ಅಡಿಲೇಡ್: ಅಡಿಲೇಡ್‌ನ ಹಗಲು-ರಾತ್ರಿ ಆ್ಯಶಸ್ ಟೆಸ್ಟ್ ಪಂದ್ಯ ತೀವ್ರ ಕುತೂಹಲ ಹಂತಕ್ಕೆ ತಲುಪಿದೆ. ಇಂಗ್ಲೆಂಡ್ ಗೆಲುವಿಗೆ 354 ರನ್ ಗುರಿ ನಿಗದಿಯಾಗಿದ್ದು, 4ನೇ ದಿನದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 176 ರನ್ ಮಾಡಿದೆ.
ಬುಧವಾರ ಪಂದ್ಯದ ಅಂತಿಮ ದಿನವಾಗಿದ್ದು, ಉಳಿದ 6 ವಿಕೆಟ್‌ಗಳಿಂದ 178 ರನ್ ಗಳಿಸಬೇಕಾದ ಸವಾಲು ಆಂಗ್ಲರ ಮುಂದಿದೆ. ಜೋ ರೂಟ್ 67 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದು, ಇಂಗ್ಲೆಂಡ್ ಪಾಲಿನ ಭರವಸೆಯಾಗಿ ಉಳಿದಿದ್ದಾರೆ. ಇವರೊಂದಿಗೆ 5 ರನ್ ಮಾಡಿರುವ ಕ್ರಿಸ್ ವೋಕ್ಸ್ ಆಡುತ್ತಿದ್ದಾರೆ. ಮೊಯಿನ್ ಅಲಿ, ಜಾನಿ ಬೇರ್‌ಸ್ಟೊ, ಸ್ಟುವರ್ಟ್ ಬ್ರಾಡ್ ಮೇಲೆ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ಪಂದ್ಯ ಸ್ಪಷ್ಟ ಫಲಿತಾಂಶ ಕಾಣುವುದು ನಿಶ್ಚಿತವಾಗಿದ್ದು, ಇತ್ತಂಡಗಳಿಗೂ 50-50 ಅವಕಾಶ ಇದೆ ಎನ್ನಲಡ್ಡಿಯಿಲ್ಲ.
ಇಂಗ್ಲೆಂಡಿನ ಗುರಿಯನ್ನು 354ಕ್ಕೆ ನಿಲ್ಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದವರು ವೇಗಿಗಳಾದ ಜೇಮ್ಸ್ ಆ್ಯಂಡರ್ಸನ್ ಮತ್ತು ಕ್ರಿಸ್ ವೋಕ್ಸ್. ಆ್ಯಂಡರ್ಸನ್ 43ಕ್ಕೆ 5 ಹಾಗೂ ವೋಕ್ಸ್ 36ಕ್ಕೆ 4 ವಿಕೆಟ್ ಹಾರಿಸಿ ಆಸ್ಟ್ರೇಲಿಯದ ದ್ವಿತೀಯ ಸರದಿಯನ್ನು ಕೇವಲ 138 ರನ್ನಿಗೆ ಸೀಮಿತಗೊಳಿಸಿದರು. ಆಸೀಸ್ 4ಕ್ಕೆ 53 ರನ್ ಮಾಡಿದಲ್ಲಿಂದ ಮಂಗಳವಾರದ ಆಟವನ್ನು ಮುಂದುವರಿಸಿತ್ತು. ಆ್ಯಂಡ ರ್ಸನ್ ಆಸ್ಟ್ರೇಲಿಯದಲ್ಲಿ ಆಡಲಾದ ಆ್ಯಶಸ್ ಟೆಸ್ಟ್‌ನಲ್ಲಿ 5 ವಿಕೆಟ್ ಉರುಳಿಸಿದ್ದು ಇದೇ ಮೊದಲು. ಆಸ್ಟ್ರೇಲಿಯದ ದ್ವಿತೀಯ ಸರದಿ ಯಲ್ಲಿ ತಲಾ 20 ರನ್ ಮಾಡಿದ ಖ್ವಾಜಾ ಮತ್ತು ಸ್ಟಾರ್ಕ್ ಅವರದೇ ಹೆಚ್ಚಿನ ಗಳಿಕೆ.
ಈ ಕುಸಿತವನ್ನು ಕಂಡಾಗ, “ಅಡಿಲೇಡ್ ಓವಲ್’ ವೇಗಿಗಳಿಗೆ ಇಷ್ಟೊಂದು ನೆರವು ನೀಡುತ್ತಿದ್ದುದನ್ನು ಗಮನಿಸಿದರೆ ಅಂತಿಮ ದಿನ ಆಸೀಸ್ ವೇಗಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಇಂಗ್ಲೆಂಡಿನ ದ್ವಿತೀಯ ಸರದಿಯ 4 ವಿಕೆಟ್‌ಗಳಲ್ಲಿ ಮೂರನ್ನು ವೇಗಿಗಳೇ ಹಾರಿಸಿದ್ದಾರೆ. ಅಲ್ಲದೇ ಕಾಂಗರೂ ನೆಲದಲ್ಲಿ ಈವರೆಗೆ ಇಂಗ್ಲೆಂಡ್ 350 ಪ್ಲಸ್ ರನ್ ಬೆನ್ನಟ್ಟಿ ಗೆದ್ದ ಉದಾಹರಣೆ ಇಲ್ಲ. 1928ರ ಮೆಲ್ಬರ್ನ್ ಟೆಸ್ಟ್‌ನಲ್ಲಿ 332 ರನ್ ಪೇರಿಸಿ ಗೆದ್ದದ್ದು ದಾಖಲೆ.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-8ಕ್ಕೆ 442 ಡಿಕ್ಲೇರ್ ಮತ್ತು 138 (ಖ್ವಾಜಾ 20, ಸ್ಟಾರ್ಕ್ 20, ಮಾರ್ಷ್ 19, ಆ್ಯಂಡರ್ಸನ್ 43ಕ್ಕೆ 5, ವೋಕ್ಸ್ 36ಕ್ಕೆ 4). ಇಂಗ್ಲೆಂಡ್-227 ಮತ್ತು 4 ವಿಕೆಟಿಗೆ 176 (ರೂಟ್ ಬ್ಯಾಟಿಂಗ್ 67, ಸ್ಟೋನ್‌ಮ್ಯಾನ್ 36, ಮಾಲನ್ 29, ಸ್ಟಾರ್ಕ್ 65ಕ್ಕೆ 2, ಕಮಿನ್ಸ್ 29ಕ್ಕೆ 1, ಲಿಯೋನ್ 37ಕ್ಕೆ 1).