Advertisement

ಕಲಾಸಂಗಕ್ಕೆ ಮುನ್ನುಡಿ ಆದಿರಂಗ

01:28 PM Apr 26, 2019 | pallavi |

ಹುಬ್ಬಳ್ಳಿ: ರಂಗಭೂಮಿ ಚಟುವಟಿಕೆ ಚುರುಕು ಗೊಳಿಸಬೇಕೆಂಬ ಉದ್ದೇಶದಿಂದ ನಗರ ಹೊರವಲಯದ ರಾಯನಾಳ ಕೆರೆ ದಡದ ರಾಮಮನೋಹರ ಲೋಹಿಯಾ ನಗರದಲ್ಲಿ ರಂಗ ತರಬೇತಿ ಕೇಂದ್ರವೊಂದು ತಲೆ ಎತ್ತುತ್ತಿದೆ. ರಂಗಭೂಮಿ, ಚಲನಚಿತ್ರ ಹಾಗೂ ಧಾರವಾಹಿ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಹುಬ್ಬಳ್ಳಿಯ ಯಶವಂತ ಸರದೇಶಪಾಂಡೆ ‘ಆದಿರಂಗ ಥೇಟರ್’ ರೂಪಿಸುತ್ತಿದ್ದಾರೆ.

Advertisement

ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ ನೀಡಿದ 36 ಗುಂಟೆ ಸಿಎ ಜಮೀನಿನಲ್ಲಿ ರಂಗ ಸಾಂಸ್ಕೃತಿಕ ಕೇಂದ್ರ ತಲೆ ಎತ್ತಲಿದೆ. ಕಾಮಗಾರಿ ಭರದಿಂದ ಸಾಗಿದ್ದು, ಇನ್ನು 8 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಮುಂದಿನ ಹಂತದಲ್ಲಿ ಇದನ್ನು ಕಲಾಶಾಲೆಯನ್ನಾಗಿಸುವ ಗುರಿ ಹೊಂದಿದ್ದಾರೆ.

ಮೈಸೂರು ಹಾಗೂ ಧಾರವಾಡದಲ್ಲಿ ರಂಗ ಚಟುವಟಿಕೆಗಳ ಉತ್ತೇಜನಕ್ಕೆ ರಂಗಾಯಣವಿದೆ. ಆದರೆ ಹುಬ್ಬಳ್ಳಿಯಲ್ಲಿ ಅಂಥ ಸಂಸ್ಥೆಯಿಲ್ಲ. ಈ ಕೊರತೆ ನೀಗಿಸಲು ರಂಗಾಲಯ ರೂಪುಗೊಳ್ಳುತ್ತಿದೆ. ರಂಗ ವಾತಾವರಣ ಸೃಷ್ಟಿಸುವುದು, ರಂಗಭೂಮಿ ಕ್ರಿಯಾಶೀಲವಾಗಿಡುವ ಉದ್ದೇಶ ರಂಗಕೇಂದ್ರದ್ದಾಗಿದೆ. ಇದು ಕೇವಲ ರಂಗ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿ ಧಾರಾವಾಹಿ, ಚಲನಚಿತ್ರದ ತರಬೇತಿಯನ್ನೂ ನೀಡಲಾಗುತ್ತದೆ.

ಹುಬ್ಬಳ್ಳಿಯಲ್ಲಿ ಕಲಾ ಮಂದಿರಗಳಿದ್ದರೂ ಅವು ಕೇವಲ ರಂಗಭೂಮಿಗೆ ಸೀಮಿತವಾಗಿಲ್ಲ. ನವೀಕರಣ ಕಾರಣಕ್ಕೆ 5 ವರ್ಷ ಸ್ಥಗಿತಗೊಂಡಿದ್ದ ಸವಾಯಿ ಗಂಧರ್ವ ಕಲಾ ಕೇಂದ್ರ ಈಗಷ್ಟೇ ಪುನರಾರಂಭಗೊಂಡಿದೆ. ಕನ್ನಡ ಭವನ ನವೀಕರಣ ಕಾರಣಕ್ಕೆ ಬಂದ್‌ ಆಗಿದೆ. ಸಾಂಸ್ಕೃತಿಕ ಭವನದಲ್ಲಿ ಧ್ವನಿವರ್ಧಕ ವ್ಯವಸ್ಥೆ ಸಮರ್ಪಕವಾಗಿಲ್ಲ. ಹುಬ್ಬಳ್ಳಿಯಲ್ಲಿ ರಂಗಾಸಕ್ತರು ಸಾಕಷ್ಟು ಸಂಖ್ಯೆಯಲ್ಲಿದ್ದರೂ ಅವರಿಗೆ ಅವಕಾಶ ಇಲ್ಲವಾಗಿದೆ. ಬೇಸಿಗೆ ಶಿಬಿರಗಳಲ್ಲಿ ನಟನೆಗೆ ಹೆಚ್ಚು ಉತ್ತೇಜನ ನೀಡುವುದಿಲ್ಲ. ಇದರಿಂದ ಪ್ರತಿಭೆಗಳಿಗೆ ಪ್ರೋತ್ಸಾಹ ಇಲ್ಲದಂತಾಗಿದೆ.

ಆದಿರಂಗ ಥೇಟರ್ ವಿಶೇಷತೆ: ಇಲ್ಲಿ 6 ವರ್ಷ ಮೀರಿದ ಎಲ್ಲರಿಗೂ ತರಬೇತಿ ನೀಡಲಾಗುತ್ತದೆ. ಡಿಪ್ಲೊಮಾ ಹಾಗೂ ಅಲ್ಪಾವಧಿ ಕೋರ್ಸ್‌ ಮಾಡಲಾಗುತ್ತದೆ. ಬೇಸಿಗೆ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ರಂಗಾಭಿನಯ, ರಂಗನೃತ್ಯ, ರಂಗಕುಶಲತೆ, ರಂಗ ಸಂಗೀತ, ರಂಗ ಪ್ರಸ್ತುತಿ ತರಬೇತಿ ನೀಡಲಾಗುತ್ತದೆ. ಇಲ್ಲಿ ಶಾಲೆ-ಕಾಲೇಜುಗಳ ವಾರ್ಷಿಕೋತ್ಸವಗಳನ್ನು ಆಯೋಜಿಸಬಹುದಾಗಿದೆ.

Advertisement

ಉಪಾಹಾರ ಗೃಹ ಮಾಡಲಾಗುತ್ತಿದ್ದು, ಚಿಕ್ಕದಾದ ನಟರಾಜ ಮಂದಿರ ನಿರ್ಮಿಸಲಾಗುವುದು. ಸದ್ಯಕ್ಕೆ ರಂಗಕೇಂದ್ರ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬಯಲು ರಂಗಮಂದಿರ ( ಓಪನ್‌ ಏರ್‌ ಥೇಟರ್‌) ನಿರ್ಮಿಸುವ ಉದ್ದೇಶವಿದೆ. ಕೆರೆ ದಡದಲ್ಲಿ ಕುಳಿತು ನಾಟಕಗಳನ್ನು ವೀಕ್ಷಿಸುವ ಮಜಾನೇ ಬೇರೆ. ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ರಂಗ ಮಂದಿರ, ರಂಗ ತರಬೇತಿ ಶಾಲೆ ನಿರ್ಮಿಸಲಾಗುತ್ತಿದ್ದು, ಕೇಂದ್ರ ಅಥವಾ ರಾಜ್ಯ ಸರಕಾರದಿಂದ ಅನುದಾನ ಪಡೆದುಕೊಳ್ಳಲಾಗುವುದು ಎಂದು ಯಶವಂತ ಸರದೇಶಪಾಂಡೆ ಹೇಳುತ್ತಾರೆ.

ಕಟ್ಟಡ ಕಾಮಗಾರಿ ಪೂರ್ಣಗೊಂಡ ನಂತರ ಆರಂಭದಲ್ಲಿ ಗುರು ಸಂಸ್ಥೆಯ ವತಿಯಿಂದ ‘ಆಲ್ ದಿ ಬೆಸ್ಟ್‌’, ‘ರಾಶಿಚಕ್ರ’, ‘ಸಹಿ ರೀ ಸಹಿ’ ಮೊದಲಾದ ನಾಟಕಗಳನ್ನು ವಾರಾಂತ್ಯದಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಮುಂದೆ ರಂಗಶಂಕರ ಮಾದರಿಯಂತೆ ವಾರಾಂತ್ಯದಲ್ಲಿ ನಿರಂತರ ನಾಟಕಗಳನ್ನು ಸಂಘಟಿಸಲಾಗುವುದು. ಕೇವಲ ಗುರು ಸಂಸ್ಥೆ ಮಾತ್ರವಲ್ಲ, ಬೇರೆ ರಂಗ ಸಂಸ್ಥೆಗಳಿಗೂ ಇಲ್ಲಿ ನಾಟಕ ಸಿದ್ಧಪಡಿಸಲು, ಪ್ರದರ್ಶಿಸಲು ಅವಕಾಶ ಸಿಗಲಿದೆ.

ರಂಗಾಲಯವನ್ನು ಪರಿಪೂರ್ಣ ರಂಗ ಕೇಂದ್ರವ ನ್ನಾಗಿಸುವ ಯೋಜನೆಯಿದೆ. ಹಲವು ಕನಸುಗಳೊಂದಿಗೆ, ಉದ್ದೇಶಗಳೊಂದಿಗೆ ರಂಗಕೇಂದ್ರ ಆರಂಭಿಸುವ ಮೂಲಕ ತವರೂರು ಹುಬ್ಬಳ್ಳಿಗೆ ಕೊಡುಗೆ ನೀಡಲು ಮುಂದಾದ ಯಶವಂತ ಸರದೇಶಪಾಂಡೆ ಅವರಿಗೆ ರಂಗಪ್ರೇಮಿಗಳು ‘ಆಲ್ ದಿ ಬೆಸ್ಟ್‌’ ಹೇಳಬೇಕಿದೆ.

ಟಿಪಿಕಲ್ ಧಾರವಾಡ ಕನ್ನಡ ಇಷ್ಟಪಡುವವರ ಸಂಖ್ಯೆ ಹೆಚ್ಚಿಸಿದ ನಿರ್ದೇಶಕ

ಯಶವಂತ ಸರದೇಶಪಾಂಡೆ ದೇಶ-ವಿದೇಶಗಳಲ್ಲಿ ಹುಬ್ಬಳ್ಳಿಯ ಕೀರ್ತಿ ಪತಾಕೆ ಹಾರಿಸಿದವರು. ರಂಗಭೂಮಿಯಲ್ಲಿ ಅಗಾಧ ಸಾಧನೆ ಮಾಡಿದ ಅವರು ಹಲವು ಧಾರವಾಹಿಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದರು. ಕಮಲ್ಹಾಸನ್‌ ನಟಿಸಿದ ರಾಮ ಭಾಮ ಶಾಮ ಚಿತ್ರಕ್ಕೆ ಸಂಭಾಷಣೆ ಬರೆದ ಯಶವಂತ ಟಿಪಿಕಲ್ ಧಾರವಾಡ ಕನ್ನಡ ಇಷ್ಟ ಪಡುವವರ ಸಂಖ್ಯೆ ಹೆಚ್ಚಲು ಕಾರಣರಾದರು. ‘ಯಾರಿಗೆ ಇಡ್ಲಿ’, ‘ಐಡ್ಯಾ ಮಾಡ್ಯಾರ್‌’ ಸೇರಿದಂತೆ ಹಲವು ಚಿತ್ರಗಳನ್ನು ಕನ್ನಡ ನಾಡಿಗೆ ನೀಡಿದ್ದಾರೆ. ಇವರು ಹಲವು ಸಾಕ್ಷ್ಯ ಚಿತ್ರಗಳನ್ನು ನಿರ್ದೇಶಿಸಿರುವುದು ಹೆಗ್ಗಳಿಕೆ.

ಹಲವು ವರ್ಷಗಳ ಕಾಲ ರಂಗಭೂಮಿ, ಸಿನಿಮಾ, ಧಾರವಾಹಿ ಕ್ಷೇತ್ರದಲ್ಲಿ ಅನುಭವ ಪಡೆದುಕೊಂಡಿದ್ದು, ಅನುಭವವನ್ನು ನನ್ನ ಊರಿನ ಮಕ್ಕಳಿಗೆ ಧಾರೆ ಎರೆಯಬೇಕೆಂಬುದು ಹೆಬ್ಬಯಕೆಯಾಗಿದೆ. ರಂಗ ತರಬೇತಿ ನೀಡಿ ಈ ಭಾಗದಲ್ಲಿ ರಂಗಭೂಮಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು ಉದ್ದೇಶವಾಗಿದೆ.

•ಯಶವಂತ ಸರದೇಶಪಾಂಡೆ, ರಂಗಾಲಯದ ಮುಖ್ಯಸ್ಥ

Advertisement

Udayavani is now on Telegram. Click here to join our channel and stay updated with the latest news.

Next