Advertisement

ಕೊಡಗಿನ 167 ಹಾಡಿಗಳ ಆದಿವಾಸಿಗಳಿಗೆ ಆಧಾರ್‌ ಭಾಗ್ಯ

08:49 PM Jul 16, 2019 | sudhir |

ಮಡಿಕೇರಿ: ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಹಾಡಿಯ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಆಧಾರ್‌ ಗುರುತಿನ ಚೀಟಿ ಕಡ್ಡಾಯವಾಗಿ ಅಗತ್ಯವಿರುವ ಹಿನ್ನೆಲೆ ಪ್ರತಿಯೊಬ್ಬ ಗಿರಿಜನ ಕುಟುಂಬದವರಿಗೆ ಆಧಾರ್‌ ಗುರುತಿನ ಚೀಟಿ ನೋಂದಾಯಿಸಲು 15 ದಿನಗಳ ಕಾಲ ಮೊಬೈಲ್‌ ಸಂಚಾರಿ ವಾಹನದ ಮೂಲಕ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಹಾಡಿಗಳಿಗೆ ತೆರಳಿ ಆಧಾರ್‌ ನೋಂದಣಿ ಮಾಡುವ ಪ್ರಕ್ರಿಯೆಗೆ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಸೋಮವಾರ ಚಾಲನೆ ನೀಡಿದರು.

Advertisement

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಆಧಾರ್‌ ನೋಂದಣಿ ಅಭಿಯಾನಕ್ಕೆ ಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಪ್ರಥಮ ಬಾರಿಗೆ ಹಾಡಿಗಳಿಗೆ ತೆರಳಿ ಆಧಾರ್‌ ನೋಂದಣಿ ಮಾಡಲಾಗುತ್ತಿದೆ. ಜಿಲ್ಲೆಯ ಮೂರು ತಾಲ್ಲೂಕಿನ ಸುಮಾರು 167 ಹಾಡಿಗಳಿಗೆ ಆಧಾರ್‌ ಕಿಟ್ಟುಗಳನ್ನು ತೆಗೆದುಕೊಂಡು ಹೋಗಿ ನೋಂದಣಿ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು. ದಿನಕ್ಕೆ 60 ಜನರಿಗೆ ಆಧಾರ್‌ ನೋಂದಣಿ ಮಾಡುವ ಗುರಿ ಇದೆ. ಗಿರಿಜನರು ಆಧಾರ್‌ ನೋಂದಣಿ ಮಾಡಿಸಿ ಸೌಲಭ್ಯ ಪಡೆಯಲು ಮುಂದಾಗಬೇಕಿದೆ ಎಂದರು.

ಜಿಲ್ಲೆಯಲ್ಲಿ 15 ದಿನಗಳ ಕಾಲ ತಾಲ್ಲೂಕಿಗೆ ಒಂದರಂತೆ ಮೂರು ಸಂಚಾರಿ ವಾಹನಗಳನ್ನು ನಿಯೋಜಿಸಲಾಗಿದ್ದು, ಸಂಚಾರಿ ವಾಹನದಲ್ಲಿ ಆಧಾರ್‌ ಕಿಟ್‌ ಒಳಗೊಂಡ ಸಲಕರಣೆಗಳು ಇರಲಿದ್ದು, ಆಫ್ಲೈನ್‌ ಮೂಲಕ ಆಧಾರ್‌ ನೋಂದಣಿ ಮಾಡಲಾಗುತ್ತದೆ ಎಂದು ಆಧಾರ್‌ ನೋಂದಣಿ ವಿಭಾಗದ ಪ್ರಶಾಂತ್‌ ಹಾಗೂ ರಾಕೇಶ್‌ ಮಾಹಿತಿ ನೀಡಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್‌, ಐಟಿಡಿಪಿ ಅಧಿಕಾರಿ ಚಂದ್ರಶೇಖರ್‌, ಸಮಾಜ ಕಲ್ಯಾಣಾಧಿ ಕಾರಿಗಳಾದ ಚಿಕ್ಕಬಸವಯ್ಯ, ಶೇಖರ್‌, ದೇವರಾಜು ಇತರರು ಉಪಸ್ಥಿತರಿದ್ದರು.

ಆಧಾರ್‌ ಕಡ್ಡಾಯ
ವಸತಿ ಸೇರಿದಂತೆ ವೈಯಕ್ತಿಕ ಸೌಲಭ್ಯ ಪಡೆಯುವಂತಾಗಲು ಆಧಾರ್‌ ಕಡ್ಡಾಯವಾಗಿದ್ದು, ಕೆಲವು ಕುಟುಂಬದವರು ಇನ್ನೂ ಆಧಾರ್‌ ನೋಂದಣಿ ಮಾಡಿಸದೆ ಸರ್ಕಾರದ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಮನಗಂಡು ಹಾಡಿಗಳಿಗೆ ತೆರಳಿ ಆಧಾರ್‌ ನೋಂದಣಿ ಮಾಡಿಸಲು ಮುಂದಾಗಲಾಗಿದೆ ಎಂದು ಐಟಿಡಿಪಿ ಇಲಾಖೆ ಅಧಿಕಾರಿ ಸಿ.ಶಿವಕುಮಾರ್‌ ಅವರು ತಿಳಿಸಿದರು. ಜಿಲ್ಲೆಯಲ್ಲಿ ಸುಮಾರು 65 ಸಾವಿರ ಆದಿವಾಸಿ ಜನರಿದ್ದು, ಇವರಿಗೆ ಸರ್ಕಾರದ ವೈಯಕ್ತಿಕ ಸೌಲಭ್ಯಗಳು ಮರೀಚಿಕೆ ಯಾಗಿದೆ ಆದರೆ ಬಳಸಿಕೊಳ್ಳಲು ಮುಂದೆ ಬಂದರೂ ಆಧಾರ್‌ ಚೀಟಿ ಇಲ್ಲದಿರುವುದರಿಂದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next