ಕಲಬುರಗಿ: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ ಆರೋಪ ಹಿನ್ನೆಲೆಯಲ್ಲಿ ಬಂದಿಖಾನೆ ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಮಂಗಳವಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾರಾಗೃಹದಲ್ಲಿ ಕೈದಿಗಳು ಮೋಜು ಮಸ್ತಿ ಮಾಡಿ ವೈಭವಯುತ ಜೀವನ ನಡೆಸುತ್ತಿದ್ದಾರೆಂಬ ವರದಿಯ ವಿಡಿಯೋ ಮಾಧ್ಯಮಗಳ ಮೂಲಕ ವೈರಲ್ ಆದ ಹಿನ್ನೆಲೆಯಲ್ಲಿ ಎಡಿಜಿಪಿ ಭೇಟಿ ನೀಡಿದರು.
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿನ ಘಟನೆಯನ್ನು ಬಹಳ ಗಂಭೀರವಾಗಿ ಪರಿಣಗಣಿಸಿದ್ದೇವೆ. ಹೀಗಾಗಿಯೇ ಬೆಂಗಳೂರಿನಿಂದ ಇಲ್ಲಿಗೆ ಬರಲಾಗಿದೆ ಎಂದು ಭೇಟಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಹೇಳಿದರು.
ಎಲ್ಲಾ ಸಿಬ್ಬಂದಿಯಿಂದ ಎಲ್ಲ ಆಯಾಮಗಳಿಂದ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಇದರಲ್ಲಿ ಯಾರನ್ನೂ ರಕ್ಷಣೆ ಮಾಡುವುದಿಲ್ಲ. ಪ್ರಮುಖವಾಗಿ ಪ್ರಾಥಮಿಕ ತನಿಖೆಗೂ ಆದೇಶ ನೀಡಿದ್ದೇನೆ. ಪ್ರಾಥಮಿಕ ವರದಿ ಬಂದ ತಕ್ಷಣವೇ ಕ್ರಮ ಕೈಗೊಳ್ಳುತ್ತೇವೆ ಎಂದು ಎಡಿಜಿಪಿ ಸ್ಪಷ್ಟಪಡಿಸಿದರು.
10 ದಿನದಲ್ಲಿ ವರದಿ ಸಲ್ಲಿಸುವಂತೆ ಸೆಂಟ್ರಲ್ ಜೈಲ್ ಮುಖ್ಯ ಅಧೀಕ್ಷಕರಿಗೆ ಸೂಚಿಸಲಾಗಿದೆ. ಕಾರಾಗೃಹದಲ್ಲಿ ಇಲ್ಲಿಯವರೆಗೆ 2G ಜಾಮರ್ ಇದ್ದವು, ಅದನ್ನು 5G ಮಾಡುತ್ತೇವೆ. ಅದರಂತೆ ಈಗಾಗಲೇ ಘಟನೆ ಬಗ್ಗೆ ಏಳು ಜನರ ವಿರುದ್ಧ ಎಫ್ ಐಆರ್ ಸಹ ದಾಖಲಾಗಿದೆ. ನಮ್ಮವರದ್ದು ಇದರಲ್ಲಿ ತಪ್ಪಿಲ್ಲ ಎಂದು ಹೇಳಲ್ಲ. ಯಾರದೇ ತಪ್ಪಿದ್ದರೂ ಕ್ರಮ ಖಚಿತ ಎಂದು ಖಡಕ್ ಆಗಿ ಹೇಳಿದರು.