ಮುಂಬಯಿ: ಡಾರ್ಲಿಂಗ್ ಪ್ರಭಾಸ್ ಅವರ ಮತ್ತೊಂದು ಪ್ಯಾನ್ ಇಂಡಿಯಾ ಬಿಗ್ ಬಜೆಟ್ ಸಿನಿಮಾ ʼಆದಿಪುರುಷ್ʼ ಟೀಸರ್ ರಿಲೀಸ್ ಆಗಿ ಭರ್ಜರಿ ವೀಕ್ಷಣೆ ಪಡೆದುಕೊಳ್ಳುತ್ತಿದೆ. ಅಯೋಧ್ಯೆಯಲ್ಲಿ ಭಾನುವಾರ ಸಂಜೆ (ಅ.2 ರಂದು) ರಿಲೀಸ್ ಆದ ಟೀಸರ್ ಬಗ್ಗೆ ನೆಟ್ಟಿಗರ ಚರ್ಚೆ ಜೋರಾಗಿದೆ.
ಆಳ ಸಮುದ್ರದಲ್ಲಿ ಧ್ಯಾನಸ್ಥನಾಗಿ ಮೊದಲ ನೋಟದಲ್ಲಿ ಕಾಣಿಸಿಕೊಳ್ಳುವ ಪ್ರಭಾಸ್ ಆ ಬಳಿಕ ನ್ಯಾಯದ ಕೈಯಿಂದ ಅನ್ಯಾಯದ ವಿನಾಶʼ ಎಂದು ಡೈಲಾಗ್ ಹೇಳಿ ದುಷ್ಟ ಶಕ್ತಿಗಳ ಸಂಹಾರಕ್ಕೆ ಮುಂದಾಗುವ ದೃಶ್ಯಗಳನ್ನು ವಿಎಫ್ ಎಕ್ಸ್, ಗ್ರಾಫಿಕ್ಸ್ ಮೂಲಕ ತೋರಿಸಲಾಗಿದೆ. ಹತ್ತು ತಲೆಯ ರಾವಣನಾಗಿ ಸೈಫ್ ಅಲಿ ಖಾನ್, ಸೀತೆಯಾಗಿ ಕೃತಿ ಸನೋನ್ , ಲಕ್ಷ್ಮಣನಾಗಿ ಸನ್ನಿ ಸಿಂಗ್ ಕಾಣಿಸಿಕೊಂಡಿದ್ದಾರೆ.
ʼತಾನಾಜಿʼ ಚಿತ್ರವನ್ನು ನಿರ್ದೇಶನ ಮಾಡಿದ್ದ, ಓಂ ರಾವುತ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. 500 ಕೋಟಿ ಬಜೆಟ್ ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಇಂಥ ಬಿಗ್ ಬಜೆಟ್ ಸಿನಿಮಾದ ಟೀಸರ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಅತಿಯಾದ ವಿಎಫ್ ಎಕ್ಸ್; ಸಿಕ್ಕಾಪಟ್ಟೆ ಟ್ರೋಲ್:
ಟ್ವಿಟರ್ ಬಳಕೆದಾರರು ಟೀಸರ್ ಬಗ್ಗೆ ಆದಿಪುರುಷ್ ಟೀಸರ್ 700 ಕೋಟಿಯ ಟೆಂಪಲ್ ರನ್ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಇದು ಗೇಮ್ ಆಫ್ ಥ್ರೋನ್ಸ್ ನ ಕಳಪೆ ಕಾಪಿ ಎಂದಿದ್ದಾರೆ. ಕೆಲವರು ಇದೊಂದು ಕಾರ್ಟೂನ್ ಸಿನಿಮಾ ಎಂದಿದ್ದಾರೆ. ರಾವಣ ಮಿಲಿಟಿರಿ ಕಟಿಂಗ್ ಮಾಡಿಕೊಂಡು, ಕೂದಲನ್ನು ಸ್ಪೈಕ್ ಮಾಡಿಕೊಂಡಿದ್ದಾನೆ ಎಂದು ಒಬ್ಬರು ಬರೆದುಕೊಂಡಿದ್ದಾರೆ. ಕೆಲವರು ಪ್ರಭಾಸ್ ನಿಮ್ಮಗಿಂತ ಆರ್ ಆರ್ ಆರ್ ನಲ್ಲಿದ್ದ ರಾಮನ ಪಾತ್ರ ( ರಾಮ್ ಚರಣ್) ಎಷ್ಟೋ ಪಟ್ಟು ಮೇಲು ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆ ರಣ್ಭೀರ್ ಕಪೂರ್ ಅವರ ʼಬ್ರಹ್ಮಾಸ್ತ್ರʼ ಚಿತ್ರದ ವಿಎಫ್ ಕ್ಸ್ ಗೂ ಇಂಥದ್ದೇ ಟ್ರೋಲ್ ಗಳು ಕೇಳಿ ಬಂದಿದ್ದವು. ಆದರೆ ಚಿತ್ರ ಆದಾದ ಬಳಿಕವೂ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಕಂಡಿತ್ತು.
ʼಆದಿಪುರುಷ್ʼ ಚಿತ್ರದ ಟೀಸರ್ ಗೆ ಇನ್ನೊಂದೆಡೆ ಭರ್ಜರಿ ರೆಸ್ಪಾನ್ಸ್ ಕೇಳಿ ಬರುತ್ತಿದೆ. 24 ಗಂಟೆಯೊಳಗೆ 60 ಮಿಲಿಯನ್ ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಂ.1 ನಲ್ಲಿದೆ.
ಪ್ಯಾನ್ ಇಂಡಿಯಾ ಆದಿಪುರುಷ್ ಜನವರಿ 12, 2023 ರಂದು ತೆರೆಗೆ ಬರಲಿದೆ.