Advertisement

ಆಲ್ಬಂನಿಂದ ಸಿನಿಮಾದತ್ತ ಆದಿತ್ಯ ವಿನೋದ್‌

09:20 AM Apr 10, 2019 | Lakshmi GovindaRaju |

ಕಲೆ ಎಂದರೆ ಹಾಗೇ, ಅದು ಎಂಥವರನ್ನೂ ಕೂಡ ತನ್ನತ್ತ ಸೆಳೆಯುತ್ತದೆ. ಅದರಲ್ಲೂ ಸಂಗೀತ, ಸಿನಿಮಾ ಎಂದರೆ ಕೇಳಬೇಕೆ? ಅದರ ಸೆಳೆತ ಬೇರೆಲ್ಲದಕ್ಕಿಂತ ಕೊಂಚ ಹೆಚ್ಚಾಗಿಯೇ ಇರುತ್ತದೆ. ಅಂಥ ಕಲೆಯ ಸೆಳೆತಕ್ಕೆ ಸಿಕ್ಕ ನವ ಪ್ರತಿಭೆ ಆದಿತ್ಯ ವಿನೋದ್‌.

Advertisement

ಸದ್ಯ ಕನ್ನಡ ಚಿತ್ರರಂಗದಲ್ಲಿ ನಟನಾಗಿ, ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಳ್ಳುತ್ತಿರುವ ಬಹುಮುಖ ಪ್ರತಿಭೆ ಆದಿತ್ಯ ವಿನೋದ್‌ ಹುಟ್ಟಿದ್ದು, ಬೆಳೆದಿದ್ದು ಎಲ್ಲವೂ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ. ಬಾಲ್ಯದಲ್ಲಿಯೇ ಸಂಗೀತ ಮತ್ತು ಸಿನಿಮಾದ ಕಡೆಗೆ ಆಸಕ್ತಿಯನ್ನು ಬೆಳೆಸಿಕೊಂಡ ಆದಿತ್ಯ ವಿನೋದ್‌, ಚಿಕ್ಕ ವಯಸ್ಸಿನಲ್ಲೇ ಗಿಟಾರ್‌ ವಾದನ, ವರ್ಣಚಿತ್ರ ಕಲೆಯನ್ನು ಕರಗತ ಮಾಡಿಕೊಂಡರು.

ಕಾಲೇಜು ದಿನಗಳಲ್ಲಿ ಬಾಡಿ ಬಿಲ್ಡಿಂಗ್‌, ಅಭಿನಯದ ಕಡೆಗೂ ಮುಖ ಮಾಡಿದ ಆದಿತ್ಯ ವಿನೋದ್‌, ಸದ್ಯ ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕನಾಗಿ, ನಟನಾಗಿ, ಕಂಠದಾನ ಕಲಾವಿದನಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಆದಿತ್ಯ ವಿನೋದ್‌ ಸಂಗೀತ ಸಂಯೋಜಿಸಿರುವ “ಸೈನಿಕ’, “ಹಾಡಿದ ಹೃದಯ’, “ಏಕೆ ಮನಸೆ…’ ಮ್ಯೂಸಿಕಲ್‌ ವೀಡಿಯೋ ಆಲ್ಬಂಗಳಿಗೆ ಚಿತ್ರರಂಗದಿಂದ ಮತ್ತು ಸಿನಿಪ್ರಿಯರಿಂದ ಸಾಕಷ್ಟು ಮೆಚ್ಚುಗೆ ಮತ್ತು ಪ್ರಶಂಸೆ ವ್ಯಕ್ತವಾಗಿದೆ.

ಅದರಲ್ಲೂ ಕಳೆದ ವರ್ಷ ಫೆ. 14 ರಂದು ಬಿಡುಗಡೆಯಾದ ನಟಿ ಕೃಷಿ ತಾಪಂಡ ಅಭಿನಯಿಸಿದ್ದ “ನೀ ಇದ್ದರೆ…’ ರೊಮ್ಯಾಂಟಿಕ್‌ ಮ್ಯೂಸಿಕ್‌ ವೀಡಿಯೋ ಆಲ್ಬಂ ಅಂತೂ ಸಾಕಷ್ಟು ಜನಪ್ರಿಯವಾಗಿತ್ತು. ಬಿ.ಇ ಸಿವಿಲ್‌ ಇಂಜಿನಿಯರಿಂಗ್‌ ಪದವಿದರರಾಗಿರುವ ಆದಿತ್ಯ ವಿನೋದ್‌ ಸದ್ಯ ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ ಮಾಡುತ್ತಲೇ ವಾರಾಂತ್ಯ ಮತ್ತು ತಮ್ಮ ಬಿಡುವಿನ ಸಮಯದಲ್ಲಿ ಸಂಗೀತ ಮತ್ತು ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ಮಾತನಾಡುವ ಆದಿತ್ಯ ವಿನೋದ್‌, “ಕಳೆದ ಎಂಟು-ಹತ್ತು ವರ್ಷಗಳಲ್ಲಿ ಸಹ ನಟನಾಗಿ, ಹಲವು ಚಿತ್ರಗಳಲ್ಲಿ, ಧಾರಾವಾಹಿಗಳಲ್ಲಿ ಅಭಿನಯಿಸಿದ್ದೇನೆ. ಜೊತೆಗೆ ಹಲವು ಮ್ಯೂಸಿಕ್‌ ಆಲ್ಬಂಗಳಿಗೂ ಸಂಗೀತ ನಿರ್ದೇಶನ ಮಾಡಿದ್ದೇನೆ. ಕಂಠದಾನ ಕಲಾವಿದನಾಗಿ ಕೆಲಸ ಮಾಡಿದ್ದೇನೆ. ಈ ಕೆಲಸ ನನಗೆ ತೃಪ್ತಿ ನೀಡುತ್ತಿದೆ. ನನ್ನ ಕೆಲಸವನ್ನು ಚಿತ್ರರಂಗ ಮತ್ತು ಪ್ರೇಕ್ಷಕರು ಗುರುತಿಸಿ, ಪ್ರೋತ್ಸಾಹಿಸುತ್ತಿದ್ದಾರೆ’ ಎನ್ನುತ್ತಾರೆ.

Advertisement

ಇನ್ನು ಆದಿತ್ಯ ವಿನೋದ್‌ ಅವರ ಮ್ಯೂಸಿಕ್‌ ಆಲ್ಬಂಗಳು ಜನಪ್ರಿಯವಾಗುತ್ತಿದ್ದಂತೆ, ಚಿತ್ರರಂಗದಿಂದಲೂ ಅವರಿಗೆ ಸಂಗೀತ ನಿರ್ದೇಶನದ ಅವಕಾಶಗಳು ಬರಲಾರಂಭಿಸಿದೆ. ಈ ಬಗ್ಗೆ ಮಾತನಾಡುವ ಆದಿತ್ಯ, “ಚಿತ್ರರಂಗದಲ್ಲಿ ಸ್ವತಂತ್ರ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಳ್ಳಬೇಕು ಎಂಬುದು ನನ್ನ ಹಲವು ವರ್ಷದ ಕನಸು. ಅದಕ್ಕೆ ಪೂರ್ವಭಾವಿಯಾಗಿ ಮ್ಯೂಸಿಕ್‌ ಆಲ್ಬಂಗಳನ್ನು ಮಾಡುತ್ತಿದ್ದೆ.

ಸದ್ಯ ಒಂದೆರಡು ಸಿನಿಮಾಗಳಿಗೆ ಮ್ಯೂಸಿಕ್‌ಗೆ ಆಫ‌ರ್ ಬಂದಿದ್ದು, ಅದರ ಚರ್ಚೆ ನಡೆಯುತ್ತಿದೆ’ ಎನ್ನುತ್ತಾರೆ. ಇನ್ನು ಈ ವರ್ಷ ಆದಿತ್ಯ ವಿನೋದ್‌ ಪರಿಸರ ಸಂರಕ್ಷಣೆ ಸಂದೇಶ ಸಾರುವ “ಭೂಮಿತಾಯಿ’ ಎನ್ನುವ ಮ್ಯೂಸಿಕ್‌ ವೀಡಿಯೋ ಆಲ್ಬಂ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಈ ವರ್ಷಾಂತ್ಯಕ್ಕೆ ಕನಿಷ್ಟ 3-4 ಮ್ಯೂಸಿಕ್‌ ಆಲ್ಬಂ ಮಾಡುವ ಪ್ಲಾನ್‌ ಹಾಕಿಕೊಂಡಿದ್ದಾರೆ. ಒಟ್ಟಾರೆ ಮ್ಯೂಸಿಕ್‌ ಆಲ್ಬಂ ಮೂಲಕ ಜನಮನ ಗೆದ್ದಿರುವ ಆದಿತ್ಯ ವಿನೋದ್‌, ಸಿನಿಮಾ ಹಾಡುಗಳು ಹೇಗಿರಲಿವೆ ಅನ್ನೋದು ಆದಷ್ಟು ಬೇಗ ಗೊತ್ತಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next