Advertisement

ನಮ್ಮೊಳಗಿನ ಮನಃಸಾಕ್ಷಿಯ ವಿಳಾಸ

10:02 PM Sep 20, 2019 | mahesh |

– ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು, ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನ, ಶಿರಸಿ

Advertisement

ಮನಸ್ಸಿನ ಅಂತಃಸಾಕ್ಷಿಗೆ ಅನುಸಾರವಾಗಿ ನಡೆಯುವವನು ಎಂದೂ ಪಾಪಿಯಾಗಲಾರ. ಮನಃಸಾಕ್ಷಿ ಎಂದೂ ತಪ್ಪು ಮಾರ್ಗದರ್ಶನ ಮಾಡುವುದಿಲ್ಲ. ಆದರೆ, ಮನಃಸಾಕ್ಷಿ ಎಂದರೇನು ಎಂಬುದನ್ನು ಸರಿಯಾಗಿ ಅರಿತುಕೊಳ್ಳುವುದು ಅಗತ್ಯ. ತನ್ನ ಮನಸ್ಸಿಗೆ ಬಂದ ಇಚ್ಛೆ- ದ್ವೇಷಗಳನ್ನು ಮನಃಸಾಕ್ಷಿಯೆಂದುಕೊಳ್ಳಬಾರದು. ಮನಸ್ಸಿಗಿಂತಲೂ ಮೇಲಿದೆ, ಮನಸ್ಸಿಗಿಂತ ಬೇರೆಯಾಗಿದೆ ಮನಃಸಾಕ್ಷಿ.

ಸಾಕ್ಷಿ ಎಂದರೇನು, ಎಂಬುದು ಎಲ್ಲರಿಗೂ ಗೊತ್ತು. ಯಾವನು ಜಗಳದಲ್ಲಿ ಭಾಗವಹಿಸದೇ ನೋಡುತ್ತಾನೋ ಅವನೇ ಸಾಕ್ಷಿ. ತಟಸ್ಥವಾಗಿದ್ದುಕೊಂಡು ನೋಡುವವ ಸಾಕ್ಷಿ. ತಪ್ಪು ಕೆಲಸಗಳಲ್ಲಿ ಭಾಗವಹಿಸದೇ ನೋಡುವವನು ಸಾಕ್ಷಿ.

ಮನಸ್ಸಿನಲ್ಲಿ ಇಂಥ ಜಗಳಗಳಿರುತ್ತವೆ. ತಪ್ಪು ಕೆಲಸಗಳೂ ಇರುತ್ತವೆ. ಇವುಗಳನ್ನು ತಟಸ್ಥವಾಗಿದ್ದುಕೊಂಡು ನೋಡುವವ ತಾನು ಮನಃಸಾಕ್ಷಿ. ರಾಗ - ದ್ವೇಷಾದಿ ದೋಷಗಳಿಂದ ಅಶುದ್ಧಗೊಂಡ ಮನಸ್ಸಿನಿಂದ ಬಹುಶಃ ಯಾವ ಪ್ರವೃತ್ತಿಯಲಿ, ಯಾವ ವಿಷಯವೂ ಪವಿತ್ರಗೊಳ್ಳಲು ಸಾಧ್ಯವಿಲ್ಲ. ಶುದ್ಧ ಮನಸ್ಸಿನ ವಿವೇಚನೆಯಿಂದ ಇದು ಸಾಧ್ಯವಿದೆ. ಮನಸ್ಸಿನ ತಪ್ಪು ಒಪ್ಪುಗಳನ್ನು ಒಪ್ಪಿಕೊಳ್ಳದೇ, ನಿರಾಕರಿಸದೇ, ತಟಸ್ಥವಾಗಿದ್ದುಕೊಂಡು ಮನಸ್ಸನ್ನೇ ನೋಡಿಬಿಟ್ಟರೆ, ಮನಸ್ಸಿನ ಪ್ರವೃತ್ತಿಗಳಿಗೆ ಯಾವ ಬೆಂಬಲವೂ ಸಿಗದಂತಾಗಿ ಅದು ಸುಮ್ಮನಾಗಿಬಿಡುತ್ತದೆ. ಮನಸ್ಸು ಯದ್ವಾತದ್ವಾ ಪ್ರವೃತ್ತಿಸಲು ನಮ್ಮ ಬೆಂಬಲವೂ ಕಾರಣ. ಆ ಬೆಂಬಲವನ್ನು ಕೊಡದೇ ಮನಸ್ಸನ್ನು ನೋಡುವುದೇ ಮನಃಸಾಕ್ಷಿ.

ಮನಸ್ಸನ್ನು ನೇರವಾಗಿ ವಿರೋಧಿಸ ಹೊರಟರೆ, ಅದು ಮಕ್ಕಳಂತೆ ಹಠಕ್ಕೆ ಇಳಿಯಬಹುದು. ಮಕ್ಕಳು ಹುಡುಗಾಟ ಮಾಡುತ್ತಿ¨ªಾಗ, ಅದನ್ನು ಹಿರಿಯರು ನೋಡಿ ಸಂತೋಷ ಪಡುತ್ತಿದ್ದರೆ, ಆ ಹುಡುಗಾಟ ಜಾಸ್ತಿಯಾಗುತ್ತದೆ. ಶಾಸ್ತ್ರದಲ್ಲಿ ಮನಸ್ಸನ್ನು ಮಕ್ಕಳಿಗೆ ಹೋಲಿಸಿದ್ದಾರೆ.

Advertisement

ಅಂತೂ ಸಾಕ್ಷಿ ಭಾವದಿಂದ ಮನಸ್ಸನ್ನು ನೋಡಿದರೆ, ಅದರ ದುಷ್ಟ ಪ್ರವೃತ್ತಿಗಳು ಕಡಿಮೆ ಆಗುತ್ತವೆ. ಮನಸ್ಸು ಶುದ್ಧವಾಗುತ್ತದೆ. ಮನಸ್ಸನ್ನು ಸಾಕ್ಷೀಭಾವದಲ್ಲಿ ಇದ್ದು ನೋಡುವಾಗ, ನೋಡುತ್ತಿರುವ ತನಗೆ ರಾಗ- ದ್ವೇಷಗಳಿರಬಾರದು. ಆಗ್ರಹಗಳಿರಬಾರದು. ಮನಸ್ಸಿನಲ್ಲಿ ಗಡಿಬಿಡಿ ಇದ್ದರೆ, ಮನಃಸಾಕ್ಷಿ ತೋರಿಕೊಳ್ಳಬಾರದು. ಪ್ರತಿನಿತ್ಯ ಸ್ವಲ್ಪ ಹೊತ್ತು ದೇವರ ಧ್ಯಾನದಲ್ಲಿದ್ದವನು, ತನ್ನ ಉಸಿರಾಟವನ್ನೇ ಅದರಲ್ಲಿ ಯಾವುದೇ ಕೃತಕ ಬದಲಾವಣೆ ತರದೇ ನೋಡುವುದನ್ನು ಅಭ್ಯಾಸ ಮಾಡಿಕೊಂಡರೆ, ಸುಲಭದಲ್ಲಿ ಸಾಕ್ಷಿಭಾವ ಪಡೆಯಬಲ್ಲ.

“ಸಾಕ್ಷಿ’ ಎಂದರೆ ನಮ್ಮ ಆಲೋಚನೆ, ನಡೆ- ನುಡಿಗಳ ಬಗ್ಗೆ ಇರುವ ಎಚ್ಚರಿಕೆ. ಆ ಎಚ್ಚರಿಕೆಯಿಂದ ನಮ್ಮೆಲ್ಲ ಪ್ರವೃತ್ತಿಗಳೂ ಕೂಡಿದ್ದರೆ, ಅವು ಶುದ್ಧವಾಗಿರುತ್ತವೆ. ಪಶ್ಚಾತ್ತಾಪ ರಹಿತ ಸ್ವಸ್ಥ ಸುಖೀ ಜೀವನಕ್ಕೆ ನಾಂದಿಯಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next