ತಲೆಯಲ್ಲಿ ಜುಟ್ಟು ಇರುವುದು ಇಲ್ಲಿನ ಹನುಮನ ವಿಶೇಷ. ಅಲ್ಲದೇ ಎರಡು ಕಾಲಿನ ತಳಬಾಗದಲ್ಲಿ ಒಂದು ಸಣ್ಣ ಮಂಗನ ರೂಪವಿದೆ. ಶನಿವಾರ ಹೊರತು ಪಡಿಸಿ ಉಳಿದ ದಿನಗಳಲ್ಲಿ ಸೇರಕ್ಕಿಯ ನೈವೇದ್ಯ ನಡೆಯುತ್ತದೆ. ಪ್ರತಿ ಶನಿವಾರ ಮುಖ್ಯಪ್ರಾಣನಿಗೆ 108 ನಾಮಗಳ ಮೂಲಕ ಅಭಿಷೇಕವಾಗುತ್ತದೆ.
ಮಂಗಳೂರಿನ ಗುರುಪುರದ ಸಮೀಪ ಪೊಳಲಿ ಎಂಬಲ್ಲಿ ಪ್ರಸಿದ್ಧವಾದ ಶ್ರೀರಾಜರಾಜೇಶ್ವರಿ ದೇವಾಲಯವಿದೆ. ಈ ಸುಂದರ ದೇಗುಲದ ಪೂರ್ವ ದಿಕ್ಕಿನಲ್ಲಿ ಫಲ್ಗುಣಿ ನದಿ ಹರಿಯುತ್ತದೆ. ಈ ನದೀ ತೀರದಲ್ಲಿರುವ ಅಡೂxರಿನ ಕೋಡಿಬೆಟ್ಟು ಎಂಬ ಅಗ್ರಹಾರದಲ್ಲಿ ಮಾತನಾಡುವ ಈ ಹನುಮನಿದ್ದಾನೆ. ಶ್ರೀ ವ್ಯಾಸರಾಜರು ಪ್ರತಿಷ್ಠಾಪಿಸಿದ ಹನುಮದೇಗುಲಗಳಲ್ಲೇ ಬಹಳ ಪ್ರಭಾವ ಶಾಲಿಯಾದ ಹನುಮ ಇದು ಎಂಬ ಪ್ರತೀತಿ ಇದೆ.
ಈ ದೇವಸ್ಥಾನಕ್ಕೆ ಸುಮಾರು 550 ವರ್ಷಗಳ ಇತಿಹಾಸವಿದೆ. ವ್ಯಾಸರಾಜರು ದಕ್ಷಿಣಕನ್ನಡ ಜಿಲ್ಲೆಗೆ ಬಂದಾಗ ಅಡೂxರಿನಲ್ಲಿ ಉಳಿದುಕೊಂಡಿದ್ದ ಸಂದರ್ಭದಲ್ಲಿ ಈ ಹನುಮನನ್ನು ಪ್ರತಿಷ್ಟಾಪಿಸಿದರಂತೆ. ಆಮೇಲೆ ಮೂಡಬಿದಿರೆಯ ಚೌಟ ಅರಸರಿಂದ ಪೋಷಿಸಲ್ಪಟ್ಟು, ನಂತರ ಬ್ರಾಹ್ಮಣ ಕುಟುಂಬವೊಂದು ಈ ದೇವಸ್ಥಾನದ ಉಸ್ತುವಾರಿ ವಹಿಸಿಕೊಂಡಿತ್ತು. ಕೊನೆಗೆ ಅವರ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಕಾರಣ ಪೂಜಾ ವಿಧಿಗಳು ನಿಂತು ಹೋಗಿ, ಒಂದು ಕೊಡ ನೀರಿನಿಂದಲೇ ಪೂಜೆ ಮಾಡುವಂಥ ಪರಿಸ್ಥಿತಿ ಬಂದಿತಂತೆ.
ಈ ಮುಖ್ಯ ಪ್ರಾಣ ದೇವರ ವಿಗ್ರಹ 1983ರವರೆಗೂ ಭೂಗತವಾಗಿಯೇ ಇತ್ತು. ದಿ.ವೆಂಕಟರಾಯರ ಎರಡನೆ ಮಗ ಹಾಗೂ ಅದೇ ಗ್ರಾಮದ ಪಟೇಲರಾಗಿದ್ದ ಬಾಲಕೃಷ್ಣರು ಗ್ರಾಮಸ್ಥರನ್ನೆಲ್ಲಾ ಒಟ್ಟುಗೂಡಿಸಿ ಮುಖ್ಯಪ್ರಾಣ ದೇವರನ್ನು ಹುಡುಕಲು ಶುರು ಮಾಡಿದರು. ಈ ಜಾಗದಲ್ಲಿ ಹಿಂದೆ ದೇಗುಲ ಇದ್ದಿರಬಹುದೇನೊ ಎಂಬಂತೆ ಅಲ್ಲೊಂದು ಮಣ್ಣಿನ ರಾಶಿ, ದಿಡುª ಹಳೆ ಮರದ ರೀಪು, ಹಳೆ ಕಾಲದ ಹೆಂಚುಗಳ ತುಂಡಿನ ಕುರುಹು ಕಂಡು ಬಂದಿತು. ಹುತ್ತದ ರೀತಿಯಲ್ಲಿದ್ದ ಬಿಲದೊಳಗೆ ಮುಖ್ಯಪ್ರಾಣನನ್ನು ಮನಸಾರೆ ಪ್ರಾರ್ಥಿಸಿ ಕೈಹಾಕಿದಾಗ ಅವರಿಗೆ ಸಿಕ್ಕಿದ್ದು ಹುನುಮನ ಜುಟ್ಟು. ನಂತರ ಮಣ್ಣನ್ನು ಅಗೆದಾಗ ಆರು ಅಡಿ ಆಳದಲ್ಲಿ ಸುಂದರವಾದ ಎರಡೂವರೆ ಅಡಿ ಎತ್ತರದ ಕಪ್ಪು ಶಿಲೆಯಿಂದ ನಿರ್ಮಿತವಾದ ಹನುಮನ ವಿಗ್ರಹ ದೊರಕಿತು.
ಅಂದಿನಿಂದಲೇ ಮೂರ್ತಿಗೆ ಅಲಯ ನಿರ್ಮಿಸಬೇಕೆಂಬ ಸಂಕಲ್ಪ ಮಾಡಿದ್ದರಿಂದ, ಉಡುಪಿಯ ಅಂಬಲಪಾಡಿಯ ಶ್ರೀಜನಾರ್ಧನ ಮಹಾಕಾಳಿಯ ದೇವಸ್ಥಾನದ ಮೊಕ್ತೇಸರರಾದ ದಿ. ಅಣ್ಣಾಜಿ ಬಲ್ಲಾಳರ ದಿವ್ಯ ಹಸ್ತದಿಂದ ಗುಡಿಯು ಶಿಲಾನ್ಯಾಸಗೊಂಡಿತು. 1987ರಿಂದ ಈ ತನಕ ದಿನನಿತ್ಯ ಬೆಳಗ್ಗೆ ಒಂದು ಪೂಜೆಯೊಂದಿಗೆ ನಡೆದುಕೊಂಡು ಬಂದಿದೆ.
ತಲೆಯಲ್ಲಿ ಜುಟ್ಟು ಇರುವುದು ಇಲ್ಲಿನ ಹನುಮನ ವಿಶೇಷ. ಅಲ್ಲದೇ ಎರಡು ಕಾಲಿನ ತಳಬಾಗದಲ್ಲಿ ಒಂದು ಸಣ್ಣ ಮಂಗನ ರೂಪವಿದೆ. ಹನುಮನ ಅಭಯಹಸ್ತ ಭಕ್ತರ ಬೇಡಿಕೆಗಳನ್ನು ಈಡೇರಿಸುವ ಸಂಕೇತ.
ಶನಿವಾರ ಹೊರತು ಪಡಿಸಿ ಉಳಿದ ದಿನಗಳಲ್ಲಿ ಸೇರಕ್ಕಿಯ ನೈವೇದ್ಯ ನಡೆಯುತ್ತದೆ. ಪ್ರತಿ ಶನಿವಾರ ಮುಖ್ಯಪ್ರಾಣನಿಗೆ 108 ನಾಮಗಳ ಮೂಲಕ ಅಭಿಷೇಕವಾಗುತ್ತದೆ. ಆಗ ಇಲ್ಲಿಗೆ ಬಂದು ಮುಖ್ಯಪ್ರಾಣನ ಮುಂದೆ ಕುಳಿತು ತಮ್ಮ ಕಷ್ಟಗಳನ್ನು ಹೇಳಿಕೊಳ್ಳುವ ಮೂಲಕ ಬೇಡಿದರೆ ಅವರ ಸನಿಹ ಬಂದು ಸಾಂತ್ವನ ಹೇಳಿ ಭಕ್ತಾದಿಗಳ ಮನಃಶಾಂತಿ, ಇಷ್ಟಾರ್ಥ ಸಿದ್ಧಿ ಹಾಗೂ ದೈಹಿಕ ರೋಗ ನಿವಾರಣೆ ಮಾಡುತ್ತಾನೆ ಎಂಬ ನಂಬಿಕೆ ಇದೆ. ಹೀಗಾಗಿ ಮಾತನಾಡುವ ಮುಖ್ಯಪ್ರಾಣ ಎಂದೇ ಇಲ್ಲಿನ ಹನುಮ ಪ್ರಸಿದ್ಧಿ ಪಡೆದಿದ್ದಾನೆ. ಇಲ್ಲಿಗೆ ಸಾವಿರಾರು ಭಕ್ತರು ಬಂದು ತಮ್ಮ ಕಷ್ಟ ಪರಿಹರಿಸಿಕೊಂಡಿದ್ದಾರೆ.
ಶ್ರೀ ಮುಖ್ಯಪ್ರಾಣನ ಸನ್ನಿಧಿಯಲ್ಲಿ ಅಮ್ಮ ಶ್ರೀ ಧೂಮಾವತಿ ದೈವ ಹಾಗೂ ಪರಿವಾರ ಬಂಟ ದೈವಗಳನ್ನು ಕೂಡ ಸ್ಥಾಪಿಸಿ ಪೂಜಿಸುತ್ತಾ ಬಂದಿದ್ದಾರೆ.
ಪ್ರಕಾಶ್ ಕೆ.ನಾಡಿಗ್ ತುಮಕೂರು