Advertisement

ಆದಿ ದ್ರಾವಿಡ ಜನಾಂಗವೆಂದು ಜಾತಿ ದೃಢೀಕರಣ ಪತ್ರಕ್ಕೆ ಒತ್ತಾಯ

04:17 PM Feb 27, 2017 | |

ಮಡಿಕೇರಿ : ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ನೆಲೆಸಿರುವ ದಕ್ಷಿಣ ಕನ್ನಡ ಮೂಲದ ಆದಿ ದ್ರಾವಿಡ ಜನಾಂಗ ಬಾಂಧವರಿಗೆ ಅವರ ಜಾತಿಯ ಹೆಸರಿನಲ್ಲಿ ಜಾತಿ ದೃಢೀಕರಣ ಪತ್ರ ನೀಡಲು ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೊಡಗು ಜಿಲ್ಲಾ ಆದಿ ದ್ರಾವಿಡ ಸೇವಾ ಸಮಿತಿಯ ಜಿಲ್ಲಾ ಸಂಚಾಲಕ ಎಚ್‌.ಎಂ. ಸೋಮಪ್ಪ ಒತ್ತಾಯಿಸಿದ್ದಾರೆ. 

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ವ್ಯಾಪ್ತಿಗೆ ಆದಿ ದ್ರಾವಿಡ ಜನಾಂಗ ಒಳಪಡುತ್ತಿದ್ದು, ಜಿಲ್ಲೆಯಲ್ಲಿ  20 ಸಾವಿರಕ್ಕೂ ಹೆಚ್ಚಿನ ಆದಿ ದ್ರಾವಿಡ ಜನಾಂಗ ಬಾಂಧವರು ಇದ್ದಾರೆ ಎಂದರು. 

ಇವರಲ್ಲಿ ಕೇವಲ ಶೇ.10ರಷ್ಟು ಮಂದಿಗೆ   ಮಾತ್ರ ಆದಿ ದ್ರಾವಿಡ  ಹೆಸರಿನಲ್ಲಿ ಜಾತಿ ದೃಢೀಕರಣ ಪತ್ರ ದೊರಕಿದೆ. ಉಳಿದವರಿಗೆ ಆದಿ ಕರ್ನಾಟಕ, ಪಾಲೆ ಮೊದಲಾದ ಹೆಸರಿನಲ್ಲಿ ಮನಬಂದಂತೆ ಅಧಿಕಾರಿಗಳು ಜಾತಿ ದೃಢೀಕರಣ ಪತ್ರ ನೀಡಿದ್ದಾರೆ. ಇದರಿಂದ ಸಮೂಹ ಬಾಂಧವರು ಸರ್ಕಾರದ ಸೌಲಭ್ಯಗಳನ್ನು ಪಡೆಯು ವಲ್ಲಿ ವಂಚಿತರಾಗಿದ್ದಾರೆ ಎಂದು ಅವರು ಆರೋಪಿಸಿದರು.

ನೆರೆಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆದಿ ದ್ರಾವಿಡ ಸಂಘ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಶೇ.90 ರಷ್ಟು ಮಂದಿ ಆದಿ ದ್ರಾವಿಡ ಹೆಸರಿನಲ್ಲಿ ಜಾತಿ ದೃಢೀಕರಣ ಪತ್ರವನ್ನು ಪಡೆದುಕೊಂಡಿದ್ದಾರೆ. ಅಲ್ಲಿನ ಸಂಘಟನೆ ಸಕ್ರಿಯವಾಗಿ ತಮ್ಮ ಸಮೂಹ ಬಾಂಧವರಲ್ಲಿ ಅರಿವನ್ನು ಮೂಡಿಸುವ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದು, ಪ್ರಸಕ್ತ ಸಾಲಿನ ಎಪ್ರಿಲ್‌ನಲ್ಲಿ ದಶಮಾನೋತ್ಸವ ಆಚರಣೆಗೆ ಮುಂದಾಗಿದೆ. ಅದೇ ಕೊಡಗು ಜಿಲ್ಲೆಯಲ್ಲಿ 2011ರಲ್ಲಿ ಆದಿ ದ್ರಾವಿಡ ಸಂಘಟನೆಯನ್ನು ಹುಟ್ಟು ಹಾಕಲಾಗಿದೆ. ಆದರೆ ಇದು ನಿಷ್ಕ್ರಿಯವಾಗಿದ್ದು, ಪುನಶ್ಚೇತನಗೊಳಿಸಲು ಕ್ರಮ ಕೈಗೊಳ್ಳಾಗುವುದು ಎಂದರು.  

ಇತ್ತೀಚೆಗಷ್ಟೆ ನಡೆದ ಜಾತಿ ಜನಗಣತಿ ಸಂದರ್ಭ ಅಧಿಕಾರಿಗಳು ತಮಗೆ ತೋಚಿದಂತೆ ಗಣತಿ ಕಾರ್ಯ ನಡೆಸಿದ್ದು, ಸಮರ್ಪಕ ರೀತಿಯಲ್ಲಿ ತಮ್ಮ ಜಾತಿಯ ಹೆಸರನ್ನು ದಾಖಲಿಸಿಕೊಳ್ಳದೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು. ಮುಂದಿನ ದಿನಗಳಲ್ಲಿ ತಮ್ಮ ಸಮೂಹ ಬಾಂಧವರನ್ನು ಆದಿ ದ್ರಾವಿಡವೆಂದೇ ನಮೂದಿಸಿ ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿದರು. ಅರಿವಿನ ಕೊರತೆ ಹೊಂದಿರುವ ಜಿಲ್ಲೆಯ ಆದಿ ದ್ರಾವಿಡ ಸಮೂಹ ಬಾಂಧವರಿಗೆ ತಿಳಿವಳಿಕೆಯನ್ನು ನೀಡುವ ಚಿಂತನೆ ಹೊಂದಲಾಗಿದೆ. 

Advertisement

ಫೆ.27ರಂದು ಬೆಳಗ್ಗೆ 11 ಗಂಟೆಗೆ  ನಗರದ  ಕಾವೇರಿ ಕಲಾಕ್ಷೇತ್ರದಲ್ಲಿ ಕೊಡಗು ಜಿಲ್ಲಾ ಆದಿ ದ್ರಾವಿಡ ಸೆೇವಾ   ಸಮಿತಿಯ ಸಮಾವೇಶ ಮತ್ತು ಜಿಲ್ಲಾ ಸಮಿತಿಯ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುವುದೆಂದು ಎಚ್‌. ಸೋಮಪ್ಪ  ಮಾಹಿತಿ ನೀಡಿದರು. ಸಮಾವೇಶದಲ್ಲಿ ದಕ್ಷಿಣ ಕನ್ನಡ ಆದಿ ದ್ರಾವಿಡ ಸಂಘ‌ಟನೆಯ ಅಧ್ಯಕ್ಷರು, ಕಾರ್ಯದರ್ಶಿಗಳು ಸೇರಿದಂತೆ ಪದಾಧಿಕಾರಿಗಳು ಆಗಮಿಸಿ ಅಗತ್ಯ ಮಾಹಿತಿಯನ್ನು ಒದಗಿಸಲಿದ್ದಾರೆ ಎಂದು ಎಚ್‌.ಎಂ. ಸೋಮಪ್ಪ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸೋಮವಾರಪೇಟೆ  ಹೋಬಳಿ ಪ್ರಮುಖ ತನಿಯಪ್ಪ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next