ಲಕ್ನೋ: ಸಚಿವರು, ಶಾಸಕರು ಹಾಗೂ ಇನ್ನಿತರರ ವಿರುದ್ಧ ರಾಜಕೀಯ ಪ್ರೇರಿತವಾಗಿ ದಾಖಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆಯುವ ನಿಟ್ಟಿನಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ನೇತೃತ್ವದ ರಾಜ್ಯ ಸರ್ಕಾರ ಕಾಯ್ದೆ ಜಾರಿಗೆ ತರಲು ಚಿಂತಿಸುತ್ತಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಪ್ರಸ್ತಾವಿತ ಕಾಯ್ದೆಯು ರಾಜ್ಯದ ವಿವಿಧ ಭಾಗದಲ್ಲಿ ದಾಖಲಾಗಿರುವ ಸುಮಾರು 20 ಸಾವಿರ ಪ್ರಕರಣಗಳನ್ನು ರದ್ದುಪಡಿಸುವುದಾಗಿದೆ ಎಂದು ಯೋಗಿ ಅವರು ಯಾವುದೇ ಹೆಚ್ಚಿನ ವಿವರಣೆ ನೀಡದೆ ತಿಳಿಸಿದ್ದಾರೆ.
ಉತ್ತರಪ್ರದೇಶದಲ್ಲಿನ ವಿವಾದಿತ ಯುಪಿ ಸಂಘಟಿತ ಅಪರಾಧ ನಿಗ್ರಹ ಮಸೂದೆ(ಯುಪಿಸಿಓಸಿಬಿ) 2017ರ ಪ್ರಕಾರ, ಪ್ರತಿಭಟನಾ ನಿರತ ಸಚಿವರು ಹಾಗೂ ಶಾಸಕರ ವಿರುದ್ಧ ಪ್ರಕರಣ ದಾಖಲಿಸಬಹುದು. ಈ ಕಾಯ್ದೆ ದುರುಪಯೋಗವೇ ಹೆಚ್ಚು ಎಂದು ಯೋಗಿ ವಿವರಿಸಿದ್ದಾರೆ.
ಕ್ರಿಮಿನಲ್ ಅಪರಾಧ ಹೊಂದಿರುವ ಸಂಸದರು, ಶಾಸಕರ ತ್ವರಿತಗತಿ ವಿಚಾರಣೆಗಾಗಿ ವಿಶೇಷ ಕೋರ್ಟ್ ಗಳನ್ನು ಸ್ಥಾಪಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದ್ದ ಬೆನ್ನಲ್ಲೇ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ನಾಯಕರಿಗೆ ಕೊಡುಗೆ ನೀಡಲು ಮುಂದಾಗಿದ್ದಾರೆ.
ಕ್ರಿಮಿನಲ್ ಹಿನ್ನೆಲೆಯ ಸಂಸದರು, ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸುವಂತೆ ಆದೇಶ ನೀಡಿದೆ. ದೇಶದ ಹಿತದೃಷ್ಟಿಯಿಂದ ಇದು ತುಂಬಾ ಅಗತ್ಯವಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿತ್ತು.
ವಿಶೇಷ ಕೋರ್ಟ್ ಸ್ಥಾಪಿಸುವ ಕುರಿತು ಯೋಜನೆಯನ್ನು ಅಂತಿಮಗೊಳಿಸಿ ಡಿಸೆಂಬರ್ 13ರೊಳಗೆ ಕೋರ್ಟ್ ಗೆ ಮಾಹಿತಿ ನೀಡುವಂತೆ ಸುಪ್ರೀಂಕೋರ್ಟ್ ಕೇಂದ್ರಕ್ಕೆ ಸೂಚನೆ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.