ಬೆಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ಘಟಕ ಪ್ರಥಮ ಬಾರಿಗೆ ವಾಲ್ಮೀಕಿ ಮಹರ್ಷಿ ಗೌರವಾರ್ಥ ಆದಿಕವಿ ಪುರಸ್ಕಾರ ಹಾಗೂ ವಾಗ್ದೇವಿ ಪ್ರಶಸ್ತಿ ಸ್ಥಾಪಿಸಿದೆ. ಆದಿಕವಿ ಪುರಸ್ಕಾರಕ್ಕೆ ಬಹುಶ್ರುತ ವಿದ್ವಾಂಸ ಡಾ.ಕೆ.ಎಸ್.ನಾರಾಯಣಾಚಾರ್ಯ ಹಾಗೂ ವಾಗ್ದೇವಿ ಪ್ರಶಸ್ತಿಗೆ ಡಾ.ರೋಹಿಣಾಕ್ಷ ಶಿರ್ಲಾಲು ಅವರನ್ನು ಆಯ್ಕೆ ಮಾಡಿದೆ. ಎರಡು ಪ್ರಶಸ್ತಿಗಳು ತಲಾ ಒಂದು ಲಕ್ಷ ರೂ. ಹಾಗೂ ಸ್ಮರಣಿಕೆ ಒಳಗೊಂಡಿವೆ. ಇದೇ 24ರಂದು ದಿ ಮಿಥಿಕ್ ಸೊಸೈಟಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಮಣಿಪಾಲ್ ಗ್ಲೋಬಲ್ ಎಜುಕೇಷನ್ ಅಧ್ಯಕ್ಷ ಡಾ. ಮೋಹನ್‌ದಾಸ್ ಪೈ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ನಗರದ ಚಾಮರಾಜಪೇಟೆ ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ಶುಕ್ರವಾರ ಮಾಹಿತಿ ನೀಡಿದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ಘಟಕದ ಅಧ್ಯಕ್ಷ ಪ್ರೊ. ಪ್ರೇಮಶೇಖರ, ಮೊದಲ ಬಾರಿಗೆ ಎರಡು ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ವಾಲ್ಮೀಕಿ ಮಹರ್ಷಿಯನ್ನು ಆದಿಕವಿ ಎಂದೇ ಜಗತ್ತು ಕೊಂಡಾ ಡುತ್ತಿದೆ. ಅದರಂತೆ ಆದಿಕವಿ ಹೆಸರಿನ ಪ್ರಶಸ್ತಿಗೆ ಡಾ.ಕೆ.ಎಸ್.ನಾರಾಯಣಾಚಾರ್ಯ ಹಾಗೂ ವಾಗ್ದೇವಿ ಪ್ರಶಸ್ತಿಗೆ ಡಾ.ರೋಹಿಣಾಕ್ಷ ಶಿರ್ಲಾಲು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಪರಿಷತ್ 1966ರಲ್ಲಿ ಸ್ಥಾಪನೆಯಾಗಿದ್ದು, 2015 ರಲ್ಲಿ ಕರ್ನಾಟಕ ರಾಜ್ಯ ಘಟಕ ಕಾರ್ಯಾರಂಭವಾಗಿದೆ. ಮುಖ್ಯವಾಗಿ ಮೂರು ಉದ್ದೇಶಗಳಿಗೆ ಒತ್ತು ನೀಡಲಾಗಿದೆ. ಯುವ ಬರಹಗಾರರಿಗೆ ಸೃಜನಶೀಲ ಹಾಗೂ ಸೃಜನೇತರ ತರಬೇತಿ ನೀಡುವುದಕ್ಕೆ ಆದ್ಯತೆ ನೀಡಲಾಗಿದೆ. ಜತೆಗೆ ಸಾಹಿತಿಗಳನ್ನು ಗೌರವಿಸುವ ನಿಟ್ಟಿನಲ್ಲಿ ಕೆಲ ಪ್ರಶಸ್ತಿ ನೀಡಲು ತೀರ್ಮಾನಿಸಿದ್ದು, ಅರ್ಹರಿಗೆ ಪ್ರಶಸ್ತಿ ನೀಡಿ ಅದರ ಮೌಲ್ಯ ಹೆಚ್ಚಿಸುವುದು ನಮ್ಮ ಆಶಯ ಎಂದು ಹೇಳಿದರು.
ಬದಲಾವಣೆ ಸಮಾಜದ ನಿಯಮ. ಸಮಾಜ ಇಡೀಯಾಗಿ ತಪ್ಪು ಮಾಡುವುದು. ಕಾಲಾನಂತರ ಆ ದಾರಿ ಸರಿಯಲ್ಲ ಎನಿಸಿದಾಗ ಸೂಕ್ತ ದಾರಿಯ ಹುಡುಕಾಟ ನಡೆಸುವುದು ಅನಾದಿ ಕಾಲದಿಂದ ನಡೆದು ಬಂದಿದೆ. ಹಾಗೆಂದು ವ್ಯಕ್ತಿ, ಸಂಸ್ಥೆ, ಸಂಘಟನೆಯನ್ನು ದೂಷಿಸುವುದು ಸರಿಯಲ್ಲ. ಒಂದು ಕಾಲಘಟ್ಟದಲ್ಲಿ ಸರಿ ಎನಿಸಿದ್ದು, ನಂತರ ಸರಿ ಎನಿಸದಿರಬಹುದು. ಹೀಗಾಗಿ ಹೊಸ ಹಾದಿಯ ಹುಡುಕಾಟದಲ್ಲಿ ಭಾರತೀಯ ಸಮಾಜವಿದೆ ಎಂಬುದು ನಮ್ಮ ನಂಬಿಕೆ ಎಂದು ತಿಳಿಸಿದರು.
ಪರಿಷತ್‌ನ ಗೌರವ ಸಲಹೆಗಾರ ಡಾ.ಎಸ್.ಆರ್.ಲೀಲಾ ಮಾತನಾಡಿ, ರಾಮಾಯಣ ಜಗತ್ತಿನ ಪ್ರಥಮ ಸಾಹಿತ್ಯ ಸಂಪುಟ. ಆದರೆ ವಾಲ್ಮೀಕಿ ಮಹರ್ಷಿಗಳ ಬಗ್ಗೆ ಆದಿಕವಿ ಹೆಸರಿನಲ್ಲಿ ಒಂದು ಪ್ರಶಸ್ತಿಯೂ ಇಲ್ಲ. ರಾಮಾಯಣದ ಬಗ್ಗೆ ಜನರ ಗಮನ ಸೆಳೆಯಬೇಕಿದ್ದು, ಆ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಸರ್ಕಾರದಿಂದ ಸಹಾಯ ಪಡೆಯದೆ, ಸಾಹಿತ್ಯಾಸಕ್ತರು, ದೇಶ ಒಳಿತಾಗಬೇಕು ಎಂದು ಬಯಸುವವರ ನೆರವಿನೊಂ ದಿಗೆ ಪರಿಷತ್‌ನ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಪ್ರಸಕ್ತ ವರ್ಷದಿಂದ ಪ್ರಶಸ್ತಿ ನೀಡಲಾರಂಭಿಸುತ್ತಿದ್ದು, ವಾರ್ಷಿಕ ಕಾರ್ಯಕ್ರಮವಾಗಲಿದೆ.
ಸಾಧಕರಿಗೆ ಒಂದು, ಸಿದ್ಧರಿಗೆ ಒಂದು ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು. ಆದಿಕವಿ ಪ್ರಶಸ್ತಿಗೆ ಉದ್ಯಮಿ ಜೆ.ಕೆ.ಗ್ರೂಪ್‌ನ ಎಸ್. ಜಯರಾಮ್ ದಂಪತಿ ದಾನಿಗಳಾಗಿದ್ದು, ವಾಗ್ದೇವಿ ಪುರಸ್ಕಾರಕ್ಕೆ ವಾಗ್ದೇವಿ ಶಿಕ್ಷಣ ಸಮೂಹದ ಸಂಸ್ಥಾಪಕ ಅಧ್ಯಕ್ಷರಾದ ಕೆ.ಹರೀಶ್ ದಾನಿಯಾಗಿದ್ದಾರೆ ಎಂದು ಹೇಳಿದರು. ಎಸ್.ಜಯರಾಮ್, ಕೆ.ಹರೀಶ್, ಪರಿಷತ್‌ನ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ ಉಪಸ್ಥಿತರಿದ್ದರು.