆಯಲ್ಲಿ ಜೇನುಕುರುಬ ಸಮುದಾಯದ ಮಹದೇವ ಎನ್ನುವವರನ್ನು ಕೊಲೆಮಾಡಲಾಗಿದ್ದು, ಈ ಕುರಿತು ಸಿಒಡಿ ತನಿಖೆಗೆ ಒಪ್ಪಿಸಬೇಕು ಎಂದು ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ರಾಜ್ಯಾಧ್ಯಕ್ಷ ಎಂ.ಕೃಷ್ಣಯ್ಯ ಒತ್ತಾಯಿಸಿದರು.
ಹುಣಸೂರು ಹರಳಹಳ್ಳಿ ಹಾಡಿಯ ಮಹದೇವ ಎಂಬ ಜೇನು ಕುರುಬನ ಮೇಲೆ ಅದೇ ಊರಿನ ನಿವಾಸಿ ಅಮಾನುಷವಾಗಿ ಕೊಲೆ ಮಾಡಿದ್ದಾನೆ. ಜಮೀನು ಒತ್ತುವರಿ ವಿಚಾರವಾಗಿ ಮೊದಲೇ ಗಲಾಟೆ ನಡೆದಿತ್ತು. ಸುಮಾರು 10 ಜನರಿಗೆ 1 ರಂದ 10 ಎಕರೆ ಜಮೀನು ಮಂಜೂರಿಯಾಗಿತ್ತು.
ಆದರೆ ಆದಿವಾಸಿಗಳನ್ನು ಹೆದರಿಸಿ ಅವರ ಜಮೀನಿನಲ್ಲೆ ರಸ್ತೆ ನಿರ್ಮಿಸಿ ಜನರನ್ನು ಯಾಮಾರಿಸುತ್ತಿದ್ದಾರೆ. ಮಹದೇವ ಈ ವಿಚಾರವನ್ನು ಪ್ರಶ್ನಿಸಿದ್ದರಿಂದ ಆತನ ಮೇಲೆ ಟ್ರ್ಯಾಕ್ಟರ್ ಹಾಯಿಸಿ, ಬ್ಯಾಟರಿ ಆ್ಯಸಿಡ್ ಸುರಿದು ಮೈಮೇಲೆ ಬೊಬ್ಬೆಗಳೂ ಬರುವಂತೆ ಸಾಕ್ಷಿ ಸುಳಿವು ಸಿಗದಂತೆ ಏ.29 ರಂದು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದರು.
ಆದಿವಾಸಿಗಳು ಬಿಸಿಲಿನ ತಾಪದಿಂದ ಅಷ್ಟು ಸುಲಭವಾಗಿ ಸಾಯಿಸುವುದಿಲ್ಲ. ಅನಗತ್ಯವಾಗಿ ಕೊಲೆ ಕೇಸನ್ನು ಮುಚ್ಚಿ ಹಾಕಲು ಹುನ್ನಾರ ನಡೆಸುತ್ತಿದ್ದು, ಕೊಲೆಯ ಆರೋಪಿಯು ಪ್ರಭಾವಿಯಾಗಿರುವ ಕಾರಣ ಪೊಲೀಸ್ ಇಲಾಖೆ ಇಂತಹ ಯತ್ನ ನಡೆಸುತ್ತಿದೆ ಇದನ್ನು ಮನಗಂಡ ಮೃತ ಮಹದೇವನ ಪತ್ನಿ ಗೌರಮ್ಮ ಈಗಾಗಲೇ ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿಗಳಿಗೆ ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ದೂರು ನೀಡಿದ್ದಾರೆ ಎಂದರು.
ಮಹದೇವನ ಸಾವಿನ ತನಿಖೆಯನ್ನು ಸಿಒಡಿಗೆ ವಹಿಸಿ ಎಂದು ಆಗ್ರಹಿಸಿ ಮೇ 9ರಂದು ಹುಣಸೂರು ಉಪವಿಭಾಗದ ಕಚೇರಿ ಎದುರು ಆದಿವಾಸಿಗಳೆಲ್ಲರೂ ಬೃಹತ್ ಪ್ರತಿಭಟನೆ ಧರಣಿ ನಡೆಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಆದಿವಾಸಿ ಜನಾಂಗದ ಸುಭಾಮಣಿ, ರಾಮು, ಮೃತ ಪತ್ನಿ ಗೌರಮ್ಮ ಇದ್ದರು.