Advertisement

ಜನರ ತೀರ್ಮಾನಕ್ಕೆ ಬದ್ಧ; ಚುನಾವಣೆ ಸೋಲಿನ ಬಳಿಕ ಜಗದೀಶ ಶೆಟ್ಟರ್ ಪ್ರತಿಕ್ರಿಯೆ

04:29 PM May 13, 2023 | Team Udayavani |

ಹುಬ್ಬಳ್ಳಿ: ನನ್ನನ್ನು ಸೋಲಿಸಬೇಕೆಂದು ಹಲವರು ಹಟ ತೊಟ್ಟಿದ್ದರು. ಅವರ ಆಸೆ ಈಡೇರಿದೆ. ಜನರ‌ ತೀರ್ಮಾನ ಗೌರವಿಸುತ್ತೇನೆ. ಅವರು ನನ್ನನ್ನು ಸೋಲಿಸುವ ಜೊತೆಗೆ ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಿದ್ದಾರೆ ಎಂದು ಜಗದೀಶ ಶೆಟ್ಟರ ಹೇಳಿದರು.

Advertisement

ಶನಿವಾರ ತಮ್ಮ ನಿವಾಸ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕೆಟ್ ಕೊಡದೆ ಇದ್ದುದನ್ನು ಸವಾಲಾಗಿ ಸ್ವೀಕರಿಸಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಸೋತಿದ್ದಕ್ಕೆ ದುಃಖ ಇಲ್ಲ. ನನ್ನ ವಿರುದ್ಧ ಷಡ್ಯಂತ್ರ ಮಾಡಿದವರು ನನಗೆ ಪೆಟ್ಟು ಕೊಡಲು ಹೋಗಿ ಬಿಜೆಪಿಗೆ ಪೆಟ್ಟು ಕೊಟ್ಟಿದ್ದಾರಲ್ಲ. ಅವರ ಷಡ್ಯಂತ್ರದಿಂದಾಗಿ ಬಿಜೆಪಿ ಅವಸಾನದ ಅಂಚಿಗೆ ಬಂದಿದೆ ಎಂದರು.

ನಾನು ಸಿಂದಗಿ, ಮುದ್ದೇಬಿಹಾಳ, ಕೊಪ್ಪಳ, ಹಾವೇರಿ ಸೇರಿದಂತೆ ಹಲವು ಕಡೆ ಪ್ರವಾಸ ಮಾಡಿದ್ದೆ. ಅಲ್ಲಿ ಕಾಂಗ್ರೆಸ್ ಗೆದ್ದಿದೆ. ಲಿಂಗಾಯತ ಸಮುದಾಯಕ್ಕೆ ಅವಮಾನ ಮಾಡಿದ್ದರ ಪರಿಣಾಮವು ಮುಂಬಯಿ ಕರ್ನಾಟಕ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿದಂತೆ ಇಡೀ ರಾಜ್ಯದ ಮೇಲಾಗಿದೆ ಎಂದರು.

70 ವರ್ಷದ ನಂತರ ಚುನಾವಣಾ ರಾಜಕಾರಣದಲ್ಲಿ ಇರುವುದಿಲ್ಲ ಎಂದು ಹೇಳಿದ್ದೇನೆ. ಈಗ ನನಗೆ 67 ವರ್ಷ. ಮುಂದಿನ ದಿನಗಳಲ್ಲಿ ಏನು ಆಗುತ್ತದೆ ನೋಡೋಣ. ಚುನಾವಣಾ ರಾಜಕಾರಣದಲ್ಲಿ‌ ಇರದಿದ್ದರೂ ಇನ್ನು ಹತ್ತು ವರ್ಷ ಕ್ರಿಯಾಶೀಲ‌ವಾಗಿ ರಾಜಕಾರಣದಲ್ಲಿ ಇರುತ್ತೇನೆ. ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದರು.

ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ, ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದ್ದರೂ ಇಂದು ಬಿಜೆಪಿಗೆ ಕಡಿಮೆ‌ ಸೀಟುಗಳು‌ ಬಂದಿವೆ. ಇದು ಬಿಜೆಪಿ ಅವಸಾನ ಆಗುತ್ತಿರುವುದಕ್ಕೆ ಸಾಕ್ಷಿ. ಜಗದೀಶ ಶೆಟ್ಟರ ಅವರನ್ನು ಸೋಲಿಸಬೇಕೆಂಬ ಕಾರಣಕ್ಕೆ ದಕ್ಷಿಣ ಭಾರತದಲ್ಲಿ ತಮ್ಮ ಅಸ್ತಿತ್ವ ಕಳೆದುಕೊಂಡಿದ್ದಾರೆ ಎಂದು ಕುಟುಕಿದರು.

Advertisement

ನಾನು ಮುಖ್ಯಮಂತ್ರಿ ಆಗಿದ್ದಾಗ ಪಕ್ಷ ಒಡೆದು ಮೂರು ಭಾಗವಾಗಿದ್ದರೂ ನಾನು 40 ಸೀಟುಗಳನ್ನು ಗೆದ್ದಿದ್ದೆ. ಈಗ 60 ಸೀಟು ಗೆಲ್ಲಲು ಗುದ್ದಾಡುತ್ತಿದ್ದಾರೆ. ನಾವೇ ಬಿಜೆಪಿ ಬೆಳೆಸಿದ್ದೆವು. ಕ್ಷೇತ್ರದಲ್ಲಿ ಎಲ್ಲೋ ಒಂದು ಕಡೆ ಜನರ ಆ ಮನಸ್ಥಿತಿ ಬದಲಾಯಿಸಲು ಸಾಧ್ಯವಾಗಲಿಲ್ಲ. ಅದು ಸೋಲಿಗೆ ಕಾರಣ ಇರಬಹುದು. ಒಳ ಹೊಡೆತ ಹೊರ ಹೊಡೆತ ಇಲ್ಲಿ‌ ಕೆಲಸ ಮಾಡಿಲ್ಲ. ಬೂತ್ ಮಟ್ಟದಲ್ಲಿ‌ ಪರಿಶೀಲಿಸಿ ಸೋಲಿಗೆ ಕಾರಣ ಏನೆಂಬುವುದನ್ನು ಪತ್ತೆ ಮಾಡುತ್ತೇನೆ ಎಂದರು.

ಗುಜರಾತ್ ಮಾದರಿ ಇಲ್ಲಿ ಕೆಲಸ ಮಾಡಿಲ್ಲ. ಲಿಂಗಾಯತರ ಪ್ರಭಾವ ಇರುವ ಕಡೆಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ವಿ. ಸೋಮಣ್ಣ, ಮುರುಗೇಶ ನಿರಾಣಿ, ಶ್ರೀರಾಮುಲು, ಗೋವಿಂದ ಕಾರಜೋಳ ಅವರಂತಹ ಪ್ರಮುಖರು ಸೋತಿದ್ದಾರೆ‌. ಇದನ್ನು‌ ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು. ಇದರ ಪರಿಣಾಮ ಮುಂದಿನ‌ ಲೋಕಸಭಾ ಚುನಾವಣೆ ಮೇಲೂ ಆಗಲಿದೆ ಎಂದರು.

ಲಿಂಗಾಯತರನ್ನು‌ ಕಡೆಗಣಿಸಿದ್ದು, ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಬೆಲೆ ಏರಿಕೆ ಸೇರಿ ಎಲ್ಲ ಕಾರಣಗಳಿಂದ ಬಿಜೆಪಿ ಸೋಲಿಗೆ ಕಾರಣ. ಲಿಂಗಾಯತರು ಕಾಂಗ್ರೆಸ್ ಪರವಾಗಿ‌ ನಿಂತಿದ್ದಾರೆ ಎಂದರು.

ಹು-ಧಾ. ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ನನ್ನನ್ನು ಗುರಿಯಾಗಿಸಿ ಹಣ, ಅಧಿಕಾರದ ಪ್ರಭಾವ ಬಳಸಿದರು. ಇಡಿ, ಐಟಿ ದಾಳಿಯ ಬೆದರಿಕೆ ಹಾಕಿ ಭಯದ ವಾತಾವರಣ ಸೃಷ್ಟಿಸಿ ಗೆದ್ದಿದ್ದಾರೆ. ನಾನು ಅಧಿಕಾರದಲ್ಲಿ ಇಲ್ಲದಿದ್ದರೂ ಈ ಭಾಗದ ಜನರ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next