ಬಂಟ್ವಾಳ: ಮಂಗಳೂರು ವಿಶ್ವ ವಿದ್ಯಾನಿಲಯ ನಡೆಸಿದ ಅಂತಿಮ ವರ್ಷದ ಬಿ.ಕಾಂ. ಪದವಿ ಪರೀಕ್ಷೆಯಲ್ಲಿ ಕಲ್ಲಡ್ಕ ಶ್ರೀರಾಮ ಪದವಿ ಮಹಾವಿದ್ಯಾಲಯದ ಆದಿತ್ಯ ಭಟ್ ಅವರು ಶೇ. 93.8 ಅಂಕ ಗಳಿಸುವ ಮೂಲಕ 9ನೇ ರ್‍ಯಾಂಕ್ ಗಳಿಸಿದ್ದಾರೆ. ಅಂಗವೈಕಲ್ಯದಿಂದ ನಡೆಯ ಲಾಗದ ಸ್ಥಿತಿಯಲ್ಲಿರುವ ಅವರ ಈ ಸಾಧನೆ ಗಮನೀಯ.
ಸೂರಿಕುಮೇರು ಸಮೀಪದ ಆದಿತ್ಯ ಮಾಂಸಖಂಡಗಳ ಕ್ಷೀಣತೆಯ ಸಮಸ್ಯೆ ಹೊಂದಿದ್ದು, ತಂದೆ ಗಣೇಶ ಭಟ್ ಕಾಲೇಜಿಗೆ ಕರೆದುಕೊಂಡು ಬರುತ್ತಿದ್ದರು. ತರಗತಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತು ತರಗತಿ ಕೇಳುತ್ತಿದ್ದರು. ಶ್ರೀರಾಮಕಾಲೇಜಿನಲ್ಲಿ ಆತನಿಗಾಗಿಯೇ ತರಗತಿಯನ್ನು ಕೆಳಅಂತಸ್ತಿನಲ್ಲೇ ನಡೆಸಲಾಗಿತ್ತು. ಊಟ, ಇನ್ನಿತರ ಚಟುವಟಿಕೆಗಳಿಗೆ ಆತನಿಗೆ ಉಪನ್ಯಾಸಕರು, ಸಹಪಾಠಿಗಳು ನೆರವಾಗುತ್ತಿದ್ದರು. ಎಲ್ಲರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಆದಿತ್ಯ ಹೇಳುತ್ತಾರೆ.
ಬಾಲ್ಯದಿಂದಲೇ ಪ್ರತಿಭಾವಂತರಾಗಿದ್ದ ಆದಿತ್ಯ ಎಸೆಸೆಲ್ಸಿಯಲ್ಲಿ ಶೇ. 96.4, ಪಿಯುಸಿಯಲ್ಲಿ ಶೇ. 96 ಅಂಕ ಗಳಿಸಿದ್ದರು. ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸೆಸೆಲ್ಸಿ ತನಕ ವಿದ್ಯಾಭ್ಯಾಸ ಪಡೆದಿದ್ದು, ಪಿಯುಸಿಯಿಂದ ಕಲ್ಲಡ್ಕ ಶ್ರೀರಾಮ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅಂಗವೈಕಲ್ಯದ ಕಾರಣ ಮುಂದೆ ಆನ್‌ಲೈನ್ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಗುರಿ ಹೊಂದಿದ್ದಾರೆ.
ಆದಿತ್ಯ ಯಾರ ಸಹಾಯವೂ ಇಲ್ಲದೆ ಪರೀಕ್ಷೆ ಬರೆದಿದ್ದು, ನಮ್ಮ ಕಾಲೇಜಿಗೆ ಹೆಮ್ಮೆ ತಂದಿದ್ದಾರೆ. ಶೈಕ್ಷಣಿಕ ವಿಚಾರದ ಜತೆಗೆ ಇತರ ಚಟುವಟಿಕೆಗಳಲ್ಲೂ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಶ್ರೀರಾಮ ಮಹಾವಿದ್ಯಾಲಯದ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರಕಟ್ಟೆ ಹೇಳುತ್ತಾರೆ.