Advertisement

Aditi Prabhudeva; ಬಾಲ್ಯದ ಕನಸು ಸಿನಿಮಾದಲ್ಲಿ ನನಸು:’ಅಲೆಕ್ಸ’ದಲ್ಲಿ ಅದಿತಿ ಖಡಕ್‌ಪೊಲೀಸ್‌

12:16 PM Sep 24, 2023 | Team Udayavani |

“ಚಿಕ್ಕ ವಯಸ್ಸಿನಲ್ಲಿ ನನಗೆ ಪೊಲೀಸ್‌ ಆಫೀಸರ್‌ ಆಗಬೇಕೆಂಬ ಕನಸಿತ್ತು. ನಿಜ ಜೀವನದಲ್ಲಿ ಅಂಥದ್ದೊಂದು ಕನಸು ನನಸಾಗಲಿಲ್ಲ. ಆದರೆ ಈಗ ಸಿನಿಮಾದಲ್ಲಿ ಆ ಕನಸು ನನಸಾಗಿದೆ’ ಇದು ನಟಿ ಅದಿತಿ ಪ್ರಭುದೇವ ಮಾತು. ಅಂದಹಾಗೆ, ಮದುವೆಯ ಬಳಿಕ ಅದಿತಿ ಪ್ರಭುದೇವ ಅಭಿನಯಿಸಿರುವ ಮತ್ತೂಂದು ಸಿನಿಮಾ “ಅಲೆಕ್ಸ’ ಬಿಡುಗಡೆಗೆ ರೆಡಿಯಾಗಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿರುವ ಅದಿತಿ ಪ್ರಭುದೇವ, ಇದೇ ಮೊದಲ ಬಾರಿಗೆ ಖಡಕ್‌ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

ಇತ್ತೀಚೆಗೆ “ಅಲೆಕ್ಸ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದ್ದು, ಇದೇ ವೇಳೆ ಮಾತನಾಡಿದ ಅದಿತಿ ಪ್ರಭುದೇವ ತಮ್ಮ ಬಾಲ್ಯದ ಕನಸು ತೆರೆಮೇಲೆ ನನಸಾದ ಖುಷಿ ಹಂಚಿಕೊಂಡರು. “ಚಿಕ್ಕ ವಯಸ್ಸಿನಲ್ಲಿ ಪೊಲೀಸ್‌ ಆಫೀಸರ್‌ ಆಗಬೇಕೆಂಬ ಕನಸು ನನಸಾಗಲಿಲ್ಲ. ಆಮೇಲೆ ಮಾಲಾಶ್ರೀ ಅವರ ಸಿನಿಮಾಗಳನ್ನು ನೋಡುತ್ತಿದ್ದಾಗ, ನನಗೂ ಈ ಫೈಟ್ಸ್‌, ಆ್ಯಕ್ಷನ್ಸ್‌ ಮಾಡಬೇಕು ಅಂಥ ಅನಿಸುತ್ತಿತ್ತು. ಈಗ ಅದೆಲ್ಲವೂ “ಅಲೆಕ್ಸ’ ಸಿನಿಮಾದಲ್ಲಿ ನನಸಾಗಿದೆ. ಈ ಸಿನಿಮಾದಲ್ಲಿ ನಾನು ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದೇನೆ. ಇದೊಂದು ಕ್ರೈಂ-ಥ್ರಿಲ್ಲರ್‌ ಶೈಲಿಯ ಸಿನಿಮಾ. ಇದರಲ್ಲಿ ನನಗೆ ಎರಡು-ಮೂರು ಭರ್ಜರಿ ಆ್ಯಕ್ಷನ್ಸ್‌, ಫೈಟ್ಸ್‌ ಸೀನ್ಸ್‌ಯಿದೆ. ಮೊದಲ ಬಾರಿಗೆ ಈ ಥರದ ಪಾತ್ರದಲ್ಲಿ ಅಭಿನಯಿಸಿದ್ದು, ಶೂಟಿಂಗ್‌ ಮಾಡಿದ್ದು ಎಲ್ಲವೂ ಹೊಸಥರನಾಗಿತ್ತು’ ಎಂದಿದ್ದಾರೆ.

“ಸಿನಿಮಾದಲ್ಲಿ ನಾನು ಮಾಡಿರುವ ಆ್ಯಕ್ಷನ್‌ ದೃಶ್ಯಗಳನ್ನು ರವಿವರ್ಮ ಮತ್ತು ಮಾಸ್‌ ಮಾದ ಅವರು ಕಂಪೋಸ್‌ ಮಾಡಿದ್ದಾರೆ. ಆ್ಯಕ್ಷನ್‌ ದೃಶ್ಯಗಳ ಚಿತ್ರೀಕರಣದಲ್ಲಿ ಸಣ್ಣ-ಪುಟ್ಟ ಗಾಯಗಳಾಯಿತು. ಆದರೂ ಮಾನಿಟರ್‌ನಲ್ಲಿ ನನ್ನ ಆ್ಯಕ್ಷನ್ಸ್‌ ಸೀನ್ಸ್‌ ನೋಡಿದಾಗ, ಇನ್ನೂ ಹೆಚ್ಚಾಗಿ ಆ್ಯಕ್ಷನ್ಸ್‌ ಮಾಡಬೇಕು ಅನಿಸುತ್ತಿತ್ತು. ಹೀರೋಗಳಿಗೆ ಮಾತ್ರ ಆ್ಯಕ್ಷನ್ಸ್‌, ಫೈಟ್ಸ್‌ ಇರುತ್ತದೆ. ನನಗೂ ಅಂಥದ್ದೇ ಆ್ಯಕ್ಷನ್ಸ್‌-ಫೈಟ್ಸ್‌ ಮಾಡಬೇಕು ಎಂಬ ಆಸೆ ಈ ಸಿನಿಮಾದಲ್ಲಿ ಈಡೇರಿದೆ’ ಎಂದಿದ್ದಾರೆ ಅದಿತಿ ಪ್ರಭುದೇವ.

ಇನ್ನು “ಅಲೆಕ್ಸಾ’ ಸಿನಿಮಾದಲ್ಲಿ ಅದಿತಿ ಪ್ರಭುದೇವ ಅವರಿಗೆ ಪವನ್‌ ತೇಜ್‌ ನಾಯಕನಾಗಿ ಅಭಿನಯಿಸಿದ್ದಾರೆ. ಮೇಘಶ್ರೀ, ನೂತನ್‌, ನಾಗಾರ್ಜುನ್‌, ಮಿಮಿಕ್ರಿ ಗೋಪಿ, ಚಂದ್ರಕಲಾ ಮೋಹನ್‌ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

“2020ರಲ್ಲಿ “ಅಲೆಕ್ಸ’ ಸಿನಿಮಾದ ಕೆಲಸ ಶುರುವಾಯಿತು. ಸಿನಿಮಾಕ್ಕಾಗಿ ಸಾಕಷ್ಟು ರಿಸರ್ಚ್‌ ಮಾಡಲಾಗಿದೆ. “ಅಲೆಕ್ಸ’ ಮರ್ಡರ್‌ ಮಿಸ್ಟರಿ ಸಿನಿಮಾ. ಕ್ರೈಂ-ಥ್ರಿಲ್ಲರ್‌ ಶೈಲಿಯಲ್ಲಿ ಸಿನಿಮಾ ಮೂಡಿಬಂದಿದೆ. ಕೊಲೆಯೊಂದರ ಹಿಂದೆ ನಡೆಯುವ ಘಟನೆಗಳ ಸುತ್ತ ಸಿನಿಮಾದ ಕಥೆ ಸಾಗುತ್ತದೆ. ಫಾರ್ಮಾಸಿಟಿಕಲ್‌ ಮಾಫಿಯಾದ ಬಗ್ಗೆಯೂ ಸಿನಿಮಾದಲ್ಲಿ ಹೇಳಲಾಗಿದೆ ಎಂಬುದು ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ನಿರ್ದೇಶಕ ಜೀವ ಅವರ ವಿವರಣೆ.

Advertisement

“ಸಿನಿಮಾದಲ್ಲಿ ಗಂಡ-ಹೆಂಡತಿ ಕೊಲೆ ಆಗಿರುತ್ತದೆ. ಆ ಕೊಲೆಯ ತನಿಖೆಯ ಸುತ್ತ ಮತ್ತು ಅದರ ಹಿಂದಿನ ಕಥೆಯ ಸುತ್ತ ಸಾಗುತ್ತದೆ. ಅದಿತಿ ಪ್ರಭುದೇವ ಅವರ ಜೊತೆ ಅಭಿನಯಿಸುವ ಕನಸು ಈ ಸಿನಿಮಾದಲ್ಲಿ ನನಸಾಗಿದೆ. ಅವರೊಂದಿಗೆ ಅಭಿನಯಿಸಿದ್ದು, ಒಂದೊಳ್ಳೆಯ ಅನುಭವ. ಫಾರ್ಮಾಸೆಟಿಕಲ್‌ ಮಾಫಿಯಾ ಬಗ್ಗೆ ಕೂಡ ಸಿನಿಮಾದಲ್ಲಿ ತೋರಿಸಿದ್ದೇವೆ. ಮೂರು ಹಾಡುಗಳು ಹಾಗೂ ನಾಲ್ಕು ಸಾಹಸ ಸನ್ನಿವೇಶಗಳು ಚಿತ್ರದಲ್ಲಿದೆ’ ಎಂಬುದು ನಾಯಕ ನಟ ಪವನ್‌ ತೇಜ್‌ ಮಾತು.

ವಿ. ಚಂದ್ರು ನಿರ್ಮಾಣದಲ್ಲಿ ಮೂಡಿಬಂದಿರುವ “ಅಲೆಕ್ಸ’ ಚಿತ್ರಕ್ಕೆ ಸಾಯಿ ಸತೀಶ್‌ ಛಾಯಾಗ್ರಹಣ, ಉಮೇಶ್‌ ಆರ್‌. ಬಿ ಸಂಕಲನವಿದೆ. ಮೈಸೂರು, ಮಡಿಕೇರಿ, ಶ್ರೀರಂಗಪಟ್ಟಣ, ಬೆಂಗಳೂರು ಸುತ್ತಮುತ್ತ “ಅಲೆಕ್ಸ’ ಶೂಟಿಂಗ್‌ ನಡೆಸಲಾಗಿದೆ. ಈಗಾಗಲೇ ಸೆನ್ಸಾರ್‌ನಿಂದ “ಯು/ಎ’ ಪ್ರಮಾಣ ಪತ್ರ ಪಡೆದುಕೊಂಡಿರುವ “ಅಲೆಕ್ಸ’ ಸಿನಿಮಾವನ್ನು ಇದೇ ನವೆಂಬರ್‌ ಮೊದಲ ವಾರ ಬಿಡುಗಡೆಗೆ ಮಾಡುವ ಯೋಜನೆಯಲ್ಲಿದೆ ಚಿತ್ರತಂಡ. ಈ ಚಿತ್ರದ ಎರಡನೇ ಭಾಗವನ್ನು ತೆರೆಗೆ ತರುವ ಆಲೋಚನೆ ಇದೆ ಎಂದಿದೆ ಚಿತ್ರತಂಡ.

Advertisement

Udayavani is now on Telegram. Click here to join our channel and stay updated with the latest news.

Next