ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಹಾಗೂ ತಮ್ಮ ವಿರುದ್ಧ ನ್ಯಾ. ಎಚ್ .ಪಿ. ಸಂದೇಶ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ, ಗಂಭೀರ ಟೀಕೆ ಮಾಡಿರುವು ದನ್ನು ಪ್ರಶ್ನಿಸಿ ಎಸಿಬಿಯ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಇದೇ ವಿಚಾರವಾಗಿ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಈಗಾಗಲೇ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಅದು ವಿಚಾರಣೆಗೆ ಬರುವ ಮೊದಲೇ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.
ಅರ್ಜಿ ಸಂಬಂಧ ಸಿಜೆಐ ಎನ್.ವಿ. ರಮಣ ನೇತೃತ್ವದ ನ್ಯಾಯಪೀಠದ ಮುಂದೆ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ತುಷಾರ ಮೆಹ್ತಾ ಸೋಮವಾರ ಹಾಜ ರಾಗಿ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕೆಂದು ಮನವಿ ಮಾಡಿದರು. ಅಲ್ಲದೆ, ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯೊಂದರ ವಿಚಾರಣೆ ವೇಳೆ ಏಕಸದಸ್ಯ ನ್ಯಾಯಪೀಠ ಹಲವು ವಿಚಾರಗಳನ್ನು ಕೈಗೆತ್ತಿಕೊಂಡು, ಎಸಿಬಿ ಸಲ್ಲಿಸಿರುವ ಬಿ ರಿಪೋರ್ಟ್‌ಗಳನ್ನು ಕೇಳಿದ್ದಾರೆ.
ಎಡಿಜಿಪಿಯ ಸೇವಾ ದಾಖಲೆ ಸಲ್ಲಿಸಲು ನಿರ್ದೇಶನ ನೀಡುವುದರ ಜತೆಗೆ ಎಸಿಬಿ ಮತ್ತು ಅದರ ಮುಖ್ಯಸ್ಥರ ವಿರುದ್ಧ ಗಂಭೀರ ಟೀಕೆಗಳನ್ನು ಮಾಡಿದ್ದಾರೆ. ಅದಕ್ಕೆ ಸಿಜೆಐ, ಮಂಗಳ ವಾರ ಅರ್ಜಿಯನ್ನು ವಿಚಾರಣೆಗೆ ನಿಗದಿಪಡಿಸಲಾಗುವುದು ಎಂದು ಹೇಳಿದರು.
ಆ ಪ್ರಕರಣದಲ್ಲಿ ನೀವು ನ್ಯಾಯಮೂರ್ತಿಗಳಿಗೆ ವರ್ಗಾವಣೆ ಬೆದರಿಕೆ ಹಾಕಿದ್ದೀರಂತೆ ಅದು ನಿಜವೇ? ನೀವು(ಅರ್ಜಿದಾರರು) ಅಷ್ಟೊಂದು ಪ್ರಭಾವಶಾಲಿ ಅಧಿಕಾರಿಯೇ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಎಸ್‌ಜಿಐ, ಇಲ್ಲ ಅದೆಲ್ಲಾ ಸುಳ್ಳು, ಅದೆಲ್ಲಾ ಮಾಧ್ಯಮಗಳಲ್ಲಿ ವರದಿಯಾಗಿದೆ ಅದು ನಿಜವಲ್ಲ. ಇದರಿಂದ ಸಂಸ್ಥೆ ಘನತೆಗೆ ಭಾರಿ ಧಕ್ಕೆಯಾಗಿದೆ ಎಂದರು.