Advertisement

ಆಸೀಸ್‌ ಬ್ಯಾಟಿಂಗಿಗೆ ಬಿಸಿ ಮುಟ್ಟಿಸಿದ ಭಾರತ

06:00 AM Dec 08, 2018 | |

ಅಡಿಲೇಡ್‌: ಅಡಿಲೇಡ್‌ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದ ಮೊದಲ ಓವರಿನಲ್ಲೇ ಅಂತಿಮ ವಿಕೆಟ್‌ ಕಳೆದುಕೊಂಡು ಆಲೌಟ್‌ ಆದ ಭಾರತ, ಬಳಿಕ ಆಸ್ಟ್ರೇಲಿಯದ ಬ್ಯಾಟಿಂಗ್‌ ಸರದಿಗೆ ಬಿಸಿ ಮುಟ್ಟಿಸಿದೆ. 88 ಓವರ್‌ಗಳ ಆಟವಾಡಿರುವ ಕಾಂಗರೂ ಪಡೆ 7 ವಿಕೆಟಿಗೆ ಕೇವಲ 191 ರನ್‌ ಗಳಿಸಿದೆ. ಇದು ಆಸೀಸ್‌ ಟೆಸ್ಟ್‌ ಇತಿಹಾಸದ ಅತ್ಯಂತ ನಿಧಾನ ಗತಿಯ ಬ್ಯಾಟಿಂಗ್‌ಗಳಲ್ಲಿ ಒಂದೆನಿಸಿದೆ.

Advertisement

ಇಶಾಂತ್‌ ಶರ್ಮ ಪಂದ್ಯದ ಮೊದಲ ಓವರಿನ 3ನೇ ಎಸೆತದಲ್ಲೇ ಆರನ್‌ ಫಿಂಚ್‌ ಅವರನ್ನು ಶೂನ್ಯಕ್ಕೆ ಬೌಲ್ಡ್‌ ಮಾಡುವ ಮೂಲಕ ಭಾರತದ ಘಾತಕ ಬೌಲಿಂಗಿನ ಮುನ್ಸೂಚನೆಯೊಂದನ್ನು ರವಾನಿಸಿದರು. ಬಳಿಕ ಜಸ್‌ಪ್ರೀತ್‌ ಬುಮ್ರಾ, ಆರ್‌. ಅಶ್ವಿ‌ನ್‌ ಅಡಿಲೇಡ್‌ ಟ್ರ್ಯಾಕ್‌ನ ಸಂಪೂರ್ಣ ಲಾಭವೆತ್ತಿದರು. ಸ್ಪಿನ್ನರ್‌ ಅಶ್ವಿ‌ನ್‌ 3 ವಿಕೆಟ್‌ ಉರುಳಿಸಿ ಹೆಚ್ಚಿನ ಯಶಸ್ಸು ಸಾಧಿಸಿದರೆ, ಇಶಾಂತ್‌ ಮತ್ತು ಬುಮ್ರಾ ತಲಾ 2 ವಿಕೆಟ್‌ ಕಿತ್ತರು.

ಭೋಜನ ವಿರಾಮದ ವೇಳೆ 2ಕ್ಕೆ 57, ಟೀ ವೇಳೆ 4ಕ್ಕೆ 117 ರನ್‌ ಗಳಿಸಿದ್ದು ಆಸ್ಟ್ರೇಲಿಯದ ಆಮೆಗತಿಯ ಆಟಕ್ಕೆ ಸಾಕ್ಷಿ. ಮುನ್ನುಗ್ಗಿ ಬಾರಿಸಬಲ್ಲ ಡೇವಿಡ್‌ ವಾರ್ನರ್‌ ಮತ್ತು ಇನ್ನಿಂಗ್ಸಿಗೆ ಸ್ಥಿರತೆ ತರಬಲ್ಲ ಸ್ಟೀವ್‌ ಸ್ಮಿತ್‌ ಗೈರು ಆತಿಥೇಯರಿಗೆ ಭಾರೀ ಸಮಸ್ಯೆಯಾಗಿ ಕಾಡಿದ್ದು ಸುಳ್ಳಲ್ಲ. 

ಭಾರತಕ್ಕೆ ಹೆಡ್‌-ಏಕ್‌
ಭಾರತದ ಮೊತ್ತಕ್ಕಿಂತ ಆಸ್ಟ್ರೇಲಿಯ 59 ರನ್ನುಗಳ ಹಿಂದಿದೆ. 3ನೇ ದಿನ ಉಳಿದ 3 ವಿಕೆಟ್‌ಗಳನ್ನು ಬೇಗನೇ ಉರುಳಿಸಿ ಕನಿಷ್ಠ 30-40 ಲೀಡ್‌ ಲಭಿಸಿದರೂ ಅದು ಭಾರತಕ್ಕೆ ಮಹತ್ವದ್ದಾಗಲಿದೆ. ಕಾರಣ, ಕೊನೆಯ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ಕಠಿನವಾಗಿ ಪರಿಣಮಿಸುವ ಸಾಧ್ಯತೆ ಇದೆ. 

ಸದ್ಯ ಭಾರತಕ್ಕೆ ತಲೆನೋವಾಗಿ ಪರಿಣಮಿಸಿರುವವರು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಟ್ರ್ಯಾವಿಸ್‌ ಹೆಡ್‌. ಅವರು 61 ರನ್‌ ಮಾಡಿ ಕ್ರೀಸಿಗೆ ಅಂಟಿಕೊಂಡಿದ್ದಾರೆ (149 ಎಸೆತ, 6 ಬೌಂಡರಿ). 127ಕ್ಕೆ 6 ಎಂಬ ಶೋಚನೀಯ ಸ್ಥಿತಿಯಿಂದ ತಂಡವನ್ನು ಮೇಲೆತ್ತುವಲ್ಲಿ ದಿಟ್ಟ ಹೋರಾಟವೊಂದನ್ನು ನಡೆಸುತ್ತಿದ್ದಾರೆ. ಇದು ಅವರ 2ನೇ ಅರ್ಧ ಶತಕ. ಪ್ಯಾಟ್‌ ಕಮಿನ್ಸ್‌ (47 ಎಸೆತ, 10 ರನ್‌) ಬೆಂಬಲದಿಂದ 7ನೇ ವಿಕೆಟಿಗೆ 50 ರನ್‌ ಪೇರಿಸಿದ್ದು ಹೆಡ್‌ ಸಾಹಸಕ್ಕೆ ಸಾಕ್ಷಿ. ಬಳಿಕ ಹೆಡ್‌-ಸ್ಟಾರ್ಕ್‌ ಜೋಡಿ ಕೊನೆಯ 8 ಓವರ್‌ಗಳನ್ನು ಎಚ್ಚರಿಕೆಯಿಂದಲೇ ನಿಭಾಯಿಸಿದೆ. 

Advertisement

ರನ್ನಿಗಾಗಿ ಆಸೀಸ್‌ ಚಡಪಡಿಕೆ
ಫಿಂಚ್‌ ಅವರನ್ನು ಮೊದಲ ಓವರಿನಲ್ಲೇ ಪೆವಿಲಿಯನ್ನಿಗೆ ಓಡಿಸಿ ಆಸೀಸ್‌ಗೆ ಬಲವಾದ ಪಂಚ್‌ ಕೊಟ್ಟ ಭಾರತ, ಸ್ಕೋರ್‌ 45ಕ್ಕೆ ಏರಿದಾಗ 2ನೇ ವಿಕೆಟ್‌ ಉರುಳಿಸಿತು. ಪದಾರ್ಪಣ ಟೆಸ್ಟ್‌ ಆಡಲಿಳಿದಿದ್ದ ಮಾರ್ಕಸ್‌ ಹ್ಯಾರಿಸ್‌ 26 ರನ್‌ ಮಾಡಿ ಅಶ್ವಿ‌ನ್‌ ಮೋಡಿಗೆ ಸಿಲುಕಿದರು. ದ್ವಿತೀಯ ಅವಧಿಯಲ್ಲೂ ಆಸ್ಟ್ರೇಲಿಯ ರನ್ನಿಗಾಗಿ ಚಡಪಡಿಸಿದರೆ, ಭಾರತ ಮತ್ತೆರಡು ವಿಕೆಟ್‌ ಬೇಟೆಯಾಡಿ ಹಿಡಿತವನ್ನು ಬಿಗಿಗೊಳಿಸಿತು. ಶಾನ್‌ ಮಾರ್ಷ್‌ (2) ಮತ್ತು ಉಸ್ಮಾನ್‌ ಖ್ವಾಜಾ (28) ಅವರ ಬಹುಮೂಲ್ಯ ವಿಕೆಟ್‌ಗಳು ಅಶ್ವಿ‌ನ್‌ ಬಲೆಗೆ ಬಿದ್ದವು.

ಈ ಹಂತದಲ್ಲಿ ಹ್ಯಾಂಡ್ಸ್‌ಕಾಂಬ್‌ ಆಸೀಸ್‌ ಸರದಿಯನ್ನು ಮೇಲೆತ್ತುವ ಪ್ರಯತ್ನ ಮಾಡುತ್ತಿದ್ದರು. ಸ್ಕೋರ್‌ 120ಕ್ಕೆ ಏರಿದಾಗ ಬುಮ್ರಾ ಎಸೆತವೊಂದು ಬ್ಯಾಟಿಗೆ ಸವರಿ ಕೀಪರ್‌ ಪಂತ್‌ ಕೈಸೇರುವುದರೊಂದಿಗೆ ಹ್ಯಾಂಡ್ಸ್‌ಕಾಂಬ್‌ (93 ಎಸೆತಗಳಿಂದ 34 ರನ್‌, 5 ಬೌಂಡರಿ) ಪೆವಿಲಿಯನ್‌ ಸೇರಿಕೊಂಡರು. 7 ರನ್‌ ಆಗುವಷ್ಟರಲ್ಲಿ ನಾಯಕ ಟೀಮ್‌ ಪೇನ್‌ (5) ಅವರನ್ನು ಕಳೆದುಕೊಂಡ ನೋವು ಕಾಂಗರೂಗಳನ್ನು ಬಾಧಿಸಿತು. ಈ ವಿಕೆಟ್‌ ಇಶಾಂತ್‌ ಪಾಲಾಯಿತು. 50 ರನ್‌ ಬಳಿಕ ಕಮಿನ್ಸ್‌ ಅವರನ್ನು ಬುಮ್ರಾ ಎಲ್‌ಬಿ ಬಲೆಗೆ ಬೀಳಿಸಿದರು.

ಮೊದಲ ಎಸೆತಕ್ಕೇ ಶಮಿ ಔಟ್‌
ಭಾರತದ ಕೊನೆಯ ವಿಕೆಟ್‌ ಕೀಳಲು ಆಸ್ಟ್ರೇಲಿಯಕ್ಕೆ ಯಾವುದೇ ಕಷ್ಟವಾಗಲಿಲ್ಲ. ಹ್ಯಾಝಲ್‌ವುಡ್‌ ಎಸೆದ ದಿನದ ಮೊದಲ ಎಸೆತವನ್ನೇ ಕೀಪರ್‌ ಪೇನ್‌ಗೆ ಕ್ಯಾಚ್‌ ಕೊಟ್ಟ ಶಮಿ ಪೆವಿಲಿಯನ್‌ ಸೇರಿಕೊಂಡರು. ಭಾರತದ ಸ್ಕೋರ್‌ 250ಕ್ಕೇ ಕೊನೆಗೊಂಡಿತು.

ಸ್ಕೋರ್‌ಪಟ್ಟಿ
 ಭಾರತ ಪ್ರಥಮ ಇನ್ನಿಂಗ್ಸ್‌:    250
ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್‌
ಆರನ್‌ ಫಿಂಚ್‌    ಬಿ ಇಶಾಂತ್‌    0
ಮಾರ್ಕಸ್‌ ಹ್ಯಾರಿಸ್‌    ಸಿ ವಿಜಯ್‌ ಬಿ ಅಶ್ವಿ‌ನ್‌    26
ಉಸ್ಮಾನ್‌ ಖ್ವಾಜಾ    ಸಿ ಪಂತ್‌ ಬಿ ಅಶ್ವಿ‌ನ್‌    28
ಶಾನ್‌ ಮಾರ್ಷ್‌    ಬಿ ಅಶ್ವಿ‌ನ್‌    2
ಪೀಟರ್‌ ಹ್ಯಾಂಡ್ಸ್‌ಕಾಂಬ್‌    ಸಿ ಪಂತ್‌ ಬಿ ಬುಮ್ರಾ    34
ಟ್ರ್ಯಾವಿಸ್‌ ಹೆಡ್‌    ಬ್ಯಾಟಿಂಗ್‌    61
ಟಿಮ್‌ ಪೇನ್‌    ಸಿ ಪಂತ್‌ ಬಿ ಇಶಾಂತ್‌    5
ಪ್ಯಾಟ್‌ ಕಮಿನ್ಸ್‌    ಎಲ್‌ಬಿಡಬ್ಲ್ಯು ಬುಮ್ರಾ    10
ಮಿಚೆಲ್‌ ಸ್ಟಾರ್ಕ್‌    ಬ್ಯಾಟಿಂಗ್‌    8

ಇತರ        17
ಒಟ್ಟು  (7 ವಿಕೆಟಿಗೆ)        191
ವಿಕೆಟ್‌ ಪತನ: 1-0, 2-45, 3-59, 4-87, 5-120, 6-127, 7-177.

ಬೌಲಿಂಗ್‌:
ಇಶಾಂತ್‌ ಶರ್ಮ        15-6-31-2
ಜಸ್‌ಪ್ರೀತ್‌ ಬುಮ್ರಾ        20-9-34-2
ಮೊಹಮ್ಮದ್‌ ಶಮಿ        16-6-51-0
ಆರ್‌. ಅಶ್ವಿ‌ನ್‌        33-9-50-3
ಮುರಳಿ ವಿಜಯ್‌        4-1-10-0

ಎಕ್ಸ್‌ಟ್ರಾ ಇನ್ನಿಂಗ್ಸ್‌
ಶಾನ್‌ ಮಾರ್ಷ್‌ ಕಳೆದ 6 ಟೆಸ್ಟ್‌ ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 2, 4, 3, 0, 7 ಮತ್ತು 7 ರನ್ನಿಗೆ ಔಟಾದರು. ಇದು ಕಳೆದ 130 ವರ್ಷಗಳ ಆಸ್ಟ್ರೇಲಿಯದ ಟೆಸ್ಟ್‌ ಇತಿಹಾಸದಲ್ಲಿ ಟಾಪ್‌-5 ಬ್ಯಾಟ್ಸ್‌ಮನ್‌ ಓರ್ವ ಸತತ 6 ಇನ್ನಿಂಗ್ಸ್‌ಗಳಲ್ಲಿ ಒಂದಂಕೆಯ ಮೊತ್ತಕ್ಕೆ ಔಟಾದ ಮೊದಲ ನಿದರ್ಶನ. ಇದಕ್ಕೂ ಹಿಂದೆ 1888ರಲ್ಲಿ ಜಾರ್ಜ್‌ ಬಾನರ್‌ ಮತ್ತು ಅಲೆಕ್‌ ಬ್ಯಾನರ್‌ಮನ್‌ ಕ್ರಮವಾಗಿ 9 ಹಾಗೂ 7 ಇನ್ನಿಂಗ್ಸ್‌ಗಳಲ್ಲಿ ಈ ಕಂಟಕಕ್ಕೆ ಸಿಲುಕಿದ್ದರು.

ಭಾರತ 2ನೇ ದಿನದ ಮೊದಲ ಎಸೆತದಲ್ಲೇ ಅಂತಿಮ ವಿಕೆಟ್‌ ಕಳೆದುಕೊಂಡು ಆಲೌಟ್‌ ಆಯಿತು. ಹಿಂದಿನ ದಿನ 9 ವಿಕೆಟ್‌ ಉರುಳಿಸಿಕೊಂಡು, ಮರುದಿನ ಪ್ರಥಮ ಎಸೆತದಲ್ಲೇ ಆಲೌಟಾದ ಟೆಸ್ಟ್‌ ಇತಿಹಾಸದ 7ನೇ ನಿದರ್ಶನ ಇದಾಗಿದೆ. ಭಾರತ ಈ ಯಾದಿಯಲ್ಲಿ ಮೊದಲ ಸಲ ಕಾಣಿಸಿಕೊಂಡಿತು.

ಆಸ್ಟ್ರೇಲಿಯ ತವರಿನ ಸರಣಿಯಲ್ಲಿ 6ನೇ ಸಲ ರನ್‌ ಖಾತೆ ತೆರೆಯುವ ಮೊದಲೇ ವಿಕೆಟ್‌ ಉರುಳಿಸಿಕೊಂಡಿತು. 

ಆರನ್‌ ಫಿಂಚ್‌ ಕಳೆದೊಂದು ದಶಕದಲ್ಲಿ ತವರಿನ ಸರಣಿಯಲ್ಲಿ ಶೂನ್ಯಕ್ಕೆ ಔಟಾದ ಆಸ್ಟ್ರೇಲಿಯದ ಕೇವಲ 2ನೇ ಓಪನರ್‌. 2009-10ರ ವೆಸ್ಟ್‌ ಇಂಡೀಸ್‌ ವಿರುದ್ಧದ ಸರಣಿಯಲ್ಲಿ ಶೇನ್‌ ವಾಟ್ಸನ್‌ ಕೊನೆಯ ಸಲ ಈ ಸಂಕಟಕ್ಕೆ ಸಿಲುಕಿದ್ದರು.

2006ರ ಬಳಿಕ ಆಸೀಸ್‌ ಆರಂಭಕಾರ ನೋರ್ವ ತವರಿನ ಸರಣಿಯಲ್ಲಿ ಮೊದಲ ಓವರಿನಲ್ಲೇ ಕ್ಲೀನ್‌ಬೌಲ್ಡ್‌ ಆದರು. ಅಂದಿನ ಆ್ಯಶಸ್‌ ಸರಣಿಯ ಪರ್ತ್‌ ಟೆಸ್ಟ್‌ನಲ್ಲಿ ಈಗಿನ ಕೋಚ್‌ ಜಸ್ಟಿನ್‌ ಲ್ಯಾಂಗರ್‌ ಪಂದ್ಯದ ಮೊದಲ ಎಸೆತದಲ್ಲೇ ಬೌಲ್ಡ್‌ ಆಗಿದ್ದರು.

ಇಶಾಂತ್‌ ಶರ್ಮ ಆಸ್ಟ್ರೇಲಿಯ ವಿರುದ್ಧ 50 ವಿಕೆಟ್‌ ಕಿತ್ತ ಭಾರತದ 9ನೇ ಬೌಲರ್‌, 3ನೇ ಪೇಸ್‌ ಬೌಲರ್‌ ಎನಿಸಿದರು. ಉಳಿದಿಬ್ಬರೆಂದರೆ ಕಪಿಲ್‌ದೇವ್‌ ಮತ್ತು ಜಹೀರ್‌ ಖಾನ್‌.

ಆಸ್ಟ್ರೇಲಿಯ ದಿನದಾಟದಲ್ಲಿ ಕೇವಲ 197 ರನ್‌ ಗಳಿಸಿತು. ಇದು ಈ ಶತಮಾನದಲ್ಲೇ ಆಸ್ಟ್ರೇಲಿಯದ ನಿಧಾನ ಗತಿಯ ಬ್ಯಾಟಿಂಗ್‌ ಆಗಿದೆ.

ಜ ಜಸ್‌ಪ್ರೀತ್‌ ಬುಮ್ರಾ ಈ ಪಂದ್ಯದಲ್ಲೇ ಅತೀ ವೇಗದ ಎಸೆತವಿಕ್ಕಿದರು (153.26 ಕಿ.ಮೀ.).

Advertisement

Udayavani is now on Telegram. Click here to join our channel and stay updated with the latest news.

Next