Advertisement

ಕರಾವಳಿ ತೋಟದಲ್ಲೂ ಫೈಬರ್‌ ದೋಟಿ! ಅಡಿಕೆ ಕೊಯ್ಲು, ಔಷಧ ಸಿಂಪಡಣೆ ಇನ್ನು ಸುಲಭ

01:52 AM Feb 10, 2022 | Team Udayavani |

ಪುತ್ತೂರು: ಅಡಿಕೆ ಕೊಯ್ಲು ಮತ್ತು ಮರಕ್ಕೆ ಔಷಧ ಸಿಂಪಡಣೆಗೆ ಸಾಗರ-ಸೊರಬ ಪ್ರಾಂತ್ಯದಲ್ಲಿ ಬಳಕೆ ಯಲ್ಲಿರುವ ಕಾರ್ಬನ್‌ ಫೈಬರ್‌ ದೋಟಿ ಕರಾವಳಿಗೂ ಕಾಲಿಟ್ಟಿದೆ.

Advertisement

ಕಾರ್ಮಿಕರ ಅಭಾವ, ಮರ ಏರುವಾಗಿನ ಅಪಾಯದ ಭೀತಿಯ ಹಿನ್ನೆಲೆಯಲ್ಲಿ ಅಗತ್ಯಕ್ಕನುಸಾರವಾಗಿ ಏರಿಳಿತ
ಮಾಡಿಕೊಂಡು ನೆಲ ದಿಂದಲೇ ಬಳಸಬಹುದಾದ ಈ ದೋಟಿ ಬೆಳೆಗಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ಕೊಯ್ಲು ಸಂದರ್ಭ ಕತ್ತಿಯನ್ನು ಕಟ್ಟಿದರೆ, ಸಿಂಪಡಣೆಗೆ ಸಾಮಾನ್ಯ ಪೈಪನ್ನೇ ಅಳವಡಿಸಿಕೊಳ್ಳಬಹುದು. 85 ಅಡಿ ವರೆಗಿನ ದೋಟಿಗಳು ಲಭ್ಯವಿವೆ. ಬೆಲೆ ಅಡಿಗೆ 1,000 ರೂ. ಆಗಿದ್ದು, 50 ಸಾವಿರ ರೂ. ಬಂಡವಾಳ ಹೂಡಿದರೆ ದೀರ್ಘ‌ ಬಾಳಿಕೆ ಬರುತ್ತದೆ. ಬಳಿಕ ಸಣ್ಣ- ಪುಟ್ಟ ನಿರ್ವಹಣೆ ವೆಚ್ಚ ಮಾತ್ರ. 40 ವರ್ಷ ದಾಟಿದ ಮರವಾದರೆ 80 ಅಡಿ ಎತ್ತರ ಇರಬಹುದು.

ಈಗ ಗಿಡ್ಡ ತಳಿಗಳೇ ಹೆಚ್ಚಾಗಿರುವ ಕಾರಣ 50 ಅಡಿಯ ದೋಟಿ ಸಾಕಾಗುತ್ತದೆ. ಕನಿಷ್ಠ 6 ಅಡಿಗೆ ಮಡಚಿ ವಾಹನದಲ್ಲಿ ಕೊಂಡೊಯ್ಯ ಬಹುದು. ದೋಟಿಗಿಂತಲೂ ಎತ್ತರದ ಮರವಾಗಿದ್ದರೆ ಅಗತ್ಯಕ್ಕೆ ತಕ್ಕಷ್ಟು ಏಣಿಯನ್ನು ಬಳಸಿ ಕೊಂಡರಾಯಿತು.

ತರಬೇತಿ
ದೋಟಿಯನ್ನು ನೆಲದಿಂದಲೇ ಬಳಸ ಬಹುದಾದರೂ ಕೌಶಲ ಮತ್ತು ಸಮತೋಲನ ಕಾಪಾಡಿಕೊಳ್ಳುವ ಸಾಮರ್ಥ್ಯ ಅಗತ್ಯ. ಗೊನೆ ಕೊಯ್ಯು ವಾಗ ಎಚ್ಚರ ವಹಿಸಬೇಕು. ಈ ನಿಟ್ಟಿನಲ್ಲಿ ಕ್ಯಾಂಪ್ಕೋ, ಅಡಿಕೆ ಪತ್ರಿಕೆ, ಸಿಪಿಸಿಆರ್‌ಐ ಮತ್ತು ಅಖಿಲ ಭಾರತೀಯ ಅಡಿಕೆ ಬೆಳೆಗಾರರ ಸಂಘದ ಆಶ್ರಯದಲ್ಲಿ ವಿವಿಧೆಡೆ ಉಚಿತ ತರಬೇತಿ ನಡೆದಿದೆ. ಪ್ರಾಥಮಿಕ ಸಹಕಾರಿ ಸಂಘ, ಸಂಘ-ಸಂಸ್ಥೆಗಳು ಮತ್ತು ರೈತ ಉತ್ಪಾದಕ ಸಂಘಗಳೂ ತರಬೇತಿ ಹಮ್ಮಿಕೊಳ್ಳುತ್ತಿವೆ.

Advertisement

ಮುಖ್ಯಮಂತ್ರಿಗೆ
ಕ್ಯಾಂಪ್ಕೋ ಮನವಿ
ಕಾರ್ಬನ್‌ ಫೈಬರ್‌ ದೋಟಿಯ ಮೇಲಿನ ಕಸ್ಟಮ್ಸ್‌ ಸುಂಕ, ಜಿಎಸ್‌ಟಿ ಇಳಿಸುವ ಮೂಲಕ ದೋಟಿಯ ಬೆಲೆ ಕಡಿಮೆ ಮಾಡುವಲ್ಲಿ ಸಹಕಾರ ನೀಡುವಂತೆ ಕ್ಯಾಂಪ್ಕೋ ಸಂಸ್ಥೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.

ಬಹು ಹಗುರ ಈ ದೋಟಿ!
50 ಅಡಿ ಉದ್ದ ಫೈಬರ್‌ ದೋಟಿಯು ಕೇವಲ ನಾಲ್ಕೂವರೆ ಕೆಜಿ ತೂಕದ್ದಾಗಿದೆ. ಅನಂತರ 80 ಅಡಿ ಇದ್ದರೂ ಗರಿಷ್ಠ ತೂಕ ಐದೂವರೆ ಕೆಜಿ ಇರುತ್ತದೆ. ಆದ್ದರಿಂದ ಇದನ್ನು ಬಳಸುವಾಗ ಸಮತೋಲನ ಕಾಯ್ದುಕೊಳ್ಳುವುದು ಸುಲಭಸಾಧ್ಯ.

ಕಾರ್ಬನ್‌ ಫೈಬರ್‌ ದೋಟಿ ಬಳಕೆಯ ತರಬೇತಿಗೆ ಹೆಚ್ಚಿನ ಬೇಡಿಕೆ ಇದೆ. 5 ಕಡೆಗಳಲ್ಲಿ 3 ದಿನಗಳ ಕಾಲ ನಡೆದ ತರಬೇತಿಯಲ್ಲಿ 100ಕ್ಕೂ ಅಧಿಕ ಮಂದಿ ಭಾಗವಹಿಸಿದ್ದಾರೆ. ಹೊಸ ಅಡಿಕೆ ತಳಿಯ ಮರ ಹೆಚ್ಚು ಎತ್ತರ ಇಲ್ಲದ ಕಾರಣ ಈ ದೋಟಿ ಬಳಕೆಗೆ ಅನುಕೂಲವಾಗಿದೆ.
– ಡಾ| ಭವಿಷ್ಯ, ವಿಜಾನಿ, ಸಿಪಿಸಿಆರ್‌ಐ ವಿಟ್ಲ

Advertisement

Udayavani is now on Telegram. Click here to join our channel and stay updated with the latest news.

Next