Advertisement

ರೂಪಾಂತರ ಕೊರೊನಾ ಹಿನ್ನೆಲೆ : ನಾಪತ್ತೆ ಆಗಿದ್ದವರ ವಿಳಾಸ ಕೊನೆಗೂ ಪತ್ತೆ!

11:32 AM Dec 31, 2020 | Team Udayavani |

ಬೆಂಗಳೂರು: ನಗರಕ್ಕೆ ಬ್ರಿಟನ್‌ನಿಂದ ಬಂದು ನಾಪತ್ತೆಯಾಗಿದ್ದ 202 ಜನರ ವಿಳಾಸ ಕೊನೆಗೂ ಪತ್ತೆಯಾಗಿದ್ದು, ಇವರ ಗಂಟಲು ದ್ರವ ಮಾದರಿ ಸಂಗ್ರಹಕ್ಕೆ ಪಾಲಿಕೆ ಮುಂದಾಗಿದೆ.

Advertisement

ನಗರದಲ್ಲಿ 3 ಜನರಿಗೆ ರೂಪಾಂತರ ಕೊರೊನಾ ಸೋಂಕು ಇರುವುದು ಮಂಗಳವಾರ ದೃಢಪಟ್ಟ ಬೆನ್ನಲ್ಲೇ ನಾಪತ್ತೆ ಆಗಿರುವವರಲ್ಲಿಯೂ ರೂಪಾಂತರ ಕೊರೊನಾ ಸೋಂಕು ದೃಢಪಡುವ ಬಗ್ಗೆ ಆತಂಕ ಸೃಷ್ಟಿಯಾಗಿತ್ತು.ಹೀಗಾಗಿ, ನಾಪತ್ತೆ ಆಗಿರುವವರ ಪತ್ತೆಗೆ ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ನಾಪತ್ತೆ ಆಗಿರುವವರ ವಿಳಾಸವನ್ನು ಪಾಲಿಕೆಗೆ ನೀಡಲಾಗಿದೆ.

ಸಂಬಂಧ ಪ್ರತಿಕ್ರಿಯಿಸಿದ ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ ಡಾ.ವಿಜೇಂದ್ರ, ಡಿ.1ರಿಂದ 21ವರೆಗೆ ಬ್ರಿಟನ್‌ನಿಂದ ಒಟ್ಟು 1,456
ಜನ ನಗರಕ್ಕೆ ಬಂದಿದ್ದು, ಇವರಲ್ಲಿ 1,290 ಜನರನ್ನು ಈಗಾಗಲೇ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದೆ. ಉದ್ದೇಶ ಪೂರ್ವಕವಾಗಿ
ನಾಪತ್ತೆ ಆಗಿದ್ದರೆ ಅಥವಾ ಇಲ್ಲವೇ ಎನ್ನುವುದು ಮುಂದೆ ತನಿಖೆಯಿಂದ ತಿಳಿಯಲಿದೆ ಎಂದು ಹೇಳಿದರು.

ಬ್ರಿಟನ್‌ನಿಂದ ವಾಪಸ್‌ ಬಂದವರ ಪೈಕಿ 17 ಮಂದಿಗೆ ಸೋಂಕು ದೃಢಪಟ್ಟಿತ್ತು. ಸೋಂಕು ದೃಢ ಪಟ್ಟವರ ಸಂಪರ್ಕಿತರ ಪತ್ತೆ ಹಾಗೂ ಪರೀಕ್ಷಾ ಕಾರ್ಯ ಮುಂದುವರಿದಿದೆ. ಇದೇ ವೇಳೆ ಕ್ವಾರಂಟೈನ್‌ಗೆ ಒಳಪಡಿಸುವುದು ಮತ್ತು ನಿಗಾವಹಿಸಲು ವಲಯ ಆರೋಗ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಇದನ್ನೂ ಓದಿ:‘ಪಾಕಿಸ್ಥಾನ್ ಜಿಂದಾಬಾದ್’ ಘೋಷಣೆ ಕೂಗಿದ ವಿಚಾರ: ಆರು ಮಂದಿ ವಶಕ್ಕೆ ಪಡೆದು ವಿಚಾರಣೆ

Advertisement

ರೂಪಾಂತರ ಪ್ರಕರಣ ಇಲ್ಲ: ನಗರದಲ್ಲಿ ತಾಯಿ- ಮಗು ಹಾಗೂ ವ್ಯಕ್ತಿಯೊಬ್ಬರಿಗೆ ಮಂಗಳವಾರ ರೂಪಾಂತರ ಕೊರೊನಾ ಸೋಂಕು ದೃಢಪಟ್ಟಿದ್ದು ಬಿಟ್ಟರೆ ಬುಧವಾರ ಹೊಸ ಪ್ರಕರಣ ಪತ್ತೆಯಾಗಿಲ್ಲ. ಕೊರೊನಾ ಸೋಂಕು ದೃಢಪಟ್ಟ ವೇಳೆ ತೆಗೆದುಕೊಳ್ಳುವ ಮುಂಜಾಗ್ರತಾ ಕ್ರಮಗಳನ್ನೇ ಈಗಲೂ ತೆಗೆದುಕೊಳ್ಳುತ್ತಿದ್ದೇವೆ ಎಂದರು.

ಸದ್ಯದ ಮಟ್ಟಿಗೆ ಆತಂಕ ದೂರ
ಬೆಂಗಳೂರು: ಬ್ರಿಟನ್‌ನಿಂದ ಬಂದು ರೂಪಾಂತರ ಕೊರೊನಾ ಸೋಂಕು ದೃಢಪಟ್ಟಿದ್ದವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಒಟ್ಟು 38 ಜನರ ಕೊರೊನಾ ಸೋಂಕು ಪರೀಕ್ಷಾ ವರದಿ ನೆಗೆಟಿವ್‌ ಬಂದಿದ್ದು, ಸದ್ಯದ ಮಟ್ಟಿಗೆ ಆತಂಕ ದೂರವಾಗಿದೆ.
ಇದೀಗ ಇವರ ದ್ವಿತೀಯ ಸಂಪರ್ಕದಲ್ಲಿದ್ದ 62ಕ್ಕೂ ಹೆಚ್ಚು ಜನರ ಪರೀಕ್ಷೆ ಪ್ರಾರಂಭವಾಗಿದೆ. ಬ್ರಿಟನ್‌ನಿಂದ
ಬೆಂಗಳೂರಿಗೆ ಡಿ.19ಕ್ಕೆ ಬಂದಿರುವ ಮೂವರಲ್ಲಿ ಮಂಗಳವಾರ ರೂಪಾಂತರ ಕೊರೊನಾ(ಬಿ.1.1.7 ಕೋವಿಡ್‌)
ದೃಢಪಟ್ಟಿತ್ತು. ಇವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ ಒಟ್ಟು 38 ಜನರನ್ನು ಮಂಗಳವಾರ ಸಂಜೆ
ವೇಳೆಗೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರ ವರದಿ ಬುಧವಾರ ಬಂದಿದ್ದು, ಎಲ್ಲರ ವರದಿ ನೆಗೆಟಿವ್‌ ಬಂದಿದೆ.

ಈ ಸಂಬಂಧ ಪ್ರತಿಕ್ರಿಯಿಸಿದ ಬೊಮ್ಮನಹಳ್ಳಿ ಜಂಟಿ ಆಯುಕ್ತ ರಾಮಕೃಷ್ಣ ಅವರು, ಬೊಮ್ಮನಹಳ್ಳಿ ವಲಯದ
ವಸಂತಪುರದ ಸಿರಿ ಎಂಬೆಸಿ ಎಂಬ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ತಾಯಿ ಮತ್ತು ಮಗುವಿಗೆ ರೂಪಾಂತರ ಕೊರೊನಾ ಸೋಂಕು ದೃಢಪಟ್ಟಿತ್ತು. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ 11 ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 22 ಜನರ ಕೊರೊನಾ ಸೋಂಕು ಪರೀಕ್ಷಾ ವರದಿ ನೆಗೆಟಿವ್‌ ಬಂದಿದ್ದು, ಅರ್ಪಾಟ್‌ಮೆಂಟ್‌ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸವಿರುವವರನ್ನು ಕೊರೊನಾ ಸೋಂಕು ಪರೀಕ್ಷೆಗೆ ಒಳಪಡಿಸುತ್ತಿದ್ದೇವೆಂದರು.

ದಕ್ಷಿಣ ವಲಯದ ಜೆ.ಪಿ.ನಗರದ 3ನೇ ಹಂತದ 34 ವರ್ಷದ ವ್ಯಕ್ತಿಗೆ ಸಹ ರೂಪಾಂತರ ದೃಢಪಟ್ಟಿತ್ತು. ಇವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ ಐವರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 5 ಜನರ ಪರೀಕ್ಷಾ ವರದಿ ನೆಗೆಟಿವ್‌ ಬಂದಿದೆ ಎಂದು ದಕ್ಷಿಣ ವಲಯದ ಜಂಟಿ ಆಯುಕ್ತ ವೀರಭದ್ರ ಸ್ವಾಮಿ ತಿಳಿಸಿದ್ದಾರೆ.

ರೂಪಾಂತರ ಕೊರೊನಾ ಸೋಂಕು ದೃಢಪಟ್ಟ ವ್ಯಕ್ತಿ ಡಿ.19ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಕ್ಯಾಬ್‌ ಚಾಲಕನನ್ನು ಪ್ರತ್ಯೇಕವಾಗಿ ಕ್ವಾರಂಟೈನ್‌ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಜೆ.ಪಿ.ನಗರದಲ್ಲಿ ಸುರಕ್ಷತಾ ಕ್ರಮ: ಮಂಗಳವಾರ ಜೆ.ಪಿ.ನಗರದ ವ್ಯಕ್ತಿಗೆ ರೂಪಾಂತರ ಕೊರೊನಾ ಸೋಂಕು ದೃಢಪಟ್ಟರೂ, ಪಾಲಿಕೆಯ ಆರೋಗ್ಯಾಧಿಕಾರಿಗಳು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ. ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ನಂತರ ಬುಧವಾರ ಸೋಂಕು ದೃಢಪಟ್ಟ ವ್ಯಕ್ತಿಯ ಮನೆಯವರನ್ನು ಹೋಂ ಕ್ವಾರಂಟೈನ್‌ ಮಾಡಿದ್ದು, ಮನೆಗೆ ಹೋಂಕ್ವಾರಂಟೈನ್‌ಗೆ ಒಳಪಟ್ಟಿದ್ದಾರೆ ಎಂಬ ಭಿತ್ತಿಪತ್ರ ಅಂಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next