Advertisement

ಮೈಸೂರು-ಕೇದಾರಕ್ಕೆ ಸೇತು ಆದಿ ಶಂಕರರ ಪ್ರತಿಮೆ

03:32 AM Jun 17, 2021 | Team Udayavani |

ಅದ್ವೆ„ತ ಸಿದ್ಧಾಂತ ಪ್ರತಿಪಾದನೆಯೊಂದಿಗೆ ಹಿಂದೂ ಧರ್ಮ ಪುನರುತ್ಥಾನಗೊಳಿಸಿದ ಶಂಕರಾಚಾರ್ಯರ ಸುಂದರ, ಬೃಹತ್‌ ಪ್ರತಿಮೆ ಮೈಸೂರಿನಲ್ಲಿ ಜೀವತಳೆದು, ಉತ್ತರಾಖಂಡದ ಕೇದಾರನಾಥದಲ್ಲಿನ ಆಚಾರ್ಯರ ಐಕ್ಯ ಸ್ಥಳದಲ್ಲಿ ನೆಲೆಗೊಳ್ಳಲಿದೆ. ಭಾರತದ ಶ್ರೇಷ್ಠ ಸಂಸ್ಕೃತಿಯನ್ನು ಎತ್ತಿಹಿಡಿದ ಆಚಾರ್ಯತ್ರಯರಲ್ಲಿ ಮೊದಲಿಗರಾದ ಶಂಕರಾಚಾರ್ಯ(ಆದಿ ಶಂಕರ)ರು, 32ನೇ ವಯಸ್ಸಿನಲ್ಲೇ ಉತ್ತರಾಖಂಡದ ಕೇದಾರನಾಥ ಕ್ಷೇತ್ರದಲ್ಲಿ ಐಕ್ಯರಾದರು. ಈ ಪುಣ್ಯಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಶ್ರೀ ಶಂಕರಾಚಾರ್ಯರ ಅಧ್ಯಯನ ಪೀಠ, ಮ್ಯೂಸಿಯಂ ಸ್ಥಾಪನೆಯಾಗುತ್ತಿದ್ದು, ಶಂಕರಾಚಾರ್ಯರ ಸಮಾಧಿ ಸ್ಥಳದಲ್ಲಿ ಪ್ರತಿ ಷ್ಠಾಪನೆಯಾಗಲಿರುವ ಬೃಹದಾಕಾರದ ಪ್ರತಿಮೆ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಲ್ಲಿನ ಕೃಷ್ಣ ಶಿಲೆಯಲ್ಲಿಯೇ ಸಿದ್ಧವಾಗಿರುವುದು ವಿಶೇಷ.

Advertisement

ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ
ಶ್ರೀ ಶಂಕರಾಚಾರ್ಯರ ಬೃಹತ್‌ ಪ್ರತಿಮೆ ನಾಳೆ (ಜೂ.18ರಂದು) ಕೇದಾರನಾಥದತ್ತ ಪ್ರಯಾಣ ಬೆಳೆಸಲಿದ್ದು, ಅದಕ್ಕಾಗಿ ಸಕಲ ತಯಾರಿ ನಡೆಸಲಾಗುತ್ತಿದೆ. ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಮೂರ್ತಿ ಕೆತ್ತನೆಗೆ ಪ್ರತೀ ರಾಜ್ಯಗಳಿಂದಲೂ ಕಲಾವಿದರನ್ನು ಆಯ್ಕೆ ಮಾಡಲಾಗಿತ್ತು. ಪರೀûಾರ್ಥವಾಗಿ ಆಚಾರ್ಯರ ಮಾದರಿ ಮೂರ್ತಿ ಕೆತ್ತನೆಗೆ ಸಮಯಾವಕಾಶ ನೀಡಲಾಗಿತ್ತು. ಅದರಂತೆ ಕರ್ನಾಟಕದಿಂದ ಮೈಸೂರಿನ ಅಗ್ರಹಾರ ನಿವಾಸಿ ಅರುಣ್‌ ಯೋಗಿರಾಜ್‌ 2 ಅಡಿಯಲ್ಲಿ ಮಾದರಿ ಮೂರ್ತಿ ತಯಾರಿಸಿ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದರು. ಖುದ್ದು ಪ್ರಧಾನಿಯವರೇ ಇದನ್ನು ನೋಡಿ ಸಂತೋಷಗೊಂಡು ಇವರಿಗೆ ಕೆತ್ತನೆ ಕೆಲಸ ನೀಡಿ ಎಂದು ಆದೇಶಿಸಿದ್ದರಂತೆ. ಹಾಗೆಂದು ಈ ಕಾರ್ಯದ ಉಸ್ತುವಾರಿ ವಹಿಸಿರುವ ಜಿಂದಾಲ್‌ ಸ್ಟೀಲ್ಸ್‌ನ ಸಂದೀಪ್‌ ಗೋಕುಲ್‌ ತಮಗೆ ದೂರವಾಣಿ ಕರೆ ಮಾಡಿ ತಿಳಿಸಿದರು ಎಂದು 37 ವರ್ಷದ ಅರುಣ್‌ ಯೋಗಿರಾಜ್‌ ತಮಗೆ ಸಿಕ್ಕ ಅವಕಾಶದ ಬಗ್ಗೆ ಹೇಳಿದರು.

12.5 ಅಡಿ ಎತ್ತರದ ಮೂರ್ತಿ
2021ರ ಜೂನ್‌ನಲ್ಲಿ ಕೆತ್ತನೆ ಕಾರ್ಯ ಪೂರ್ಣಗೊಳ್ಳಬೇಕು ಎಂಬ ಸೂಚನೆ ಇದ್ದಿದ್ದರಿಂದ 2020ರ ಸೆಪ್ಟಂಬರ್‌ನಿಂದ 9 ಜನ ಸಹ ಕಲಾಕಾರರೊಂದಿಗೆ ಕೆಲಸ ಆರಂಭಿಸಿ, ಜೂ.15ರಂದು 12.5 ಅಡಿ ಎತ್ತರದ ಮೂರ್ತಿ ಕೆತ್ತನೆ ಕೆಲಸ ಪೂರ್ಣಗೊಳಿಸಲಾಗಿದೆ. ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆಯಲ್ಲಿ ಸಿಗುವ ಕೃಷ್ಣಶಿಲೆಯನ್ನು ಪ್ರತಿಮೆಗೆ ಬಳಸಲಾಗಿದ್ದು, ಸುಮಾರು 120 ಟನ್‌ ಕೃಷ್ಣಶಿಲೆಯನ್ನು ಬಳಸಿ, ಕುಳಿತಿರುವ ಭಂಗಿಯಲ್ಲಿ ಸುಮಾರು 12.5 ಅಡಿ ಎತ್ತರದ ಸುಮಾರು 35 ಟನ್‌ ತೂಕವಿರುವ ಪ್ರತಿಮೆ ನಿರ್ಮಿಸಲಾಗಿದೆ.

5ನೇ ತಲೆಮಾರಿನ ಶಿಲ್ಪ ಕಲಾವಿದ
ಶಿಲ್ಪಿ ಅರುಣ್‌ ಯೋಗಿರಾಜ್‌ 5ನೇ ತಲೆಮಾರಿನ ಶಿಲ್ಪ ಕಲಾವಿದರು. ಬಿಸಿಲು, ಮಳೆ, ಗಾಳಿ, ಬೆಂಕಿ ತಗಲಿದರೂ ಶಿಲ್ಪಕ್ಕೆ ಏನೂ ಆಗುವು ದಿಲ್ಲ. ಜತೆಗೆ ಈ ಮೂರ್ತಿಗೆ ಅಭಿಷೇಕ ಮಾಡಿ ಅದರ ನೀರು ಕುಡಿದರೂ ಯಾವುದೇ ಸಮಸ್ಯೆ ಆಗುವುದಿಲ್ಲ. ಹಾಗಾಗಿ ಈ ಕಲ್ಲನ್ನೇ ಆಯ್ಕೆ ಮಾಡಿ ಕೆತ್ತನೆ ಮಾಡಲಾಗಿದೆ ಎಂದು ಅರುಣ್‌ ಪತ್ರಿಕೆಗೆ ತಿಳಿಸಿದರು. ಸಿದ್ಧಗಂಗಾ ಕ್ಷೇತ್ರದ ಬಳಿಯ ಹರಳೂರು ಗ್ರಾಮದಲ್ಲಿರುವ ಲಿಂಗೈಕ್ಯ ಸಿದ್ಧಗಂಗಾ ಶ್ರೀಗಳ ಪ್ರತಿಮೆ, ಮೈಸೂರಿನಲ್ಲಿ ಪ್ರತಿಷ್ಠಾಪನೆಯಾಗಿರುವ ಜಯಚಾಮರಾಜ ಒಡೆಯರ್‌ ಪ್ರತಿಮೆ, ಪುರಭವನದ ಎದುರು ಸ್ಥಾಪಿಸಿದ ಅಂಬೇಡ್ಕರ್‌ ಪ್ರತಿಮೆ, ರೈಲ್ವೇ ಮ್ಯೂಸಿಯಂನಲ್ಲಿರುವ ಕಾಮನ್‌ ಮನ್‌ ಪ್ರತಿಮೆ ಹೀಗೆ ಹಲವು ಪ್ರತಿಮೆಗಳನ್ನು ನಿರ್ಮಿಸಿದ ಕೀರ್ತಿ ಶಿಲ್ಪಿ ಅರುಣ್‌ಗೆ ಸಲ್ಲುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next