Advertisement

ಬೆಳ್ಳಾರೆಗೆ ಎಡಿಜಿಪಿ ಆಲೋಕ್‌ ಕುಮಾರ್‌ ಭೇಟಿ: ಎಲ್ಲ ಅಯಾಮಗಳಲ್ಲೂ ತನಿಖೆ

02:20 AM Jul 28, 2022 | Team Udayavani |

ಸುಳ್ಯ: ಬಿಜೆಪಿ ಯುವ ಮುಖಂಡ ಪ್ರವೀಣ್‌ ಹತ್ಯೆಯ ತನಿಖೆ ಪ್ರಗತಿಯಲ್ಲಿದೆ. ಘಟನೆ ನಡೆದ ಬಳಿಕ ಇಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈಗಾಗಲೇ ಪೊಲೀಸರು ಎಲ್ಲ ಆಯಾಮಗಳಲ್ಲೂ ತನಿಖೆ ಮುಂದುವರಿಸಿದ್ದಾರೆ ಎಂದು ರಾಜ್ಯದ ಕಾನೂನು ಸುವ್ಯವಸ್ಥೆ ಎಡಿಜಿಪಿ ಆಲೋಕ್‌ ಕುಮಾರ್‌ ತಿಳಿಸಿದರು.

Advertisement

ಬೆಳ್ಳಾರೆಗೆ ಆಗಮಿಸಿ ಬಳಿಕ ಪೊಲೀಸ್‌ ಠಾಣೆ ಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಘಟನೆ ಬಗ್ಗೆ 15ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಪ್ರಕರಣದ ಕುರಿತಾಗಿ ಮುಖ್ಯಮಂತ್ರಿ, ಗೃಹ ಸಚಿವರು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಹಿರಿಯ ಪೊಲೀಸ್‌ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸ ಲಾಗುತ್ತಿದೆ. ಮಂಗಳೂರು ಕಮಿಷನರ್‌, ಉಡುಪಿ ಪೊಲೀಸರ ಸಹಾಯ ಪಡೆದು ಆರು ತಂಡಗಳನ್ನು ರಚನೆ ಮಾಡಿದ್ದೇವೆ. ಆರೋಪಿಗಳ ಪತ್ತೆಗೆ ಪೊಲೀಸ್‌ ಅಧಿಕಾರಿಗಳಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ವಿನಂತಿಸಿದರು.

ಪೊಲೀಸರು ವಶಕ್ಕೆ ಪಡೆದವರು ಕೃತ್ಯದಲ್ಲಿ ಭಾಗಿಯಾದವರೇ ಅಥವಾ ಪರೋಕ್ಷವಾಗಿ ಸಹಕರಿಸಿದವರೇ ಎಂಬ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ. ಆರೋಪಿಗಳನ್ನು ದಸ್ತಗಿರಿ ಮಾಡಿದ ಮೇಲೆ ಹತ್ಯೆಗೆ ಕಾರಣ ತಿಳಿಸುತ್ತೇವೆ. ವಿಚಾರಣೆ ಹಂತದಲ್ಲಿ ಎಲ್ಲವನ್ನೂ ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಅಂತಿಮ ದರ್ಶನಕ್ಕೆ ಸಂಸದರು, ಸಚಿವರು ಬಂದಿದ್ದಾರೆ. ಈ ವೇಳೆ ಜನರು ಭಾವಾವೇಶದಿಂದ ವಾಹನವನ್ನು ತಳ್ಳಲು ಪ್ರಯತ್ನ ಮಾಡಿದ್ದಾರೆ. ಪರಿಸ್ಥಿತಿ ಹತೋಟಿಗೆ ತರಲು ಲಘು ಲಾಠಿ ಪ್ರಹಾರ ಮಾಡಬೇಕಾಯಿತು ಎಂದು ಲಾಠಿ ಚಾರ್ಜ್‌ ಬಗ್ಗೆ ವಿವರಿಸಿದರು. ಜಿಲ್ಲಾಧಿಕಾರಿಗಳು 144 ಸೆಕ್ಷನ್‌ ಜಾರಿ ಮಾಡಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ಜನರು ಯಾರು ಗುಂಪು ಕಟ್ಟಿ ಓಡಾಡಬಾರದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ., ಎಸ್ಪಿ ಹೃಷಿಕೇಶ್‌ ಭಗವಾನ್‌, ಪೊಲೀಸ್‌ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

ಗುಪ್ತಚರ ವರದಿ ನೀಡಿತ್ತೇ?
ಕಳೆದ ವಾರ ನಡೆದ ಮಸೂದ್‌ ಹತ್ಯೆಯ ಮರುದಿನವೇ ಗುಪ್ತಚರ ಇಲಾಖೆ ಸರಕಾರಕ್ಕೆ ಸಂಭಾವ್ಯ ಅಹಿತಕರ ಘಟನೆ ಬಗ್ಗೆ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ. ಈ ಸಂದರ್ಭವನ್ನು ಬಳಸಿಕೊಂಡು ದುಷ್ಕರ್ಮಿಗಳು ಯಾವುದೇ ರೀತಿಯ ಅಪರಾಧಕೃತ್ಯ ನಡೆಸುವ ಸೂಚನೆಗಳಿವೆ ಎಂಬ ಬಗ್ಗೆ ಗುಪ್ತಚರ ಇಲಾಖೆ ವರದಿಯಲ್ಲಿ ತಿಳಿಸಿತ್ತೆನ್ನಲಾಗಿದೆ. ಆದರೆ ಈ ಸಂಬಂಧ ಸರಕಾರ ಪೊಲೀಸರಿಗೆ ಸೂಕ್ತ ಸೂಚನೆ ನೀಡಲು ನಿರ್ಲಕ್ಷ್ಯ ವಹಿಸಿತೇ ಎಂಬ ಪ್ರಶ್ನೆಗಳೆದ್ದಿವೆ. ಗುಪ್ತಚರ ಇಲಾಖೆಯ ವರದಿ ಗಮನಿಸಿದ ಬಳಿಕವಾದರೂ ರಾತ್ರಿ ರೌಂಡ್ಸ್‌ ಹೆಚ್ಚಳ, ಬೀಟ್‌ ಚುರುಕುಗೊಳಿಸುವುದು, ಚೆಕ್‌ಪೋಸ್ಟ್‌ ಬಿಗಿಗೊಳಿಸಿದ್ದರೆ ಪರಿಸ್ಥಿತಿ ಮೇಲೆ ನಿಯಂತ್ರಣ ಇರುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಮೂವರ ವಿರುದ್ಧ ದೂರು ದಾಖಲು
ಪ್ರವೀಣ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೆಯ್ಯೂರು ಮಾಡಾವು ಸಂತೋಷ್‌ ನಗರದ ಮಧುಕುಮಾರ್‌ ರಾಯನ್‌ (ಅಕ್ಷಯ ಫ್ರೆಶ್‌ ಚಿಕನ್‌ ಫಾರ್ಮ್ ನ ಕ್ಲೀನಿಂಗ್‌ ಕಾರ್ಮಿಕ) ನೀಡಿದ ದೂರಿನಂತೆ ಬೆಳ್ಳಾರೆ ಠಾಣೆಯಲ್ಲಿ ಮೂವರು ಅಪರಿಚಿತರ ವಿರುದ್ಧ ದೂರು ನೀಡಲಾಗಿದೆ. “ಚಿಕನ್‌ ಸೆಂಟರ್‌ ಮಾಲಕ ಪ್ರವೀಣ್‌ ನೆಟ್ಟಾರು ಮಂಗಳವಾರ ರಾತ್ರಿ 8.30ಕ್ಕೆ ವ್ಯಾಪಾರ ಮುಗಿಸಿ ಅಂಗಡಿ ಬಾಗಿಲು ಹಾಕಿ ಸ್ಕೂಟರಿನಲ್ಲಿ ಕುಳಿತು ಮನೆಗೆ ಹೊರಡಲು ಸಿದ್ಧರಾಗಿದ್ದರು. ತಾನು ರೈನ್‌ ಕೋಟ್‌ ತರಲೆಂದು ಅಂಗಡಿಯ ಒಳಗೆ ಹೋದ ಸಂದರ್ಭ ಕಿರುಚಿದ ಸದ್ದು ಕೇಳಿಸಿದೆ. ಹೊರಗಡೆ ಬಂದು ನೋಡುವಷ್ಟರಲ್ಲಿ ಪ್ರವೀಣ್‌ ಅವರು ಸ್ಕೂಟರ್‌ನಿಂದ ಸುಮಾರು 50 ಅಡಿ ದೂರದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅಲ್ಲಿಂದ ಮೂವರು ಅಪರಿಚಿತರು ಕೈಯಲ್ಲಿ ಹತ್ಯಾರುಗಳನ್ನು ಹಿಡಿದುಕೊಂಡು ಮೋಟಾರು ಸೈಕಲಿನಲ್ಲಿ ಪುತ್ತೂರು ಕಡೆಗೆ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next