ಬೆಂಗಳೂರು: ಉತ್ತರಾಖಂಡ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ಕೈಬೆರಳಿಗೆ ಏಟು ಮಾಡಿಕೊಂಡ ಮುಂಬಯಿ ತಂಡದ ವಿಕೆಟ್ ಕೀಪರ್ ಆದಿತ್ಯ ತಾರೆ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ.
ಇವರ ಸ್ಥಾನಕ್ಕೆ ಹೆಚ್ಚುವರಿ ಕೀಪರ್ ಆಗಿ ಪ್ರಸಾದ್ ಪವಾರ್ ಅವರನ್ನು ಆರಿಸಲಾಗಿದೆ. ಆದರೆ ತಂಡದಲ್ಲಿರುವ ದ್ವಿತೀಯ ಕೀಪರ್ ಹಾರ್ದಿಕ್ ತಮೋರೆ ಸೆಮಿಫೈನಲ್‌ನಲ್ಲಿ ಕೀಪಿಂಗ್ ಹೊಣೆಗಾರಿಕೆ ನಿಭಾಯಿಸಲಿದ್ದಾರೆ.
ಶನಿವಾರ ಸಂಜೆ ಬೆಂಗಳೂರಿನಿಂದ ಮುಂಬಯಿಗೆ ವಾಪಸಾಗಿರುವ ಆದಿತ್ಯ ತಾರೆ ಅಲ್ಲಿಯೇ ಚಿಕಿತ್ಸೆ ಪಡೆಯಲಿದ್ದಾರೆ. 2015-16ರಲ್ಲಿ ಮುಂಬಯಿ ಕೊನೆಯ ಸಲ ರಣಜಿ ಟ್ರೋಫಿ ಚಾಂಪಿಯನ್ ಆದಾಗ ತಾರೆ ತಂಡದ ನಾಯಕರಾಗಿದ್ದರು.
“ಪಂದ್ಯಾವಳಿಯ ನಿರ್ಣಾಯಕ ಹಂತದಲ್ಲಿ ಗಾಯಾಳಾಗಿ ಹೊರಬಿದ್ದಿರು ವುದು ನಿಜಕ್ಕೂ ಬೇಸರದ ಸಂಗತಿ. ನನಗೆ ಬ್ಯಾಟ್‌ನ ಗ್ರಿಪ್ ಸಾಧ್ಯವಾಗುತ್ತಿಲ್ಲ.
ಹಾರ್ದಿಕ್ ತಮೋರೆ ಕೂಡ ಉತ್ತಮ ಕೀಪರ್. ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ ಅವರಲ್ಲಿದೆ’ ಎಂದು ಆದಿತ್ಯ ತಾರೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರಲ್ಲಿ ಹೇಳಿದರು.
ಮುಂಬಯಿ-ಉತ್ತರ ಪ್ರದೇಶ ನಡುವಿನ ರಣಜಿ ಸೆಮಿಫೈನಲ್ ಮಂಗಳವಾರ ಆರಂಭವಾಗಲಿದೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಬಂಗಾಲ -ಮಧ್ಯಪ್ರದೇಶ ಮುಖಾಮುಖಿ ಆಗಲಿವೆ. ಎರಡೂ ಪಂದ್ಯಗಳ ತಾಣ ಬೆಂಗಳೂರು.