ಗಂಗಾವತಿ: ಈಗಾಗಲೇ ಮುಂಗಾರು ಮಳೆ ಆರಂಭವಾಗಿದ್ದು ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕಿನಲ್ಲಿ ಅಗತ್ಯವಿರುವಷ್ಟು ಬೀಜ ಹಾಗೂ ರಸಗೊಬ್ಬರ ಸಂಗ್ರಹವಿರುವ ಕುರಿತು ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೂರು ತಾಲೂಕಿನಲ್ಲಿ 1.063 ಲಕ್ಷ ಹೆಕ್ಟರ್ ಕೃಷಿ ಜಮೀನಿದ್ದು ಮುಂಗಾರು ಹಂಗಾಮಿನಲ್ಲಿ 90,230 ಹೆಕ್ಟರ್ ಭೂಮಿಯಲ್ಲಿ ಬಿತ್ತನೆ ಮಾಡುವ ಸಾಧ್ಯತೆ ಇದೆ. 51 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಭತ್ತದ ನಾಟಿ ಮಾಡುವ ಸಾಧ್ಯತೆ ಇದೆ. 14,500 ಹೆಕ್ಟರ್ ಭೂಮಿಯಲ್ಲಿ ಸಜ್ಜೆ, 9900 ಹೆಕ್ಟರ್ ಭೂಮಿಯಲ್ಲಿ ತೊಗರಿ, 6000 ಹೆಕ್ಟರ್ ಭೂಮಿಯಲ್ಲಿ ಮೆಕ್ಕೆಜೋಳ, 5400 ಹೆಕ್ಟರ್ ಭೂಮಿಯಲ್ಲಿ ನವಣೆ ಮತ್ತು ಹತ್ತಿ, 2400 ಹೆಕ್ಟರ್ ಭೂಮಿಯಲ್ಲಿ ಸೂರ್ಯಕಾಂತಿ ಬೆಳೆ ಬೆಳೆಯುವ ಸಾಧ್ಯತೆ ಇದೆ.
ಮೂರು ತಾಲೂಕಿಗೆ ಮುಂಗಾರು ಹಂಗಾಮಿನ ಬಿತ್ತನೆಗೆ ಬೇಕಾಗುವ 37066 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರ ಬೇಡಿಕೆ ಇದೆ. ಪ್ರಸ್ತುತ 23580 ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆಯಾಗಿದೆ. 3317 ಮೆಟ್ರಿಕ್ ಟನ್ ರಸಗೊಬ್ಬರ ಈಗಾಗಲೇ ರೈತರಿಗೆ ವಿತರಣೆಯಾಗಿದೆ. 20263 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಮಾಡಲಾಗಿದೆ.
ಕೃತರ ರಸಗೊಬ್ಬರ ಸೃಷ್ಠಿಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ರಸಗೊಬ್ಬರ ಮಾರಾಟಗಾರರಿಗೆ ಈಗಾಗಲೇ ಅಗತ್ಯ ಮಾಹಿತಿ ನೀಡಲಾಗಿದೆ. ಕೃತಕ ರಸಗೊಬ್ಬರ ಸಮಸ್ಯೆ ಸೃಷ್ಠಿ ಅಥವಾ ಹೆಚ್ಚಿನ ದರಕ್ಕೆ ಮಾರಾಟ ಮಾಡುವವರು ಕಂಡು ಬಂದಲ್ಲಿ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ದಾಖಲೆ ಸಮೇತ ದೂರು ನೀಡುವಂತೆ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.