ಬೆಂಗಳೂರು: ಎಂಟನೇ ಶತಮಾನದಲ್ಲಿ ಆದಿಶಂಕರಾಚಾರ್ಯರು ಪ್ರತಿಪಾದಿಸಿದ ಅದ್ವೈತ ತತ್ವವೇ ಇಂದಿಗೂ ಭಾರತವನ್ನು ಒಗ್ಗೂಡಿಸಿರುವ ಆಧಾರ ಸ್ತಂಭವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಆದಿಶಂಕರಾಚಾರ್ಯ ಉದ್ಯಾನದಲ್ಲಿ ಶುಕ್ರವಾರ ನಡೆದ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಶಂಕರಾಚಾರ್ಯರ ಪ್ರತಿಮೆಗೆ ಪುಷ್ಪ ಸಮರ್ಪಣೆ ಮಾಡಿ, ಗೌರವ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಶಂಕರರು ಕಟ್ಟಿದ ತತ್ವಗಳು ಜ್ಞಾನಮಾರ್ಗದ ಶಿಖರಗಳಾಗಿವೆ. ಜತೆಗೆ, ಪ್ರತಿಗಾಮಿ ಶಕ್ತಿಗಳನ್ನು ಅವು ಮಣಿಸುವಂತಿವೆ ಎಂದರು.
ಕೇರಳದಿಂದ ಹಿಡಿದು ಕಾಶ್ಮೀರದ ತನಕ ದೇಶವನ್ನು ಸಾಂಸ್ಕೃತಿಕ ಮಾದರಿಯಲ್ಲಿ ಒಗ್ಗೂಡಿಸಿದ ಹಿರಿಮೆ ಅವರಿಗೆ ಸಲ್ಲುತ್ತದೆ. ಆ ಕಾಲಘಟ್ಟದಲ್ಲಿ ಶಂಕರರು ಇಲ್ಲದಿದ್ದರೆ ದೇಶ ಛಿದ್ರವಾಗುತ್ತಿತ್ತು ಎಂದು ಸಚಿವರು ಹೇಳಿದರು.
Related Articles
ಇದನ್ನೂ ಓದಿ:ಪಿಎಸ್ಐ ಅಕ್ರಮದಲ್ಲಿ ಅಶ್ವಥನಾರಾಯಣ್ ಭಾಗಿಯಾಗಿದ್ದರೆ ಸಾಕ್ಷಿ ಕೊಡಿ: ಸಚಿವ ಗೋಪಾಲಯ್ಯ ಸವಾಲು
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ, ಬ್ರಾಹ್ಮಣ ಸಭಾದ ಮುಖಂಡರಾದ ರಘುನಾಥ, ಸುಧೀಂದ್ರ, ಶೃಂಗೇರಿ ಶಂಕರಮಠದ ಮಲ್ಲೇಶ್ವರ ಶಾಖೆಯ ವಸಂತರಾವ್ ಸೇರಿದಂತೆ ಸ್ಥಳೀಯ ಮುಖಂಡರು ಮತ್ತು ಅಪಾರ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.
ಜಯಂತಿ ಕಾರ್ಯಕ್ರಮದ ನಂತರ ಸಚಿವರು ಉದ್ಯಾನವನದಲ್ಲಿ ಸಂಚರಿಸಿ ಅಲ್ಲಿನ ಮೂಲಸೌಲಭ್ಯಗಳನ್ನು ಪರಿಶೀಲಿಸಿದರು.